Advertisement

ಪಡಿತರಕ್ಕೆ ಸರತಿ ಸಾಲು; ಅನಗತ್ಯ ಓಡಾಟಕ್ಕೆ ಕಡಿವಾಣ

10:21 PM Mar 27, 2020 | Sriram |

ಉಡುಪಿ: ಕೋವಿಡ್‌ 19 ಮುನ್ನೆಚ್ಚರಿಕೆ ಕ್ರಮದ ಲಾಕ್‌ಡೌನ್‌ನಿಂದಾಗಿ ಜನರಿಗೆ ತೊಂದರೆ ಆಗಬಾರದೆಂದು ಜಿಲ್ಲಾದ್ಯಂತ ರೇಶನ್‌ ಅಂಗಡಿಗಳನ್ನು ತೆರೆಯ ಲಾಗಿದ್ದು, ಹೆಚ್ಚಿನ ಕಡೆ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡರೂ ಇನ್ನು ಕೆಲವೆಡೆ ಈ ಅಂತರವನ್ನು ಕಾಯ್ದುಕೊಳ್ಳಲೇ ಇಲ್ಲ.

Advertisement

ಆದಿ ಉಡುಪಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಹೆಚ್ಚಿನ ಮಂದಿ ಸೇರಿದ್ದರು. ಅಗತ್ಯ ವಸ್ತುಗಳಾದ ಬೇಳೆ, ಗೋಧಿ ಮೊದಲಾದ ವಸ್ತುಗಳನ್ನು ಸೋಶಿಯಲ್‌ ಡಿಸ್ಟೆನ್ಸ್‌ ಕಾಯ್ದುಕೊಳ್ಳುವ ಮೂಲಕ ಪಡೆಯುವ ದೃಶ್ಯಗಳು ಕಂಡುಬಂತು.

ಗ್ರಾಹಕರು ಮುಖವನ್ನು ಮುಚ್ಚಲು ಮಾಸ್ಕ್, ಕರವಸ್ತ್ರಗಳನ್ನು ಧರಿಸಿ ಸಾಲಾಗಿ ನಿಂತು ಒಬ್ಬರ ಹಿಂದೆ ಒಬ್ಬರು ಅಗತ್ಯವಸ್ತುಗಳನ್ನು ಪಡೆದರು. ಉಳಿದಂತೆ ದಿನಸಿ ಅಂಗಡಿಗಳು, ಹಣ್ಣಿನ ಅಂಗಡಿಗಳು, ತರಕಾರಿ ಅಂಗಡಿಗಳು, ಮೆಡಿಕಲ್‌ಗ‌ಳಲ್ಲಿ ಜನರ ಸರತಿ ಸಾಲಿ ನಲ್ಲಿ ಬರಲು ರೌಂಡ್‌, ಚೌಕಾಕಾರದ ಮಾರ್ಕ್‌ ಸರ್ಕಲ್‌ಗ‌ಳನ್ನು ನಿರ್ಮಿಸಿ ಸಾಮಾಜಿಕ ಅಂತರ ಕಾಯ್ದುಕೊಂಡರು.

ಜನ ಸಂಚಾರ ವಿರಳ
ಉಡುಪಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾದ್ಯಂತ ಜನಸಂಚಾರ ವಿರಳವಾಗಿದ್ದವು.ಉಡುಪಿ ರಥಬೀದಿ ಸೇರಿದಂತೆ ಬಹುತೇಕ ನಗರದ ರಸ್ತೆಗಳು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು.

ರಸ್ತೆಗಳಲ್ಲಿ ಕೆಲಸವಿಲ್ಲದೆ ಅಡ್ಡಾಡುತ್ತಿದ್ದ ಜನರನ್ನು ಪೊಲೀಸರು ಬೆದರಿಸಿ ಕಳಿಸುವ ದೃಶ್ಯಗಳು ಕಂಡುಬಂದರೆ, ಹೆಚ್ಚಿನ ದಿನಸಿ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆಯಲೂ ವಿರಳ ಕಂಡುಬಂತು. ಕೆಲ ಮೆಡಿಕಲ್‌ ಶಾಪ್‌ಗ್ಳಲ್ಲಿ ಸರತಿಯ ಸಾಲಿನಲ್ಲಿ ಜನರು ಔಷಧಿಗಳನ್ನು ಖರೀದಿಯಲ್ಲಿ ತೊಡಗಿದ್ದರು.ನ್ಯಾಯಬೆಲೆ ಅಂಗಡಿಯಲ್ಲಿ ರೇಶನ್‌ ಪಡೆಯಲು ಹೆಚ್ಚಿನಮಂದಿ ಸೇರಿದ್ದು, ಸಾಮಾಜಿಕ ಅಂತರ ಕಾಯ್ದು ಕೊಂಡು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.

Advertisement

ರಾ.ಹೆ. ವಾಹನ ಸಂಚಾರ ವಿಲ್ಲದೆ ಖಾಲಿ ಹೊಡೆಯುತ್ತಿದ್ದವು. ಉಡುಪಿ ರಥಬೀದಿಗಳು, ಸಿಟಿಬಸ್‌ನಿಲ್ದಾಣ, ಸರ್ವಿಸ್‌ಬಸ್‌ ನಿಲ್ದಾಣ, ಮಠಕ್ಕೆ ತೆರಳುವ ವಾದಿರಾಜ ರಸ್ತೆ, ಕಲ್ಸಂಕ- ರಾಜಾಂಗಣ ರಸ್ತೆ, ಬಡಗು ಬೆಟ್ಟು, ಶ್ರೀ ಲಕ್ಷ್ಮೀ ವೆಂಕಟರಮಣ ರಸ್ತೆ, ಕನಕದಾಸ ರಸ್ತೆ ಗಳಲ್ಲೂ ಜನಸಂಚಾರ ವಾಹನ ಸಂಚಾರವಿಲ್ಲದೆ ಸ್ತಬ್ಧವಾಗಿದ್ದವು. ಕೆಲ ಕಡೆ ಗಸ್ತಿನಲ್ಲಿದ ಪೊಲೀಸರು ಜನರನ್ನು ತಪಾಸಣೆ ಮಾಡಿ ಅನಗತ್ಯ ಓಡಾಟವನ್ನು ತಡೆಯುವ ಕೆಲಸದಲ್ಲಿ ನಿರತರಾಗಿದ್ದರು.

ಪೊಲೀಸರ ಕಟ್ಟೆಚ್ಚರ
ಕುಂದಾಪುರ: ಕೋವಿಡ್‌ 19 ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜನ ಅನಗತ್ಯ ವಾಗಿ ಮನೆಯಿಂದ ಹೊರ ಬರದಂತೆ ಎಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸುತ್ತಿದ್ದು, ಈ ಹಿನ್ನೆಲೆ ಶುಕ್ರವಾರ ಕುಂದಾಪುರಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಭೇಟಿ ನೀಡಿ, ಮಾಹಿತಿ ಪಡೆದರು. ಕೆಲವು ಚೆಕ್‌ಪೋಸ್ಟ್‌ಗಳಿಗೂ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಎಎಸ್‌ಪಿ ಹರಿರಾಂ ಶಂಕರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಗೋಪಿಕೃಷ್ಣ ಮತ್ತಿತರರಿದ್ದರು.

ಪಡಿತರ ಅಂಗಡಿಗಳಲ್ಲಿ ಸಾಮಾಜಿಕ ಅಂತರ
ಕುಂದಾಪುರ: ಕೋವಿಡ್‌ 19 ಸೋಂಕು ಹರಡದಂತೆ ದೇಶವ್ಯಾಪಿ ಕರ್ಫ್ಯೂ ಜಾರಿಯಲ್ಲಿದೆ. ಆದರೂ ಅಗತ್ಯ ವಸ್ತುಗಳೊಂದಿಗೆ ಪಡಿತರ ವಿತರಣೆಗೂ ಅವಕಾಶ ನೀಡಲಾಗಿದೆ. ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಸಾಮಗ್ರಿಗಳ ಹಂಚಿಕೆ ಮಾಡಲಾಗುತ್ತಿದ್ದು, ಗ್ರಾಹಕರೇ ಸ್ವಯಂ ಪ್ರೇರಿತರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಅದರಲ್ಲೂ ಗ್ರಾಮೀಣ ಭಾಗದಲ್ಲಂತೂ ಕೋವಿಡ್‌ 19 ರೋಗದ ಕುರಿತು ಜನರು ಹೆಚ್ಚಿನ ಮುಂಜಾಗ್ರತೆಗಳನ್ನು ತೆಗೆದುಕೊಳ್ಳುತ್ತಿದ್ದು, ಪಡಿತರ (ನ್ಯಾಯಬೆಲೆ) ಅಂಗಡಿಗಳಲ್ಲೂ ಯಾರೂ ಹೇಳದಿದ್ದರೂ, ಸ್ವತಃ ಅವರೇ ಜನರಿಂದ ಅಂತರ ಕಾಯ್ದುಕೊಳ್ಳುವ ದೃಶ್ಯ ಕಂಡು ಬಂತು. ಸುಡುವ ಬಿಸಿಲಿನಲ್ಲಿಯೂ ಜನ ಅವರಿಗೆ ಹಾಕಿದ ವೃತ್ತದಲ್ಲಿ ನಿಂತು, ಒಬ್ಬರಿಂದ ಒಬ್ಬರಿಗೆ ಅಂತರ ಕಾಯ್ದುಕೊಂಡು, ಪಡಿತರ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ.

ಒಟಿಪಿ ಮೂಲಕ ವಿತರಣೆ
ಕೋವಿಡ್‌ 19 ಸೋಂಕು ಹರಡದಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಬಯೋಮೆಟ್ರಿಕ್‌ ಮೂಲಕ ಪಡಿತರ ವಿತರಣೆಗೆ ಈಗ ತಡೆಹಿಡಿಯಲಾಗಿದ್ದು, ಈಗ ಎಲ್ಲ ಕಡೆಗಳಲ್ಲಿ ಆಧಾರ್‌ ಆಧಾರಿತ ಮೊಬೈಲ್‌ ಒಟಿಪಿ ಮೂಲಕ ಪಡಿತರ ವಿತರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next