ಉಡುಪಿ: ಕಳೆದ ಕೆಲವು ದಿನಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡು ಆತಂಕದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತೆ 18 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಮತ್ತು ಅಜೆಕಾರು ಠಾಣೆಯ ಎಎಸ್ ಐ ರಿಗೆ ಸೋಂಕು ದೃಢವಾಗಿದ್ದು, ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸರಿಗೆ ಸೋಂಕು ತಾಗಿರುವ ಕಾರಣ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಪೊಲೀಸರನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದೆ.
ಮಹಾರಾಷ್ಟ್ರದಿಂದ ಮರಳಿದ 14 ಜನರಲ್ಲಿ ಸೋಂಕು ದೃಢವಾಗಿದ್ದು, ಮೂವರು ಕ್ವಾರಂಟೈನ್ ಜೋನ್ ನ ಸಂಪರ್ಕ ಹೊಂದಿದವರು ಎನ್ನಲಾಗಿದೆ. ಒಬ್ಬರ ಸಂಪರ್ಕ ಪತ್ತೆ ಮಾಡಲಾಗುತ್ತಿದೆ.
ಸುಮಾರು ಒಂದು ತಿಂಗಳ ಕಾಲ ಯಾವುದೇ ಹೊಸ ಪ್ರಕರಣವಿಲ್ಲದೆ ನಿರಾಳವಾಗಿದ್ದ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸೋಂಕು ಪ್ರಕಣಗಳು ದಿನದಿಂದ ದಿನಕ್ಕೆ ಏರುತ್ತಿದೆ. ಜಿಲ್ಲೆಯಲ್ಲಿ ಶನಿವಾರ ಮೂರು ಕೋವಿಡ್-19 ಪ್ರಕರಣಗಳು ದೃಢವಾಗಿತ್ತು. ಇಂದು ಮತ್ತೆ 18 ಕೋವಿಡ್ -19 ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ 1959 ಇದ್ದ ಸೋಂಕಿನ ಸಂಖ್ಯೆ ಇಂದಿನ 97 ಹೊಸ ಪ್ರಕರಣಗಳ ಕಾರಣದಿಂದ 2056ಕ್ಕೆ ಏರಿಕೆಯಾಗಿದೆ. ಇದುವರೆಗೆ ರಾಜ್ಯದಲ್ಲಿ634 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 42 ಜನರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣಹೊಂದಿದ್ದಾರೆ.