ನವದೆಹಲಿ: ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಇಳಿಮುಖವಾಗುತ್ತಿದೆ. ಆದರೆ ಹರ್ಯಾಣ, ಒಡಿಶಾ, ತೆಲಂಗಾಣ ಮತ್ತು ಸಿಕ್ಕಿಂ ರಾಜ್ಯದಲ್ಲಿ ಕೋವಿಡ್ 19 ಲಾಕ್ ಡೌನ್ ವಿಸ್ತರಿಸಲಾಗಿದೆ. ಉತ್ತರಪ್ರದೇಶ, ಜಮ್ಮು-ಕಾಶ್ಮೀರದಲ್ಲಿ ಕಡಿಮೆ ಪ್ರಮಾಣದ ಪ್ರಕರಣಗಳಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ತಮಿಳು ನಟಿಯನ್ನು ವಿವಾಹವಾಗುವುದಾಗಿ ನಂಬಿಸಿ ಮೋಸ; ಮಾಜಿ ಸಚಿವನ ವಿರುದ್ಧ ರೇಪ್ ಕೇಸ್
ಕೆಲವು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್ ಡೌನ್ ಮುಂದುವರಿಸಲಾಗಿದೆ.
ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಲಾಕ್ ಡೌನ್/ನಿರ್ಬಂಧಗಳನ್ನು ವಿಸ್ತರಿಸಲಾಗಿದೆ. ದೆಹಲಿ, ಮಧ್ಯಪ್ರದೇಶ, ಮತ್ತು ಹಿಮಾಚಲ್ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವುದರಿಂದ ಕೆಲವೊಂದು ನಿರ್ಬಂಧಗಳನ್ನು ತೆರವುಗೊಳಿಸುವುದಾಗಿ ತಿಳಿಸಿದೆ.
ಇನ್ನಷ್ಟು ಹೆಚ್ಚು ಗಂಟೆಗಳ ಕಾಲ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಕೆಲವೊಂದು ಷರತ್ತುಗಳೊಂದಿಗೆ ಮಾಲ್ ಗಳು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಶಾಲಾ, ಕಾಲೇಜು ಬಂದ್ ಮುಂದುವರಿಯಲಿದೆ.