ಬೆಂಗಳೂರು: ಕೋವಿಡ್-19 ಸೋಂಕಿನ ಕಳವಳ ರಾಜ್ಯದಲ್ಲಿ ಮುಂದುವರಿದಿದೆ, ಇಂದು 120 ಜನರಿಗೆ ಸೋಂಕು ದೃಢವಾಗಿದ್ದು, ಕೋವಿಡ್ ಸೋಂಕಿತರ ಸಂಖ್ಯೆ ಆರು ಸಾವಿರ ದಾಟಿದೆ.
ರಾಜ್ಯದಲ್ಲಿ ಇಂದಿನ ಸೋಂಕಿತರ ಕಾರಣದಿಂದ ಒಟ್ಟು ಸೋಂಕಿತರ ಸಂಖ್ಯೆ 6041 ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಆರು ಸಾವಿರಕ್ಕಿಂತ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟ ದೇಶದ ಹತ್ತನೇ ರಾಜ್ಯವಾಗಿದೆ
ರಾಜ್ಯದಲ್ಲಿಂದು ಬೆಂಗಳೂರು ನಗರ ಜಿಲ್ಲೆಯಲ್ಲಿ ಅತೀ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ. ಇಲ್ಲಿ ಇಂದು 40 ಜನರಿಗೆ ಸೋಂಕು ದೃಢವಾಗಿದ್ದು ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 564ಕ್ಕೆ ಏರಿಕೆಯಾಗಿದೆ. ಉಳಿದಂತೆ ಯಾದಗಿರಿ ಜಿಲ್ಲೆಯಲ್ಲಿ 27 ಪ್ರಕರಣಗಳು, ವಿಜಯಪುರದಲ್ಲಿ13 ಸೋಂಕು ಪ್ರಕರಣಗಳು ದೃಢವಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ 11 ಮಂದಿಗೆ ಸೋಂಕು ದೃಢವಾಗಿದ್ದು, ಬೀದರ್ ನಲ್ಲಿ ಇಂದು ಐವರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಕರಾವಳಿ ಜಿಲ್ಲೆಯ ದಕ್ಷಿಣ ಕನ್ನಡದಲ್ಲಿ ಇಂದು ನಾಲ್ಕು ಜನರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಆದರೆ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಉಡುಪಿಯಲ್ಲಿ ಇಂದು ಸತತ ಎರಡನೇ ದಿನವೂ ಸೋಂಕಿತರು ಕಂಡುಬರದೇ ಇರುವುದು ಜಿಲ್ಲೆಯ ಜನರ ಸಮಾಧಾನಕ್ಕೆ ಕಾರಣವಾಗಿದೆ.
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 6041ಕ್ಕೆ ಏರಿಕೆಯಾಗಿದೆ, ಇಂದು 257 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 2862 ಮಂದಿ ಬಿಡುಗಡೆಯಾದಂತಾಗಿದೆ. ಇದುವರೆಗೆ 69 ಮಂದಿ ಸೋಂಕಿನ ಕಾರಣದಿಂದ ಮರಣ ಹೊಂದಿದ್ದಾರೆ. ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ.