ಬೈಂದೂರು: ಕೋವಿಡ್ 19 ಭೀತಿ ಗ್ರಾಮೀಣ ಭಾಗಗಳಿಗೂ ಬಿಸಿ ಮುಟ್ಟಿಸಿದೆ. ಬೇಸಗೆ ನಿರೀಕ್ಷೆಯಲ್ಲಿ ಬೆಳೆಸಿದ ತರಕಾರಿ, ಸೌತೆಕಾಯಿ, ಸೊಪ್ಪುಗಳನ್ನು ತೋಟಕ್ಕೆ ಸುರಿಯಬೇಕಾದ ಪರಿಸ್ಥಿತಿ ಬಂದಿದೆ.ಅದರಲ್ಲೂ ಲಕ್ಷಾಂತರ ವ್ಯಯಮಾಡಿ ಅನಾನಸು ಬೆಳೆದ ಕೃಷಿಕರು ಫಲ ಬರುವ ಹೊತ್ತಿಗೆ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಮಾರುಕಟ್ಟೆಯಲ್ಲಿ ಉಚಿತವಾಗಿ ಕೊಟ್ಟರು ಅನಾನಸು ಕೇಳುವವರಿಲ್ಲದ ಪರಿಸ್ಥಿತಿ ಬಂದಿದೆ. ಒಟ್ಟಾರೆ ಯಾಗಿ ತರಕಾರಿ ಹಣ್ಣು ಹಂಪಲು ಬೆಳೆದ ರೈತರಿಗೆ ಬೇಸಗೆ ಬಿಸಿಲಿಗಿಂತ ಕೋವಿಡ್ 19 ಬಿಸಿ ಅಧಿಕವಾಗಿದೆ.
ಸಾಮಾನ್ಯವಾಗಿ ಅನಾನಸು, ಕುಂಬಳಕಾಯಿ, ಸೌತೆಕಾಯಿ, ಕಲ್ಲಂಗಡಿ ಮುಂತಾದವುಗಳು ಬೇಸಗೆಯಲ್ಲಿ ಉತ್ತಮ ಬೇಡಿಕೆ ಇರುತ್ತದೆ. ಅನಾನಸು ಒಂದು ವರ್ಷದ ಬೆಳೆಯಾಗಿದೆ. ಬೈಂದೂರು ತಾಲೂಕಿನಲ್ಲಿ ಹಲವು ಎಕರೆ ಅನಾನಸು ಬೆಳೆ ಬೆಳೆಯಲಾಗುತ್ತಿದೆ. ಈ ಹಣ್ಣುಗಳನ್ನು ಕೇರಳ, ದೆಹಲಿ ಹಾಗೂ ಮುಂಬಯಿಗೆ ಕಳುಹಿಸಲಾಗುತ್ತದೆ. ಆದರೆ ಈ ವರ್ಷ ಹಣ್ಣು ಮಾರುವ ಸಮಯದಲ್ಲಿ ಕೋವಿಡ್ 19 ಭೀತಿ ಮೂಡಿಸಿದೆ. ಹೀಗಾಗಿ ಬಹುತೇಕ ಮಾರುಕಟ್ಟೆ ಬಂದ್ ಆಗಿದೆ. ಸ್ಥಳೀಯವಾಗಿ ಸಂತೆ, ಮಾರ್ಕೆಟ್ ಕೂಡ ತಟಸ್ಥವಾಗಿದೆ.
ಹೀಗಾಗಿ 30 ರೂ.ಗೆ ದೊರೆಯುತ್ತಿದ್ದ ಅನಾನಸು ಬೆಳೆ ಹತ್ತು ರೂಪಾಯಿಗೂ ಕೇಳುವವರಿಲ್ಲವಾಗಿದೆ. ಸರಾಸರಿ 1 ಕೆ.ಜಿ ಅನಾನಸು ಬೆಳೆಯಲು 15ರಿಂದ 18 ರೂ. ಖರ್ಚು ಇದೆ. ಕಳೆದ ವರ್ಷ ಕೂಡ ನಿಫಾ ವೈರಸ್ ನಿಂದ ಬಹುತೇಕ ಬೆಳೆಗಾರರು ಪೆಟ್ಟು ತಿಂದಿದ್ದರು. ಈ ವರ್ಷ ಕೂಡ ಕೋವಿಡ್ 19 ರೈತರನ್ನು ಕಂಗೆಡಿಸಿದೆ.
ಎಪ್ರಿಲ್, ಮೇ ತಿಂಗಳಲ್ಲಿ ದೇವಸ್ಥಾನ, ವಾರ್ಷಿಕೋತ್ಸವ, ಜಾತ್ರೆ, ಹಬ್ಬ, ಮದುವೆ, ಪೂಜೆ ಮುಂತಾದ ಕಾರ್ಯಕ್ರಮಗಳಾಗುತ್ತವೆ. ಈ ಸಮಯದಲ್ಲಿ ಬಾಳೆಎಲೆ, ತರಕಾರಿ, ಸೌತೆಕಾಯಿಗೆ ಉತ್ತಮ ಬೇಡಿಕೆ ಇರುತ್ತಿತ್ತು. ಈಗ ಪೇಟೆಗೆ ಜನ ಬರುವಂತಿಲ್ಲ. ಸಂತೆ ನಡೆಯುತ್ತಿಲ್ಲ ಹೀಗಾಗಿ ಹರಿವೆ, ಬಸಳೆ, ತೊಂಡೆ, ನುಗ್ಗೆ, ಬೆಂಡೆ, ಬದನೆ ಬೆಳೆಯುವ ರೈತರು ಕೂಡ ನಷ್ಟ ಅನುಭವಿಸಿದ್ದಾರೆ. ಬಹುತೇಕ ಬೆಳೆಗಳು ಕಟಾವು ಮಾಡಲಾಗಿದೆ. ಒಂದೆಡೆ ಮತ್ಸÂಕ್ಷಾಮ ಇನ್ನೊಂದೆಡೆ ಕೋಳಿ ಮಾಂಸದ ಬೇಡಿಕೆ ಇಲ್ಲದಿರುವುದು ಇದರ ನಡುವೆ ತರಕಾರಿ ಕೂಡ ಬೇಡಿಕೆ ಇಲ್ಲದೆ ಸಣ್ಣ ಪುಟ್ಟ ರೈತರು ಹೈರಾಣಾಗಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಮುಂದುವರಿಯಲು ಆತಂಕ
ಬಹುನಿರೀಕ್ಷೆಯಿಂದ ಕೃಷಿಕರು ಬೆಳೆದ ಅನಾನಸು ಬೆಳೆಯಿಂದ ಕಳೆದೆರಡು ವರ್ಷಗಳಿಂದ ಕೈ ಸುಟ್ಟುಕೊಳ್ಳುವಂತಾಗಿದೆ. ಕಳೆದ ವರ್ಷ ನಿಫಾ ವೈರಸ್ ಬಂದರೆ ಈ ವರ್ಷ ಕೋವಿಡ್ 19 ಆತಂಕವಾಗಿದೆ. ವರ್ಷಕ್ಕೊಮ್ಮೆ ಬೆಳೆಯುವ ಈ ಬೆಳೆಗೆ ಈ ರೀತಿಯಾದರೆ ಕೃಷಿ ಕ್ಷೇತ್ರದಲ್ಲಿ ಮುಂದುವರಿಯಲು ಯುವಜನತೆ ಆತಂಕಪಡುವಂತಾಗಿದೆ.
-ಜೋಜಿ, ಅನಾನಸು ಬೆಳೆಗಾರರು ಆಲಂದೂರು.
-ಅರುಣ ಕುಮಾರ್ ಶಿರೂರು