ದಿಲ್ಲಿ: ಕೋವಿಡ್ 19 ವೈರಸ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇರಾನ್, ಚೀನ, ಇಟಲಿ ಬಳಿಕ ಪಾಕಿಸ್ಥಾನದಲ್ಲಿ ಹೆಚ್ಚು ಪ್ರಕರಣ ಕಂಡುಬಂದಿದೆ. ಪಾಕಿಸ್ಥಾನದಲ್ಲಿ ಒಂದೇ ದಿನದಲ್ಲಿ ವೈರಸ್ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಅಲ್ಲದೆ ಕರೊನಾ ವೈರಸ್‌ನಿಂದ ಬಳಲುತ್ತಿರುವ ವ್ಯಕ್ತಿಯೂ ಸಾವನ್ನಪ್ಪಿದ್ದಾನೆ.
ತಮ್ಮ ದೇಶವು ದಕ್ಷಿಣ ಏಷ್ಯಾದ ವುಹಾನ್ ಆಗುವ ಹಾದಿಯಲ್ಲಿದೆ ಎಂಬುದನ್ನು ಪಾಕಿಸ್ಥಾನದೊಳಗಿನ ತಜ್ಞರೇ ಹೇಳಿಕೊಳ್ಳುತ್ತಿದ್ದಾರೆ.
ಪಾಕಿಸ್ಥಾನದಲ್ಲಿ ಕರೋನಾ ವೈರಸ್ ಅನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ. ಇದೇ ಕಾರಣಕ್ಕಾಗಿ, ಸಿಂಧ್ ಪ್ರಾಂತ್ಯದಲ್ಲಿ ಒಂದು ದಿನದೊಳಗೆ 115 ಕರೋನಾ ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ.
ಪಾಕಿಸ್ಥಾನದಲ್ಲಿ ಕರೋನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಚೀನ, ಇಟಲಿ ಮತ್ತು ಇರಾನ್ ಹೊರತುಪಡಿಸಿ ದೇಶದಲ್ಲೂ ಈ ಮಟ್ಟಿಗಿನ ಹೆಚ್ಚಳ ಕಂಡು ಬಂದಿಲ್ಲ ಎಂಬುದು ಪಾಕಿಸ್ಥಾನದ ತಲ್ಲಣಕ್ಕೆ ಕಾರಣ. ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಈಗಾಗಲೇ ಕರೊನಾ ವಿರುದ್ಧ ಹೋರಾಡಲು ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಸಹಕಾರಕ್ಕಾಗಿ ನಿವಾಸಿಗಳಿಗೆ ಮನವಿ ಮಾಡಿದ್ದಾರೆ. ನಾವು ಕಷ್ಟದ ಸಮಯಗಳನ್ನು ಎದುರಿಸುತ್ತಿದ್ದೇವೆ ಎಂದಿರುವ ಇಮ್ರಾನ್, ನಾವು ಅಮೆರಿಕ ಮತ್ತು ಯುರೋಪಿನಂತೆ ಶ್ರೀಮಂತರಲ್ಲ. ಒಂದು ಕಡೆ ಕರೋನಾ ವೈರಸ್ ವಿರುದ್ಧ ಹೋರಾಡಲು ನಿಂತರೆ, ಇನ್ನೊಂದೆಡೆ ನಮ್ಮ ಜನರು ಹಸಿವಿನಿಂದ ಸಾಯಬೇಕಾಗುತ್ತದೆ ಎಂದು ಇಮ್ರಾನ್ ಹೇಳಿದ್ದಾರೆ.
ಕರೋನಾವನ್ನು ತಡೆಯುವ ಯಾವುದೇ ಯೋಜನೆಯನ್ನು ಪಾಕಿಸ್ಥಾನ ಆಡಳಿತ ಹೊಂದಿಲ್ಲ. ಇರಾನ್ನಿಂದ ಬಲೂಚಿಸ್ಥಾನಕ್ಕೆ ಬರುವ ಜನರಲ್ಲಿ ಕರೋನದ ಲಕ್ಷಣಗಳಿದ್ದರೂ ಯಾವುದೇ ಮುಂದುವರಿದ ಕ್ರಮ ಕೈಗೊಳ್ಳಲಾಗಿಲ್ಲ.
ಪಾಕಿಸ್ಥಾನವು ಕರೋನಾ ಪರೀಕ್ಷೆಗೆ ಯಾವುದೇ ಸೌಲಭ್ಯವನ್ನು ಹೊಂದಿಲ್ಲ ಅಥವಾ ಆಸ್ಪತ್ರೆಗಳಲ್ಲಿ ಕರೋನಾ ರೋಗಿಗಳನ್ನು ನಿಭಾಯಿಸುವ ಸಿದ್ಧತೆಗಳನ್ನು ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಪಾಕಿಸ್ಥಾನದೊಳಗೆ ಇನ್ನೂ 1,700 ಶಂಕಿತ ಕರೋನಾ ರೋಗಿಗಳು ಕಾಣೆಯಾಗಿದ್ದಾರೆ. ಅವರು ಎಲ್ಲಿಗೆ ತಲುಪಿದರು ಎಂಬ ಬಗ್ಗೆ ಸರಕಾರಕ್ಕೆ ಯಾವುದೇ ಮಾಹಿತಿ ಇಲ್ಲ. ಇದು ಸಹಜವಾಗಿ ನೆರೆಯ ರಾಷ್ಟ್ರಗಳ ಆತಂಕಗಳಿಗೆ ಕಾರಣವಾಗಿದೆ.