ಬೆಂಗಳೂರು: ಕೋವಿಡ್ 19 ಮಹಾಮಾರಿಯ ಉಪಟಳದಿಂದ ಇಡೀ ದೇಶವೇ 21 ದಿನಗಳ ಕಾಲ ಲಾಕ್ ಡೌನ್ ಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಅವಶ್ಯಕ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳು ಹಾಗೂ ಸೇವೆಗಳ ಪೂರೈಕೆ ಸ್ಥಗಿತಗೊಂಡಿದೆ.
ಈ ಲಾಕ್ ಡೌನ್ ಪರಿಸ್ಥಿತಿಯ ನಿಜವಾದ ಬಿಸಿ ಮುಟ್ಟಿರುವುದು ದೇಶಾದ್ಯಂತ ಇರುವ ಎಣ್ಣೆ ಪ್ರಿಯರಿಗೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಎಲ್ಲಾ ಬಾರ್ ಗಳು ಹಾಗೂ ವೈನ್ ಶಾಪ್ ಗಳು ಮೊನ್ನೆಯಿಂದಲೇ ಬಾಗಿಲೆಳೆದುಕೊಂಡಿರುವುದರಿಂದ ಕುಡುಕರ ಸಂಕಷ್ಟ ಹೇಳತೀರದಾಗಿದೆ.
ಆದರೆ ಇಂದು ವಾಟ್ಸ್ಯಾಪ್ ನಲ್ಲಿ ಹರಿದಾಡತೊಡಗಿದ ಆ ಒಂದು ಆದೇಶದ ಪ್ರತಿ ಕುಡುಕರ ಕಣ್ಣುಗಳಲ್ಲಿ ಸಾವಿರ ವೋಲ್ಟ್ ವಿದ್ಯುತ್ ಸಂಚಾರದ ಬೆಳಕನ್ನು ತಂದೊಡ್ಡಿದ್ದು ಮಾತ್ರ ಸುಳ್ಳಲ್ಲ.
ಹೌದು, ಕರ್ನಾಟಕ ಸರಕಾರ ಇಂದಿನಿಂದ ಅಂದರೆ
ಮಾರ್ಚ್ 29ರಿಂದ ಪ್ರತೀದಿನ ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 5.30ರವರೆಗೆ ರಾಜ್ಯದ ಎಲ್ಲಾ ವೈನ್ ಶಾಪ್ ಗಳನ್ನು ತೆರೆಯಲು ಅನುಮತಿ ನೀಡಿದೆ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಪ್ರತೀ ವೈನ್ ಶಾಪ್ ಗೆ 5 ಅಬಕಾರಿ ಕಾನ್ ಸ್ಟೇಬಲ್ ಗಳನ್ನು ಈ ಸಂದರ್ಭದಲ್ಲಿ ನಿಯೋಜಿಸಬೇಕು. ಮತ್ತು ಇದನ್ನು ಉಲ್ಲಂಘಿಸಿದಲ್ಲಿ ಅಂತವರನ್ನು ಐಪಿಸಿ ಸೆಕ್ಷನ್ 386/1982ರಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು. ಇದನ್ನು ನೋಡಿದ ಎಣ್ಣೆಪ್ರಿಯರು ಒಮ್ಮೆ ಗಕ್ಕನೆ ಎದ್ದು ಕುಳಿತು ವೈನ್ ಶಾಪ್ ಗೆ ಹೋಗಲು ತಯಾರಾದರು.
ಆದರೆ ನಿಜವಾಗಿ ಇದು ನಮ್ಮ ನೆರೆಯ ತೆಲಂಗಾಣ ರಾಜ್ಯದಲ್ಲಿ ಹೊರಡಿಸಲಾಗಿತ್ತು ಎನ್ನಲಾಗಿರುವ ಆದೇಶದ ಪ್ರತಿ. ಅದನ್ನು ಯಾರೋ ಪುಣ್ಯಾತ್ಮರು ನೀಟಾಗಿ ತಿದ್ದುಪಡಿ ಮಾಡಿ ಕರ್ನಾಟಕ ರಾಜ್ಯಸರಕಾರ ಹೊರಡಿಸಿರುವ ಆದೇಶದಂತೆ ಮಾರ್ಪಡಿಸಿದ್ದಾರೆ. ಆದರೆ ಯಡವಟ್ಟಾಗಿದ್ದು ಎಲ್ಲೆಂದರೆ, ಹೀಗೆ ತಿದ್ದುಪಡಿ ಮಾಡುವ ಭರದಲ್ಲಿ ಆ ಪುಣ್ಯಾತ್ಮರು ಸರಕಾರದ ಅಧಿಕೃತ ಮೊಹರನ್ನು ಬದಲಾಯಿಸಲು ಮರೆತಿದ್ದರು. ಅದರಲ್ಲಿ ತೆಲಂಗಾಣ ಸರಕಾರದ ಮೊಹರನ್ನೇ ಹಾಗೇ ಉಳಿಸಿಕೊಂಡಿರುವುದರಿಂದ ಇದರ ಸಾಚಾತನ ಬಯಲಾಗಿದೆ.
ಈ ಸುಳ್ಳು ಆದೇಶದ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಮಹಾನುಭಾವರ ವಿರುದ್ಧ ಇದೀಗ ದೂರು ನೀಡಲು ರಾಜ್ಯದ ಮದ್ಯ ಮಾರಾಟಗಾರರ ಸಂಘ ನಿರ್ಧರಿಸಿದೆ ಎಂಬ ಸುದ್ದಿಯೂ ಲಭಿಸಿದೆ. ಅಂತೂ ಇಂತು ಈ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಯಾವ ಸುದ್ದಿಗಳನ್ನು ನಂಬುವುದು ಯಾವುದನ್ನು ನಂಬದಿರುವುದು ಎಂಬ ಗೊಂದಲ ಜನಸಾಮಾನ್ಯರದ್ದಾಗಿದೆ.