Advertisement
ಜನ ಸಾಮಾನ್ಯರು, ಜನನಾಯಕರು ಈ ವೈರಸ್‌ಗೆ ತುತ್ತಾಗುತ್ತಲೇ ಇದ್ದಾರೆ.
Related Articles
Advertisement
ಅನ್ಯ ರೋಗಗಳಿಗೆ ಹೋಲಿಸಿದರೆ ಕೋವಿಡ್ ಮರಣ ದರ ಕಡಿಮೆಯಿದೆ ಎನ್ನುವುದೇನೋ ಸತ್ಯವೇ, ಆದರೆ ಪ್ರತಿ ಜೀವವೂ ಅಮೂಲ್ಯವಾಗಿರುವುದರಿಂದಾಗಿ ಜನಸಾಮಾನ್ಯರಾಗಿರಲಿ, ರಾಜಕಾರಣಿಯಾಗಿರಲಿ ಒಂದೊಂದು ಸಾವೂ ಕೂಡ ಸಂಬಂಧಿಕರಿಗೆ, ಮನೆಯವರಿಗೆ, ಬೆಂಬಲಿಗರಿಗೆ ಅಪರಿಮಿತ ಯಾತನೆಯನ್ನು ಕೊಡುವಂಥದ್ದು.
ಅತ್ಯುತ್ತಮ ಆರೋಗ್ಯ ಸೇವೆ ಪಡೆಯುವ ಜನನಾಯಕರಿಗೇ ಹೀಗೆ ಆಗುತ್ತಿರುವಾಗ, ಜನಸಾಮಾನ್ಯರ ಪಾಡೇನು ಎನ್ನುವ ಪ್ರಶ್ನೆ ಎದುರಾಗುತ್ತಿದೆ. ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾದ ಅಂಶವೆಂದರೆ ಕೋವಿಡ್ 19ನ ಗುಣಲಕ್ಷಣಗಳು ಅದು ಮಾಡಬಹುದಾದ ಹಾನಿಯ ಬಗ್ಗೆ ಈಗಲೂ ವಿಜ್ಞಾನ ವಲಯದಲ್ಲಿ ಒಂದು ಸ್ಪಷ್ಟತೆ ಮೂಡಿಲ್ಲ, ಅದಕ್ಕೆ ಲಸಿಕೆಯೂ ಸಿದ್ಧವಾಗಿಲ್ಲ, ನಿರ್ದಿಷ್ಟ ಚಿಕಿತ್ಸಾ ವಿಧಾನಗಳೂ ಅದಕ್ಕೆ ಇಲ್ಲ. ಹೀಗಾಗಿ, ಅಪಾಯ ಎಲ್ಲರಿಗೂ ಇದ್ದೇ ಇದೆ. ಜನಸಾಮಾನ್ಯರಿಗಂತೂ ತುಸು ಹೆಚ್ಚೇ ಸವಾಲುಗಳು (ಚಿಕಿತ್ಸೆಯ ವೆಚ್ಚ ಸೇರಿದಂತೆ) ಇರುತ್ತವೆ.
ಚೇತರಿಕೆ ಕಂಡವರು ಹಠಾತ್ತನೆ ಅಸ್ವಸ್ಥರಾಗುವುದು, ಪದೆಪದೆ ಜ್ವರಕ್ಕೆ ಈಡಾಗುವಂಥ ಉದಾಹರಣೆಗಳು ಸಾಕಷ್ಟು ವರದಿಯಾಗುತ್ತಿವೆ. ಹೃದ್ರೋಗ, ಶ್ವಾಸಕೋಶ, ಸಕ್ಕರೆ ಕಾಯಿಲೆಯಂಥ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ವಯೋವೃದ್ಧರಿಗೆ ಈ ವೈರಾಣು ಮರಣಾಂತಕವಾಗಿ ಪರಿಣಮಿಸುತ್ತಿದೆ.
ಚೇತರಿಕೆಯಾದರೂ ಅನೇಕರಲ್ಲಿ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದು ಅಧ್ಯಯನ ವರದಿಗಳು ಹೇಳುತ್ತಿವೆ. ದುರಂತವೆಂದರೆ, ಇಷ್ಟೆಲ್ಲ ಆಗುತ್ತಿದ್ದರೂ ಈ ರೋಗದ ಕುರಿತು ಭಾರತಾದ್ಯಂತ ಒಂದು ರೀತಿಯ ಅಸಡ್ಡೆಯ ಮನೋಭಾವ ಹೆಚ್ಚಾಗಿರುವುದು ಕಂಡುಬರುತ್ತಿದೆ.
ಇದು ಒಂದು ವಾರದ ಜ್ವರವಷ್ಟೇ, ಏನೂ ಆಗಲ್ಲ ಎನ್ನುವ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಈ ಕಾರಣಕ್ಕಾಗಿಯೇ, ಲಕ್ಷಣಗಳು ಕಾಣಿಸಿಕೊಂಡರೂ ಅನೇಕರು ಪರೀಕ್ಷೆಗಳನ್ನೇ ಮಾಡಿಸಿಕೊಳ್ಳುತ್ತಿಲ್ಲ. ಪರೀಕ್ಷೆ ಮಾಡಿಸಿಕೊಳ್ಳದೆ ದಿನಗಳನ್ನು ದೂಡುವುದರಿಂದ, ರೋಗ ಉಲ್ಬಣಿಸುವ ಸಾಧ್ಯತೆ ಅಧಿಕವಿರುತ್ತದೆ. ನೆನಪಿರಲಿ, ನೀವು ಆರೋಗ್ಯವಂತರಾಗಿರಬಹುದು, ಆದರೆ ನಿಮ್ಮಿಂದ ಇತರರಿಗೆ ಸೋಂಕು ಹರಡಿ ಅದು ಅವರಿಗೆ ಮರಣಾಂತಕವಾಗಬಲ್ಲದು.
ಬಹುಶಃ ಮಾಧ್ಯಮಗಳಲ್ಲಿ ಈ ಕುರಿತು ಮೊದಲಿನಷ್ಟು ವರದಿಯಾಗದೆ ಇರುವುದು, ಚೇತರಿಕೆಯ ಪ್ರಮಾಣದಲ್ಲಿ ಹೆಚ್ಚಳ ಕಾಣಿಸಿಕೊಳ್ಳುತ್ತಿರುವುದರಿಂದಾಗಿ ಅಪಾಯವೇ ದೂರವಾಗಿಬಿಟ್ಟಿದೆ ಎಂಬಂಥ ಮನಃಸ್ಥಿತಿ ಹುಟ್ಟಿಕೊಂಡಿರಬಹುದು.
ಸಾಂಕ್ರಾಮಿಕಗಳು ಜನಸಾಮಾನ್ಯರು ಹಾಗೂ ಜನನಾಯಕರು ಎಂದು ಭೇದಭಾವ ಮಾಡುವುದಿಲ್ಲ. ಎಲ್ಲರೂ ಈಗ ಅಪಾಯವನ್ನು ಎದುರಿಸುತ್ತಿದ್ದಾರೆ. ಎಲ್ಲರೂ ಸುರಕ್ಷತ ಕ್ರಮಗಳನ್ನು ಅಸಡ್ಡೆಯಿಂದ ನೋಡದೆ ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಪಾಲನೆಗೆ, ಮಾಸ್ಕ್ ಧರಿಸುವಿಕೆಗೆ, ಜ್ವರ ಕಾಣಿಸಿಕೊಂಡರೆ ತ್ವರಿತವಾಗಿ ಪರೀಕ್ಷೆಗಳಿಗೆ ಮುಂದಾಗುವುದು ಬಹಳ ಮುಖ್ಯ.