ಬೆಂಗಳೂರು: ಕೋವಿಡ್ 19 ಸೋಂಕಿತರೊಬ್ಬರ ಶವ ಮೂರು ತಾಸು ಮಳೆಯಲ್ಲೇ ಬಿದ್ದ ಘಟನೆ ಹಸಿಯಾಗಿರುವಾಗಲೇ, ಕೋವಿಡ್ 19 ರೋಗಿಯೊಬ್ಬರು ನಡುರಸ್ತೆಯಲ್ಲೇ ಒದ್ದಾಡಿ ಪ್ರಾಣಬಿಟ್ಟ ಮನಕಲಕುವ ಮತ್ತೂಂದು ಘಟನೆಗೆ ಬುಧವಾರ ಬೆಂಗಳೂರು ಸಾಕ್ಷಿಯಾಗಿದೆ. ನಗರದ ಲಗ್ಗೆರೆಯ ಉದಯಗಿರಿ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು, ಮೃತಪಟ್ಟವರನ್ನು ರಾಜು (56) ಎಂದು ಗುರುತಿಸಲಾಗಿದೆ. ವಾಯುವಿಹಾರದ ವೇಳೆ ದಿಢೀರ್ ಕುಸಿದುಬಿದ್ದಿದ್ದಾರೆ. ಆದರೆ, ತಕ್ಷಣ ಯಾರೊಬ್ಬರೂ ಸಹಾಯಕ್ಕೆ ಧಾವಿಸದಿರುವುದರಿಂದ ಒದ್ದಾಡಿ ಪ್ರಾಣಬಿಟ್ಟಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ನಂತರ ಪೀಣ್ಯ ಪೊಲೀಸರು ಮೃತರ ಗುರುತು ಪತ್ತೆಹಚ್ಚಿ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆಸಿದ್ದಾರೆ. ಮೃತರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಬೆಳಗಿನ ವಾಕಿಂಗ್ ವೇಳೆ ಕುಸಿದು ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಪಾರ್ಥಿವ ಶರೀರ ಕೊಂಡೊಯ್ಯಲು ಪೊಲೀಸರು ಆ್ಯಂಬುಲೆನ್ಸ್‌ಗೆ ಕರೆ ಮಾಡಿ 6 ಗಂಟೆ ನಂತರ ಸ್ಥಳಕ್ಕೆ ಆಗಮಿಸಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಬಳಿಕ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಆ್ಯಂಬುಲೆನ್ಸ್‌ನಲ್ಲೇ ಸಾವು: ಈ ಮಧ್ಯೆ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದಾಡಿ, ಕೊನೆಗೆ ಆ್ಯಂಬುಲೆನ್ಸ್‌ನಲ್ಲೇ ಕೊನೆಯುಸಿರೆಳೆದ ಮತ್ತೂಂದು ಘಟನೆ ಬುಧವಾರ ನಡೆದಿದೆ. ಉಸಿರಾಟದ ಸಮಸ್ಯೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ವಾಲ್ಮೀಕಿ ನಗರದ ನಿವಾಸಿ ಪ್ರಹ್ಲಾದ್ (55) ಅವರನ್ನು ಬೆಡ್‌ಗಳ ಕೊರತೆ ನೆಪದಲ್ಲಿ ಚಿಕಿತ್ಸೆ ನೀಡದಿರುವುದು ತಿಳಿದುಬಂದಿದೆ. ಪ್ರಹ್ಲಾದ್ ಅವರಿಗೆ ಬೆಳಗ್ಗೆ 7ರ ಸುಮಾರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ ಗಂಟೆಯಾದರೂ ಬಂದಿಲ್ಲ. ಅದಕ್ಕಾಗಿ ಆಟೋದಲ್ಲಿಯೇ ಕಿಮ್ಸ್ ಆಸ್ಪತ್ರೆಗೆ ತೆರಳಿದ್ದಾರೆ.
ಅಲ್ಲಿ ಬೆಡ್‌ಗಳ ಕೊರತೆ ಇದೆ ಎಂದು ಆ್ಯಂಬುಲೆನ್ಸ್ ಕೊಟ್ಟು, ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ತೆರಳಲು ಸೂಚಿಸಿದ್ದಾರೆ. ಆದರೆ, ಇಎಸ್‌ಐ ಆಸ್ಪತ್ರೆಯಲ್ಲಿ ಕೂಡ ಬೆಡ್‌ಗಳಿಲ್ಲ ಎಂದು ಜಾಲಹಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಹೇಳಿದ್ದಾರೆ. ಅಲ್ಲಿಯೂ ಹಾಸಿಗೆಗಳ ನೆಪಯೊಡ್ಡಿ ಕಳುಹಿಸಿದ್ದು, ಮಧ್ಯಾಹ್ನದ ವೇಳೆಗೆ ರೋಗಿಯು ಆ್ಯಂಬುಲೆನ್ಸ್‌ನಲ್ಲೇ ಮೃತಪಟ್ಟಿದ್ದಾರೆ. “ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದರೆ, ಪ್ರಹ್ಲಾದ್ ಬದುಕಿ ಉಳಿಯುತ್ತಿದ್ದರು. ಸೌಜನ್ಯಕ್ಕಾದರೂ ಪ್ರಾಥಮಿಕ ಚಿಕಿತ್ಸೆ ನೀಡಿಲ್ಲ. ಮಹಾನಗರದಲ್ಲೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲಿಲ್ಲವೆಂದರೆ ಹೇಗೆ? ಎಂದು ಮೃತರ ಕುಟುಂಬದ ಸದಸ್ಯ ರಾಮಕೃಷ್ಣ ಆರೋಪಿಸಿದ್ದಾರೆ.
ಆಸ್ಪತ್ರೆಗಳಿಗೆ ನೋಟಿಸ್; ಸಚಿವ: ಈ ಕುರಿತು ಪ್ರತಿಕ್ರಿಯಿಸಿದ ವೈದ್ಯಕೀಯ ಸಚಿವ ಡಾ.ಸುಧಾಕರ್, “ಯಾವುದೇ ರೋಗಿಗೆ ತುರ್ತು ಚಿಕಿತ್ಸೆ ನೀಡುವುದು ಆಸ್ಪತ್ರೆಗಳ ಜವಾಬ್ದಾರಿಯಾಗಿದ್ದು, ಚಿಕಿತ್ಸೆ ನೀಡದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿರುವುದು ಖಂಡನೀಯ. ಈ ಆಸ್ಪತ್ರೆಗಳಿಗೆ ನೋಟಿಸ್ ನೀಡಿ, ತನಿಖೆ ನಡೆಸಲಾಗುವುದು. ಈ ಸಂಬಂಧ ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಮನೆಗೇ ಹೋದ ಸೋಂಕಿತ!: ಸೋಂಕಿತನೊಬ್ಬ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದು ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಯತ್ತ ಧಾವಿಸಿದ ಪ್ರಸಂಗ ನಡೆದಿದೆ! ಚಿಕಿತ್ಸೆಗಾಗಿ ಬೆಡ್ ಸಿಗದ ಹಿನ್ನೆಲೆಯಲ್ಲಿ ಕೋವಿಡ್ 19 ರೋಗಿಯೊಬ್ಬ ಆಟೋದಲ್ಲೇ ಯಾತನೆ ಅನುಭವಿಸಿ ಕೊನೆಗೆ ಸಿಎಂ ಮನೆ ಬಳಿಗೆ ತೆರಳಿ ಅಲ್ಲಿನ ಪೊಲೀಸರ ಬಳಿ ಅಲವತ್ತುಕೊಂಡಿದ್ದಾನೆ. ಬೆಂಗಳೂರಿನ ಕೆ.ಜಿ. ಹಳ್ಳಿ ನಿವಾಸಿಯಾಗಿರುವ ವ್ಯಕ್ತಿ, ಸೋಂಕು ತಗುಲಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಲು ತೆರಳಿದ್ದಾನೆ. ಆದರೆ, ಬೆಡ್ ಕೊರತೆ ನೆಪದಲ್ಲಿ ವೈದ್ಯರು ಆಸ್ಪತ್ರೆಗೆ ದಾಖಲು ಮಾಡಿಕೊಂಡಿಲ್ಲ. ಆಟೋದಲ್ಲೇ ನರಕಯಾತನೆ ಅನುಭವಿಸಿದ ಆತ ಆಟೋದಲ್ಲೇ ಸುತ್ತಾಡಿ ಸಿಎಂ ಮನೆಗೆ ತೆರಳಿದ್ದಾನೆ. ಕೊನೆಗೆ ಸೋಂಕಿತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.