ಭಾರತದಲ್ಲಿ ಕೋವಿಡ್ 19 ರೋಗಿಗಳ ಸಂಖ್ಯೆ ಎಷ್ಟು ವೇಗವಾಗಿ ಬೆಳೆಯುತ್ತಿದೆಯೆಂದರೆ ಈ ಏರುತ್ತಿರುವ ಪ್ರಕರಣಗಳ ಸಂಖ್ಯೆ ನೋಡಿದಾಗ, ದೇಶದಲ್ಲಿ ಕೋವಿಡ್-19 ಸಮುದಾಯ ಪ್ರಸರಣದ ರೂಪ ಪಡೆದಿದೆಯೇನೋ ಎಂದು ಅನುಮಾನ-ಆತಂಕ ಕಾಡದೇ ಇರದು.
ಕಳೆದ ಕೆಲವು ದಿನಗಳಿಂದಂತೂ ದೇಶದಲ್ಲಿ ನಿತ್ಯ 50 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈಗ ದೇಶದ ಗೃಹ ಸಚಿವರೂ ಸೋಂಕಿತರಾಗಿದ್ದಾರೆ.
ಈ ಕೋವಿಡ್ 19 ವೈರಸ್ ವೈದ್ಯರು, ಪೊಲೀಸರು, ಗ್ರಾಮೀಣ ಜನರು, ಸಿನೆಮಾ ತಾರೆಯರು ಸೇರಿದಂತೆ ಯಾವ ಜನವರ್ಗವನ್ನೂ ಬಿಟ್ಟಿಲ್ಲ. ಪ್ರಧಾನಿ ಮೋದಿಯವರು ಈ ಹಿಂದೆ ಹೇಳಿದಂತೆ ಈ ರೋಗವು ಜಾತಿ, ಮತ, ಧರ್ಮ, ಸ್ತರಗಳನ್ನು ನೋಡುವುದಿಲ್ಲ. ಈ ಕಾರಣಕ್ಕಾಗಿಯೇ ಸಾಮಾಜಿಕ ಅಂತರಗಳ ಪರಿಪಾಲನೆ, ಮುನ್ನೆಚ್ಚರಿಕೆ ಕ್ರಮಗಳ ಕಟ್ಟುನಿಟ್ಟಾದ ಪಾಲನೆ ಅತ್ಯಗತ್ಯವಾಗಿದೆ.
ಕೋವಿಡ್-19 ಅಂಕಿಸಂಖ್ಯೆಗಳು, ಆ ರೋಗದ ಪ್ರಸರಣದ ಪರಿ ಎಲ್ಲೆಡೆಯೂ ಒಂದೇ ರೀತಿಯಲ್ಲಿ ಇಲ್ಲ. ಕೆಲವು ಸಮಯದ ಹಿಂದೆ ದೇಶದ ಪ್ರಮುಖ ಹಾಟ್ ಸ್ಪಾಟ್‌ಗಳಲ್ಲಿ ಒಂದಾಗಿದ್ದ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೀಗ ಪರಿಸ್ಥಿತಿ ಸುಧಾರಿಸಿದೆ. ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಕೋವಿಡ್ ಹಾವಳಿ ನಿಲ್ಲುವ ಸೂಚನೆಯೇ ಕಾಣುತ್ತಿಲ್ಲ. ಇದುವರೆಗೆ ಆ ರಾಜ್ಯದಲ್ಲಿ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಆರಂಭದಿಂದಲೂ ಕೋವಿಡ್ ತಡೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದ ಕರ್ನಾಟಕವು ಸಕ್ರಿಯ ಪ್ರಕರಣಗಳಲ್ಲಿ ದಿಲ್ಲಿಗಿಂತಲೂ ಮುಂದಿರುವುದು ಆತಂಕದ ವಿಷಯ. ನೆರೆಯ ಆಂಧ್ರಪ್ರದೇಶದಲ್ಲೂ ಸಕ್ರಿಯ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ.
ಒಂದಂತೂ ಸತ್ಯ. ಕೆಲವು ಸಮಯದಲ್ಲಿ ನಿತ್ಯ ಟೆಸ್ಟಿಂಗ್ ಪ್ರಮಾಣದಲ್ಲಿ ಹೆಚ್ಚಳವಾಗಿರುವುದೂ ಸಹ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದಕ್ಕೆ ಕಾರಣ. ಗಮನಿಸಬೇಕಾದ ಸಂಗತಿಯೆಂದರೆ, ರಾಜ್ಯದಲ್ಲಿ ಕೆಲವು ದಿನಗಳಿಂದ 30 ಸಾವಿರಕ್ಕೂ ಅಧಿಕ ಟೆಸ್ಟಿಂಗ್‌ಗಳನ್ನು ನಡೆಸಲಾಗುತ್ತಿದೆ ಎನ್ನುವುದು. ಆದರೂ ಈಗಿನ ಟಾಪ್ 5 ‘ಸಕ್ರಿಯ’ ಹಾಟ್ ಸ್ಪಾಟ್‌ಗಳನ್ನು ಪರಿಗಣಿಸಿದಾಗ ಕರ್ನಾಟಕಕ್ಕಿಂತ ಉಳಿದ ರಾಜ್ಯಗಳು ಹೆಚ್ಚಿನ ಪ್ರಮಾಣದ ಟೆಸ್ಟಿಂಗ್ ನಡೆಸಿವೆ.
ಆದರೆ ಈಗಲೂ ಪರೀಕ್ಷೆಗೊಳಪಡದ ಸೋಂಕಿತರು ಎಷ್ಟು ಪ್ರಮಾಣದಲ್ಲಿದ್ದಾರೋ, ಇವರೆಲ್ಲ ಎಷ್ಟು ಜನರಿಗೆ ರೋಗ ಹರಡುತ್ತಿದ್ದಾರೋ ಎನ್ನುವುದು ತಿಳಿಯದು. ಈ ಕಾರಣಕ್ಕಾಗಿಯೇ, ಎಲ್ಲ ರಾಜ್ಯಗಳೂ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ನಿತ್ಯಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ.
ರಾಜ್ಯ ಸರಕಾರಗಳು ಟೆಸ್ಟಿಂಗ್ ಜತೆ ಜತೆಗೇ ಮಾಡಬೇಕಾದ ಮತ್ತೊಂದು ಮುಖ್ಯ ಕೆಲಸವೆಂದರೆ, ಕ್ವಾರಂಟೈನ್ ಸೆಂಟರ್‌ಗಳು, ಆರೋಗ್ಯ ಕೇಂದ್ರಗಳು ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿನ ಸ್ಥಿತಿಯನ್ನು ಸುಧಾರಿಸುವುದು. ರಾಜ್ಯದ ವಿಷಯಕ್ಕೇ ಬಂದರೆ, ನಿತ್ಯವೂ ಒಂದಲ್ಲ ಒಂದು ಭಾಗದಲ್ಲಿ ಜನರು, ಆಸ್ಪತ್ರೆಗಳು ಅಥವಾ ಸೆಂಟರ್‌ಗಳಲ್ಲಿನ ದುರವಸ್ಥೆಯ ಬಗ್ಗೆ ದೂರುತ್ತಲೇ ಇದ್ದಾರೆ.
ಕೆಲವೆಡೆಯಂತೂ ರೋಗಿಗಳಿಗೆ ಸರಿಯಾಗಿ ಊಟದ ವ್ಯವಸ್ಥೆಯೂ ಇಲ್ಲದಂಥ ಸ್ಥಿತಿ ಇದೆ. ರೋಗಿಗಳಿಗೆ ರೋಗಕ್ಕಿಂತಲೂ ಈ ಅಸಡ್ಡೆ ಹೆಚ್ಚು ಯಾತನೆ ಕೊಡುತ್ತಿದೆ. ಈ ಕಾರಣಕ್ಕಾಗಿಯೇ ನಿತ್ಯ ವೀಡಿಯೋ ಮಾಡಿ ಆರೋಗ್ಯ ವ್ಯವಸ್ಥೆಯ ದುರವಸ್ಥೆಯ ಬಗ್ಗೆ ದೂರ ಲಾರಂಭಿಸಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಜನ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದಕ್ಕೂ ಹಿಂಜರಿಯುವಂಥ ಸ್ಥಿತಿ ಬರಬಹುದು. ಈ ಕಾರಣಕ್ಕಾಗಿಯೇ ಎಲ್ಲ ಕೇಂದ್ರಗಳಲ್ಲೂ ರೋಗಿಗಳಿಗೆ ಸೂಕ್ತ ಆರೈಕೆ ಸಿಗುವಂತೆ ರಾಜ್ಯ ಸರಕಾರ, ಆರೋಗ್ಯ ಇಲಾಖೆ ಹಾಗೂ ಆಯಾ ಜಿಲ್ಲಾಡಳಿತಗಳು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.