ಮಂಗಳೂರು: ಕೋವಿಡ್ 19 ಮಹಾಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ. ಭಾನುವಾರದಂದು ಸೋಂಕಿನ ಕಾರಣದಿಂದ ಮೃತಪಟ್ಟಿದ್ದ ಮಹಿಳೆಯ 75 ವರ್ಷ ಪ್ರಾಯದ ಅತ್ತೆ ಇಂದು ಈ ಮಹಾಮಾರಿ ಸೋಂಕಿಗೆ ಮೃತಪಟ್ಟ ಮಹಿಳೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 18ಕ್ಕೇರಿದೆ.
ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದ ಈ ಮೃತ ವೃದ್ಧೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು ಮತ್ತು ಅವರ ಸೊಸೆ ಕೋವಿಡ್ ಸೋಂಕಿಗೆ ಮೃತಪಟ್ಟ ಕಾರಣ ಇವರನ್ನು ನಗರದ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಈ ಮಹಿಳೆಯಲ್ಲಿ ಇಂದು ಸೋಂಕು ದೃಢಪಟ್ಟಿತ್ತು.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಂಟ್ವಾಳದ ಕಸಬಾ ನಿವಾಸಿ 50 ವರ್ಷದ ಮಹಿಳೆ ಏಪ್ರಿಲ್ 18ರಂದು ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಕೋವಿಡ್ ಸೋಂಕು ಶಂಕೆಯ ಕಾರಣ ಅವರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಈ ನಡುವೆ ವರದಿ ಬರುವ ಮುನ್ನವೇ ರವಿವಾರದಂದು ಆ ಮಹಿಳೆ ಮೃತಪಟ್ಟಿದ್ದರು ಮತ್ತು ಅದೇ ದಿನ ಮಧ್ಯಾಹ್ನದಂದು ಹೊರಬಿದ್ದ ವರದಿಯಲ್ಲಿ ಆ ಮಹಿಳೆಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು.
50 ವರ್ಷದ ಈ ಮೃತ ಮಹಿಳೆಯ ಅತ್ತೆಯನ್ನು ಪಾರ್ಶ್ವವಾಯು ಸಮಸ್ಯೆಯ ಕಾರಣದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಸೊಸೆಯಲ್ಲಿ ಕೋವಿಡ್ ಸೋಂಕು ಪತ್ತೆಯಾದ ಕಾರಣ ಇವರನ್ನು ಏಪ್ರಿಲ್ 23ರಂದು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿಯೂ ಉಸಿರಾಟದ ಸಮಸ್ಯೆ ಕಂಡುಬಂದಿದ್ದ ಕಾರಣ ಅವರ ಗಂಟಲುದ್ರವದ ಮಾದರಿಯನ್ನು ತಪಾಸಣೆಗೆ ಕಳುಹಿಸಿ ಕೊಡಲಾಗಿತ್ತು.
ಮೃತ ಮಹಿಳೆಯ ಅತ್ತೆ ಹಾಗೂ ಅವರ ಪರಿಚಾರಕರ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಕಳುಹಿಸಿಕೊಡಲಾಗಿತ್ತು. ಮತ್ತು ಈ ವೃದ್ಧೆಯಲ್ಲಿ ಕೋವಿಡ್ ಸೋಂಕು ಇರುವುದು ಇಂದು ಪತ್ತೆಯಾಗಿದ್ದು ಮೊದಲೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಸಂಜೆ ಮೃತಪಟ್ಟಿದ್ದಾರೆ ಎಂದು ನಗರದ ಕೋವಿಡ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಈ ವೃದ್ಧೆಯಲ್ಲಿ ಕೋವಿಡ್ ಸೋಂಕು ಇಂದು ಖಚಿತವಾಗುತ್ತಿದ್ದಂತೆಯೇ ಆಕೆ ದಾಖಲಾಗಿದ್ದ
ಖಾಸಗಿ ಆಸ್ಪತ್ರೆಯನ್ನು ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಜಿಲ್ಲಾಡಳಿತ ಸಂಪೂರ್ಣ ಸೀಲ್ ಡೌನ್ ಮಾಡಿತ್ತು.