ರೋಮ್ : ಕೋವಿಡ್ ಹಾವಳಿಯಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ಇಟಲಿ ಜೂ.3ರಿಂದ ಪ್ರಯಾಣ ಮತ್ತು ಪ್ರವಾಸಕ್ಕೆ ಮುಕ್ತ ಅವಕಾಶ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಜೂ.3ರಿಂದ ಇಟಲಿಯಿಂದ ವಿದೇಶಗಳಿಗೆ ಹೋಗಬಹುದು ಮತ್ತು ವಿದೇಶಗಳಿಂದ ಪ್ರವಾಸಿಗರು ಬರಬಹುದು ಎಂದು ಸರಕಾರ ಘೋಷಿಸಿದೆ.
ಜತೆಗೆ ದೇಶದೊಳಗಿನ ಪ್ರಯಾಣ ನಿರ್ಬಂಧಗಳು ಕೊನೆಗೊಳ್ಳಲಿವೆ. ದೇಶದೊಳಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣಿಸಲು ಇದ್ದ ನಿರ್ಬಂಧಗಳು ಮೇ 18ಕ್ಕೆ ಕೊನೆಗೊಳ್ಳಲಿವೆ. ಅರ್ಥಾತ್ ಜನರು ಇನ್ನು ಒಂದೂರಿನಿಂದ ಇನ್ನೊಂದೂರಿಗೆ ಮುಕ್ತವಾಗಿ ಓಡಾಡಬಹುದು.
ಕೆಲವು ರಾಜ್ಯಗಳು ಪ್ರಯಾಣ ನಿರ್ಬಂಧ ತೆರವುಗೊಳಿಸಲು ಈ ಹಿಂದೆಯೇ ಪ್ರಧಾನಿ ಗಿಸೆಪ್ ಕೊಂಟೆ ಅವರನ್ನು ಒತ್ತಾಯಿಸಿದ್ದವು. ಆದರೆ ಕೋವಿಡ್ ಹಾವಳಿ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಅವರು ಹಂತಹಂತವಾಗಿ ಸಡಿಲಿಸಲು ತೀರ್ಮಾನಿಸಿದ್ದರು.
ಕೋವಿಡ್ ವೈರಸ್ ಎರಡನೇ ಹಂತದ ಹಾವಳಿ ಮಾಡದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳುವ ಅಗತ್ಯವಿದೆ. ಹೀಗಾಗಿ ಕ್ರಮೇಣ ಲಾಕ್‌ಡೌನ್ ಸಡಿಲಿಕೆಯಾಗುತ್ತಿದೆ. ಆರಂಭದಲ್ಲಿ ದೇಶದೊಳಗಿನ ನಿರ್ಬಂಧಗಳನ್ನು ತೆರವುಗೊಳಿಸಿ ಬಳಿಕ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಜೂ.2ರಂದು ಇಟಲಿಯ ಗಣರಾಜ್ಯೋತ್ಸವ ದಿನವಾಗಿದ್ದು, ಅಂದು ಜನರು ಸಾರ್ವಜನಿಕವಾಗಿ ಒಟ್ಟುಗೂಡುವುದನ್ನು ತಡೆಯುವ ಸಲುವಾಗಿ ಲಾಕ್‌ಡೌನ್ ಅಲ್ಲಿತನಕ ಮುಂದುವರಿಯಲಿದೆ.
ಪ್ರವಾಸಿಗರಿಗೆ ಕ್ವಾರಂಟೈನ್ ಇಲ್ಲ
ಜೂ.3ರ ಬಳಿಕ ಇಟಲಿಗೆ ಬರುವ ಪ್ರವಾಸಿಗರು 14 ದಿನಗಳ ಕ್ವಾರಂಟೈನ್‌ಗೆ ಒಳಪಡುವ ಅಗತ್ಯವಿಲ್ಲ. ಪ್ರಸ್ತುತ ಯುರೋಪ್‌ನ ವೀಸಾ ಮುಕ್ತ ಶೆಂಗೆನ್ ಪ್ರದೇಶದವರಿಗೆ ಈ ನಿಯಮವನ್ನು ಅನ್ವಯಿಸಲಾಗಿದೆ. ಜೂ.3ರ ಬಳಿಕ ಎಲ್ಲರಿಗೂ ಅನ್ವಯವಾಗಲಿದೆ.
ಪ್ರವಾಸೋದ್ಯಮವನ್ನು ಪುನರಾರಂಭಿಸಿ ಬೇಸಿಗೆ ಪ್ರವಾಸಕ್ಕೆ ದೇಶವನ್ನು ತೆರೆಯುವ ನಿಟ್ಟಿನಲ್ಲಿ ಇದು ಭಾರೀ ಮಹತ್ವದ ನಿರ್ಧಾರ ಅತಿ ಕಟ್ಟುನಿಟ್ಟಿನ ಲಾಕ್‌ಡೌನ್ ವಿಧಿಸಲಾಗಿತ್ತು.