Advertisement

ವೈದ್ಯರ ಲೆಕ್ಕಾಚಾರ ತಪ್ಪಿಸಿದ ಕೋವಿಡ್‌-19; 28 ದಿನಗಳ ಮೇಲೆಯೇ 15 ಪ್ರಕರಣಗಳು ದೃಢ

11:43 AM Apr 16, 2020 | Sriram |

ಬೆಂಗಳೂರು: ಮಹಾಮಾರಿ ಕೋವಿಡ್ 19 ವೈರಸ್‌ ಈಗ ರಾಜ್ಯದ ಆರೋಗ್ಯ ಇಲಾಖೆ ಲೆಕ್ಕಾಚಾರ ತಲೆಕೆಳಗಾಗಿಸಿದೆ.

Advertisement

ಸಾಮಾನ್ಯವಾಗಿ ಕೋವಿಡ್ 19 ವೈರಸ್‌ ದೇಹವನ್ನು ಪ್ರವೇಶಿಸಿದ ಅನಂತರದಿಂದ 14 ದಿನಗಳಲ್ಲಿ ಆ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬರುತ್ತವೆ ಎನ್ನುವುದು ವಿಜ್ಞಾನಿಗಳ ವಾದ. ಆದರೆ, ಬೆಂಗಳೂರಿನಲ್ಲಿ ದಾಖಲಾದ ಬಹುತೇಕ ಪ್ರಕರಣಗಳು ಈ ಸಾಂಪ್ರದಾಯಿಕ ಕ್ವಾರಂಟೈನ್‌ ಅವಧಿ (14 ದಿನಗಳು) ಮುಗಿದ ಮೇಲೆಯೇ ದೃಢಪಟ್ಟಿವೆ. ಸ್ವತಃ ಬಿಬಿಎಂಪಿ ಹೊರಡಿಸಿದ ಕೋವಿಡ್‌-19 ಬುಲೆಟಿನ್‌ನಲ್ಲಿಯೇ ಇದು ಬಹಿರಂಗಗೊಂಡಿದೆ.

ವಾಸ್ತವವಾಗಿ ದೇಹ ಪ್ರವೇಶಿಸಿದ ಏಳು ದಿನಗಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿ ಕೊಳ್ಳುತ್ತವೆ. ಮುನ್ನೆಚ್ಚರಿಕೆ ಕ್ರಮವಾಗಿ ವಿದೇಶ ದಿಂದ ಬಂದ ಅಥವಾ ಸೋಂಕು ಶಂಕಿತ ವ್ಯಕ್ತಿಯನ್ನು ಈ ಮೊದಲು 2 ವಾರಗಳ ಕಾಲ ಪ್ರತ್ಯೇಕವಾಗಿಟ್ಟು, ನಿಗಾ ವಹಿಸಿ ಅನಂತರ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ನಗರ ದಲ್ಲಿ ಸೋಂಕು ದೃಢಪಟ್ಟ 80 ಪ್ರಕರಣಗಳಲ್ಲಿ 51 ಜನರಿಗೆ 14 ದಿನ ಗಳ ಅನಂತರ ಕೋವಿಡ್ 19 ಸೋಂಕು ಪಾಸಿಟಿವ್‌ ಇರುವುದು ಕಂಡುಬಂದಿದೆ. ಈ ಪೈಕಿ 28 ದಿನಗಳ ಮೇಲೆಯೇ 15 ಪ್ರಕರಣಗಳು ವರದಿಯಾಗಿವೆ.

ಸತತ ಪರೀಕ್ಷೆ ಅತ್ಯಗತ್ಯ
ಬಿಬಿಎಂಪಿ ಸಿದ್ಧಪಡಿಸಿದ ಈ ಬುಲೆಟಿನ್‌ನಲ್ಲಿರುವ ಕ್ವಾರಂಟೈನ್‌ ಅವಧಿಯಲ್ಲಿನ ಸೋಂಕಿತರ ಪ್ರಕರಣಗಳು ಸರಿ ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಆವಶ್ಯಕತೆ ಇದೆ. ಇದು ಸರಿಯಾಗಿದೆ ಎಂದಾದರೆ, ಅಂತಹ ಪ್ರಕರಣಗಳನ್ನು ಮೂರು ದಿನಗಳ ಅಂತರದಲ್ಲಿ ಎರಡು ಬಾರಿ ಪರೀಕ್ಷೆಗೊಳಪಡಿಸಿ, ಎರಡೂ ನೆಗೆಟಿವ್‌ ಬಂದ ಅನಂತರವೇ ಕ್ವಾರಂಟೈನ್‌ನಿಂದ ಬಿಡುಗಡೆಗೊಳಿಸುವ ಕೆಲಸ ಆಗಬೇಕು ಎಂದು ನಿಮ್ಹಾನ್ಸ್‌ನ ನ್ಯೂರೋ ವೈರಾಲಜಿ ವಿಭಾಗದ ಮುಖ್ಯಸ್ಥ ಡಾ| ವಿ. ರವಿ ತಿಳಿಸಿದ್ದಾರೆ.

ನಾವು ಕೇವಲ ಮೂರು ತಿಂಗಳ ಅಂಕಿ- ಅಂಶ ಇಟ್ಟುಕೊಂಡು ಇದನ್ನು ಎದುರಿಸು ತ್ತಿರುವು ದರಿಂದ ಅನುಭವ ಸಾಲದು. ಕೆಲವರಲ್ಲಿ ಈ ವೈರಸ್‌ ತಡೆಯುವ ಶಕ್ತಿ ಬಗ್ಗೆ ಹೆಚ್ಚು ಮಾಹಿತಿಯೇ ಇಲ್ಲ. ಯಾಕೆಂದರೆ, ನೆಗೆಟಿವ್‌ ಬಂದ ವ್ಯಕ್ತಿಯ ಶರೀರದಲ್ಲಿನ ರಕ್ತದ ಮಾದರಿ ತೆಗೆದುಕೊಂಡು ಅದರಲ್ಲಿ ಪ್ರತಿಕಾಯಗಳು ಕಂಡುಬಂದಿದ್ದು, ತಟಸ್ಥ ಮತ್ತು ತಟಸ್ಥವಲ್ಲದ ಎರಡೂ ಪ್ರಕಾರದ ಪ್ರತಿಕಾಯಗಳು ಇರುವುದು ಪತ್ತೆಯಾಗಿದೆ ಎಂದೂ ಡಾ| ರವಿ ತಿಳಿಸಿದ್ದಾರೆ.

Advertisement

ಹೈಯರ್‌ ವೈರಲ್‌ ಲೋಡ್‌?
ಕೆಲವು ಸಲ ವೈರಸ್‌ ಪ್ರಮಾಣ ಹೆಚ್ಚಾದಾಗ ಲಕ್ಷಣ ಕಂಡುಬರುತ್ತದೆ. ದೇಹವನ್ನು ಪ್ರವೇಶಿಸಿದ ಅನಂತರ ವೈರಸ್‌ ಗಾತ್ರ ಹೆಚ್ಚುತ್ತಾ ಹೋಗುತ್ತದೆ. ಅಲ್ಲಿಯವರೆಗೆ ವ್ಯಕ್ತಿ ಎಲ್ಲರಂತೆ ಸಾಮಾನ್ಯ ವಾಗಿರುತ್ತಾನೆ. ಇದು ಕೆಲವೊಮ್ಮೆ ಮನುಷ್ಯನಲ್ಲಿಯ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಿರುತ್ತದೆ. ಆದರೆ, ಇಂತಹದ್ದೇ ಕಾರಣವೆಂದು ನಿರ್ದಿಷ್ಟವಾಗಿ ಈಗಲೇ ಹೇಳುವುದು ತಪ್ಪಾಗುತ್ತದೆ. ಹೀಗೆ ನಿಗದಿತ ಅವಧಿಯ ನಂತರ ದೃಢಪಡುವ ಸೋಂಕಿನ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ, ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ. ಈ ನಿಟ್ಟಿನಲ್ಲಿಯೂ ಚಿಂತನೆ ನಡೆದಿದೆ’ ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ| ಸಿ. ನಾಗರಾಜ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next