ಮಣಿಪಾಲ: ಕೋವಿಡ್-19 ಸೋಂಕು ತಡೆಯಲು ಘೋಷಿಸಲಾಗಿರುವ ಲಾಕ್‌ಡೌನ್ ಪರಿಣಾಮವಾಗಿ ಹಳಿ ತಪ್ಪುತ್ತಿರುವ ಆರ್ಥಿಕತೆಯನ್ನು ಸರಿ ದಿಸೆಗೆ ತರಲು ಪೋಲೆಂಡ್ ಸರಕಾರ 212 ಬಿಲಿಯನ್ (ಪೋಲಿಶ್ ರೂಪಾಯಿ) ಮೊತ್ತದ ಆರ್ಥಿಕ ನೆರವನ್ನು ಪ್ರಕಟಿಸಿದೆ.
ಆರೋಗ್ಯ ಸರಂಕ್ಷಣೆಯ ಜತೆ ದೇಶದ ಆರ್ಥಿಕ ಸುಧಾರಣೆಯೂ ಪ್ರಮುಖವಾಗಿದ್ದು, ದೇಶದ ಆರ್ಥಿಕತೆಯನ್ನು ರಕ್ಷಿಸಲು ಪೋಲಿಷ್ ಈ ಬಿಕ್ಕಟ್ಟು ನಿರ್ವಹಣೆ ಪರಿಹಾರ ನಿಧಿಯನ್ನು ನೀಡಲಾಗುತ್ತಿದೆ ಎಂದು ಸರಕಾರ ಘೋಷಿಸಿದೆ.
212 ಬಿಲಿಯನ್ ಮೊತ್ತದ ಈ ಪ್ಯಾಕೇಜ್‌ನ ಮೂಲಕ ಪೋಲಿಷ್ ಆರ್ಥಿಕತೆ, ವ್ಯವಹಾರಗಳು ಮತ್ತು ಉದ್ಯಮದಾರರಿಗೆ ಆಗಿರುವ ನಷ್ಟವನ್ನು ಭರಿಸಲು ಆರ್ಥಿಕ ನೆರವು ಒದಗಿಸಲಾಗುವುದು. ಪ್ರಮುಖವಾಗಿ ದೇಶದಲ್ಲಿ ಉದ್ಯೋಗ ಕಡಿತವಾಗದಂತೆ ಜಾಗ್ರತೆ ವಹಿಸಿದ್ದು, ಪ್ರಸ್ತುತ ಮತ್ತು ಮುಂಬರುವ ತಿಂಗಳುಗಳಲ್ಲೂ ಉದ್ಯೋಗಿಗಳ ಕೆಲಸಕ್ಕೆ ತೊಂದರೆಯಾಗದಂತೆ ಯೋಜನೆ ರೂಪಿಸಲಾಗಿದೆ ಎಂದಿದೆ.
ವ್ಯವಹಾರಸ್ಥರಿಗೆ ಸಣ್ಣ ಮಟ್ಟದ ಸಾಲ ಯೋಜನೆ ಮತ್ತು ಖಾಸಗಿ ಸೇರಿದಂತೆ ಇತರೆ ಲೋನ್ ಮೊತ್ತವನ್ನು ಪಾವತಿಸಲು ಅಸಾಧ್ಯ ವಾಗುವವರಿಗೆ ವಿನಾಯಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ಕಂತುಗಳ ಮೂಲಕ ಪಾವತಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಹಣಕಾಸು ನೀತಿ ಮಂಡಳಿ, ತನ್ನ ನಿಗದಿತ ದರದ ಅರ್ಧದಷ್ಟು ಬಡ್ಡಿದರವನ್ನು ಇಳಿಸಿದೆ. ಆ ಮೂಲಕ ನ್ಯಾಷನಲ್ ಬ್ಯಾಂಕ್ ಆಫ್ ಪೋಲೆಂಡ್‌ನ ಅಧಿಕೃತ ನಗದು ದರವನ್ನೇ ಪಾಲಿಸಿದಂತಾಗಿದೆ.
ಆರೋಗ್ಯ ಸೇವೆಯನ್ನು ಮತ್ತಷ್ಟು ಸದೃಢಗೊಳಿಸಲು ಆರೋಗ್ಯ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಗೆ ಗಮನಾರ್ಹ ಮೊತ್ತವನ್ನು ನೀಡುವುದಾಗಿ ಸರಕಾರ ತಿಳಿಸಿದೆ.
ಪ್ರಧಾನಿ ಮತೊಶ್ ಮೊರಾವಿಯಸ್ಕಿ, ಬಿಕ್ಕಟ್ಟು ನಿರ್ವಹಣಾ ಪ್ಯಾಕೇಜ್ ಅನ್ನು ಸುರಕ್ಷಾ ಕಾರ್ಯಕ್ರಮ ಎಂದು ಕರೆದಿದ್ದಾರೆ. ಇದರೊಂದಿಗೆ ಐದು ಪ್ರಮುಖ ವಿಷಯಗಳಿಗೆ ಒತ್ತು ನೀಡಿದ್ದು, ನೌಕರರ ಸುರಕ್ಷತೆ, ಕಂಪನಿಗಳಿಗೆ ಹಣಕಾಸು ನೆರವು, ಆರೋಗ್ಯ ಸೇವೆಗಳ ಬೆಂಬಲ, ಆರ್ಥಿಕ ಭದ್ರತೆಯ ಖಾತ್ರಿ, ಮೂಲಸೌಕರ್ಯ, ಡಿಜಿಟಲೀಕರಣ ಹಾಗೂ ತಂತ್ರಜ್ಞಾನದಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಭದ್ರಗೊಳಿಸುವುದಾಗಿ ತಿಳಿಸಿದ್ದಾರೆ.