Advertisement

ಶಾಲಾ ಮಕ್ಕಳ ಕೈಸೇರಲಿದೆ ಕೋವಿಡ್-19 ಕೈಪಿಡಿ

12:36 AM Jun 22, 2020 | Sriram |

ಬೆಂಗಳೂರು: ಶಾಲೆ ಮಕ್ಕಳಿಗೆ ಈ ಶೈಕ್ಷಣಿಕ ವರ್ಷ ಪಠ್ಯಪುಸ್ತಕಗಳ ಜತೆಗೆ ಕೋವಿಡ್-19 ಕೈಪಿಡಿಯೂ ಸಿಗಲಿದೆ. ಶೈಕ್ಷಣಿಕ ವರ್ಷ ವಿಳಂಬವಾದರೂ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲು ಅನುಕೂಲವಾಗುವಂತೆ ಮುದ್ರಣ ಪೂರ್ಣಗೊಳಿಸಿ, ಜಿಲ್ಲಾ ಉಪನಿರ್ದೇಶಕರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಪೂರೈಸುವ ಕಾರ್ಯ ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ನಡೆಯುತ್ತಿದೆ.

Advertisement

ಜತೆಗೆ ಕೋವಿಡ್-19 ಕೈಪಿಡಿಯನ್ನೂ ಪ್ರತೀ ವಿದ್ಯಾರ್ಥಿಗೆ ನೀಡಲು ಸಿದ್ಧತೆ ನಡೆಯುತ್ತಿದೆ. ಕೋವಿಡ್-19ಸೋಂಕು, ತಡೆ, ಮುನ್ನೆಚ್ಚರಿಕೆ ಕ್ರಮ ಇತ್ಯಾದಿ ಸಮಗ್ರ ಮಾಹಿತಿ ಹೊಂದಿರುವ ಕೈಪಿಡಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸಿದ್ಧಪಡಿಸುತ್ತಿದ್ದು, ಇದಕ್ಕಾಗಿ ಸಮಿತಿ ರಚನೆ ಮಾಡಿದೆ.

ಸಮಿತಿಯು ಕೈಪಿಡಿ ಸಿದ್ಧಪಡಿಸಿ,ಪಠ್ಯಪುಸ್ತಕ ಸಂಘಕ್ಕೆ ಸಲ್ಲಿಸಲಿದೆ. ಸಂಘದಿಂದ ಮುದ್ರಣ ಪೂರೈಸಿ ಸರಬರಾಜು ಮಾಡಲಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೈಪಿಡಿಯಲ್ಲಿ ಏನೇನಿರುತ್ತದೆ?
ರಾಜ್ಯ ಪಠ್ಯಕ್ರಮದ 1ರಿಂದ 10ನೇ ತರಗತಿಯ ಮಕ್ಕಳಿಗಾಗಿ ಕೋವಿಡ್-19ಕೈಪಿಡಿ ರಚನೆಯಾಗಲಿದೆ. 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಬಗೆಯದು ಮತ್ತು 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಇನ್ನೊಂದು ಬಗೆಯ ಕೈಪಿಡಿ ಇರಲಿದೆ. ಪ್ರಾ. ಶಾಲಾ ಮಕ್ಕಳಿಗೆ ಚಿತ್ರಸಹಿತ ಮಾಹಿತಿ ಹೆಚ್ಚಿರುತ್ತದೆ. ಹಿ.ಪ್ರಾ. ಮತ್ತು ಪ್ರೌಢಶಾಲಾ ಮಕ್ಕಳ ಕೈಪಿಡಿಯಲ್ಲಿ ವಿವರಣಾತ್ಮಕ ಮಾಹಿತಿ ಹೆಚ್ಚಿರುತ್ತದೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ಹೂರಣವೇನು?
-ಕೋವಿಡ್-19 ತಡೆಗಟ್ಟುವ ವಿಧಾನ
-ಸೋಂಕಿನಿಂದ ದೂರವಿರಲು ಏನು ಮಾಡಬೇಕು, ಏನು ಮಾಡ ಬಾರದು?
-ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳು ಮತ್ತು ಶಾಲೆಯಲ್ಲಿ ಸಮಗ್ರ ಶುಚಿತ್ವ
-ಸಾಮಾಜಿಕ ಅಂತರ ಕಾಪಾಡುವುದು ಮತ್ತು ನಿತ್ಯ ಮಾಸ್ಕ್ ಬಳಕೆ

Advertisement

ಪಾಲಕರಿಗೂ ಮಾಹಿತಿ
ಕೈಪಿಡಿಯಲ್ಲಿ ಹೆತ್ತವರು, ಪೋಷಕರಿಗೂ ಅಗತ್ಯ ಮಾಹಿತಿ ಇರುತ್ತದೆ. ಸೋಂಕು ತಡೆ ಕ್ರಮ, ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಮತ್ತು ಶಾಲೆಯಿಂದ ಬಂದಾಗ ಶುಚಿತ್ವ, ಕೋವಿಡ್-19ದಿಂದ ಆಗಿರುವ ಆರ್ಥಿಕ ಹೊಡೆತ ತಡೆದು ಕೊಳ್ಳುವುದು ಮತ್ತು ಅದರ ಪರಿಣಾಮ ಮಕ್ಕಳ ಮೇಲಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬಿತ್ಯಾದಿ ಅಂಶ ಇರುತ್ತವೆ ಎಂದು ಡಿಎಸ್‌ಇಆರ್‌ಟಿ ಮೂಲಗಳು ತಿಳಿಸಿವೆ.

ಶಾಲಾ ಆರಂಭದಲ್ಲೇ ಮಕ್ಕಳಿಗೆ ಕೋವಿಡ್-19 ಕೈಪಿಡಿ ನೀಡಲಿದ್ದೇವೆ. ವಯಸ್ಸಿಗೆ ಅನುಗುಣವಾಗಿ ಬೇರೆ ಬೇರೆ ಕೈಪಿಡಿಗಳು ಇರಲಿವೆ. ಇದು ಪಠ್ಯದ ವಿಷಯವಲ್ಲ ಅಥವಾ ಇದರ ಬೋಧನೆಗೆ ಪ್ರತ್ಯೇಕ ಅವಧಿಯೂ ಇರುವುದಿಲ್ಲ. ಇದರ ಆಧಾರದಲ್ಲಿ ಪರೀಕ್ಷೆಯೂ ನಡೆಸುವುದಿಲ್ಲ.
ಡಾ| ಕೆ.ಜಿ. ಜಗದೀಶ್‌,
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next