Advertisement

ಕೋವಿಡ್‌ 19 : ದ.ಕೊರಿಯಾದ ಪರಿಶ್ರಮದ ಕಥೆಯ ಕೇಳಿ

09:46 AM Mar 28, 2020 | Sriram |

ದಕ್ಷಿಣ ಕೊರಿಯಾ ಕೋವಿಡ್‌ 19 ಮಾರಿಯನ್ನು ಹೆಬ್ಟಾಗಿಲಲ್ಲೇ ತಡೆಯುವಲ್ಲಿ ಒಂದಷ್ಟು ಮಟ್ಟಿಗೆ ಯಶಸ್ವಿಯಾಗಿರುವುದು ಸುಳ್ಳಲ್ಲ. ಅದಕ್ಕೆ ಅನುಸರಿಸಿರುವ ವಿಧಾನ ಸರಳ ಮತ್ತು ಸುಲಭ.

Advertisement

ಮಣಿಪಾಲ: ಕೋವಿಡ್‌ 19 ಸೋಂಕು ನಿಯಂತ್ರಣಕ್ಕಾಗಿ ವಿಶ್ವದೆಲ್ಲೆಡೆ ಹಲವು ಕಟ್ಟುನಿಟ್ಟಿನ ಕ್ರಮಗಳು ಜಾರಿಯಲ್ಲಿವೆ. ಆದರೂ ಕೋವಿಡ್‌ 19 ನಿಯಂತ್ರಣಕ್ಕೆ ಸೋಲುತ್ತಿವೆ.

ಮೊನ್ನೆಯಷ್ಟೇ ಮುಗಿಯತಪ್ಪ ಎಂದಿದ್ದ ಚೀನಾದಲ್ಲಿ ಮತ್ತೆ ಸಮಸ್ಯೆ ಉದ್ಭವಿಸುವ ಲಕ್ಷಣಗಳು ಗೋಚರಿಸುತ್ತಿವೆ. ಇಟಲಿ, ಬ್ರಿಟನ್‌, ಸ್ಪೇನ್‌ ಕಥೆಯಂತೂ ಇದ್ದದ್ದೇ. ಈ ಮಧ್ಯೆಯೇ ಕೋವಿಡ್‌ 19 ಮಣಿಸಲು ಶ್ರಮಿಸುತ್ತಿರುವವರಲ್ಲಿ ಕೆಲವರು ಸಣ್ಣ ಗೆಲುವು ಪಡೆದ ವರದಿಗಳೂ ಕೇಳಿಬರುತ್ತಿವೆ. ಅದು ಉಳಿದ ವೀರರಿಗೆ ಹೊಸ ಸ್ಫೂರ್ತಿ ತುಂಬುವಂಥದ್ದೇ.

ಈಗ ಈ ವರದಿ ಕೇಳಿಬರುತ್ತಿರುವುದು ದಕ್ಷಿಣ ಕೊರಿಯಾದಿಂದ. ಅಲ್ಲಿ ತೋರಿಬರುತ್ತಿರುವ ಒಂದು ಹುರುಪಿನ ಅಂಶವೆಂದರೆ ಸೋಂಕಿತರ ಸಂಖ್ಯೆ ಹೆಚ್ಚಿದ್ದು ನಿಜ. ಆದರೆ, ಸಾವಿನ ಸಂಖ್ಯೆಯನ್ನು ತಡೆಯುವಲ್ಲಿ ಸದ್ಯಕ್ಕೆ ಯಶಸ್ವಿಯಾಗಿದೆಯಂತೆ. ಇದಕ್ಕೆ ಅದು ಬಳಸಿರುವುದು ಸ್ವಯಂ ಬುದ್ಧಿಮತ್ತೆಯ ಜತೆಗೆ ಕೃತಕ ಬುದ್ಧಿ ಮತ್ತೆಯನ್ನು.

ನೆರವಾದ ಕೃತಕಬುದ್ಧಿಮತ್ತೆ
ಕೃತಕ ಬುದ್ಧಿಮತ್ತೆಯ ಲಾಭವನ್ನು ಪಡೆದು ಸ್ಮಾರ್ಟ್‌ಫೋನ್‌ಗಳೆಂಬ ಸಾಧನ ಬಳಸಿ, ಅಂಕಿ ಅಂಶಗಳನ್ನು ಕ್ರೋಢಿಕರಿಸಿ, ವಿಶ್ಲೇಷಿಸಿ ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುತ್ತಿದೆ ದಕ್ಷಿಣ ಕೊರಿಯಾ. ಈ ದಿಸೆಯಲ್ಲಿ ತೈವಾನ್‌ ಸಹ ಯಶಸ್ವಿಯಾಗಿದೆ. ಅಲ್ಲಿಯೂ ಸಾವಿನ ಸಂಖ್ಯೆ ತೀರಾ ಕಡಿಮೆ.

Advertisement

ದಕ್ಷಿಣ ಕೊರಿಯಾ ಸರಕಾರ ಮೊದಲಿಗೆ ಮಾಡಿದ್ದು ಸೋಂಕು ಮೂಲವನ್ನು ಹುಡುಕುವುದು. ಅದಕ್ಕೆ ರೋಗಿಗಳ ಸಂಖ್ಯೆ, ಅವರು ವಾಸಿಸುತ್ತಿದ್ದ ಪ್ರದೇಶಗಳು, ಅವರ ಲಿಂಗ ಮತ್ತು ವಯಸ್ಸು ಎಲ್ಲವನ್ನೂ ಕ್ಷಣಾರ್ಧದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಪಡೆದು, ಸಂಪರ್ಕ ಜಾಲವನ್ನು ಬೇಧಿಸಲು ಪ್ರಯತ್ನಿಸಿತು. ಅದಾದ ಕಾರಣ, ಸಾಮುದಾಯಿಕ ಹಂತಕ್ಕೆ ಸೋಂಕು ಸ್ಥಳಾಂತರಗೊಳ್ಳದಂತೆ ತಡೆಯುವಲ್ಲಿ ಭಾಗಶಃ ಯಶಸ್ವಿಯಾಗಿದೆ. ಅದೇ ಕಾರಣ, ಸಾವಿನ ಸಂಖ್ಯೆ ಕಡಿಮೆಯಾದದ್ದು.

ಜಿಪಿಎಸ್‌ ಮೂಲಕ ಮಾಹಿತಿ
ಅಷ್ಟಕ್ಕೇ ಸುಮ್ಮನಾಗಲಿಲ್ಲ. ಸ್ಥಳೀಯ ಸರಕಾರ ಜಿಪಿಎಸ್‌, ಕಾಲ್‌ ಡೇಟಾ ಎಲ್ಲ ಮೂಲಗಳಿಂದ ಮಾಹಿತಿ ಸಂಗ್ರಹಿಸಿತು. ಹಲವು ಆ್ಯಪ್‌ಗ್ಳನ್ನು ರೂಪಿಸಿ ಬಳಸಿತು. ಫೇಸ್‌ಬುಕ್‌, ಟ್ವಿಟ್ಟರ್‌ಮತ್ತು ವಾಟ್ಸ್‌ಆ್ಯಪ್‌ನೊಂದಿಗೆ ಸಂಪರ್ಕ ಜೋಡಿಸಿ ಮಾಹಿತಿ ಕಲೆ ಹಾಕಿತು. ಹಾಗೆಂದು ಬರಿದೇ ಮಾಹಿತಿ ಕಲೆ ಹಾಕಲಿಲ್ಲ. ಕೂಡಲೇ ಆ ಮೂಲಕ ಜನರಲ್ಲಿ ಕೋವಿಡ್‌ 19 ಗಾಬರಿ ಹುಟ್ಟಿಸುವ ಮೊದಲು ಮುನ್ನೆಚ್ಚರಿಕೆ ಕುರಿತ ಮಾಹಿತಿ ರವಾನಿಸಿತು. ಯಾವ ಪ್ರದೇಶಕ್ಕೆ ಹೋಗಬೇಕು ? ಯಾವ ಪ್ರದೇಶಕ್ಕೆ ಹೋಗಬಾರದು? ಎಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು? ಎಲ್ಲ ಮಾಹಿತಿಗಳೂ ಬೆರಳ ತುದಿಯಲ್ಲೇ ಸಿಗತೊಡಗಿದವು. ಸಾಮಾಜಿಕ ಅಂತರದ ಮಹತ್ವವೇನು? ಅದು ಹೇಗೆ ಈ ಕಾಯಿಲೆಯನ್ನು ತಡೆಯಲು ಸಹಾಯವಾದೀತು? ಇತ್ಯಾದಿ ಮಾಹಿತಿಯೂ ಪುಂಖಾನುಪುಂಖವಾಗಿ ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ, ನಾಗರಿಕರಿಗೆ ಲಭ್ಯವಾಯಿತು. ಒಟ್ಟು ಪರಿಣಾಮವೆಂದರೆ ದಕ್ಷಿಣ ಕೊರಿಯಾ ಕೋವಿಡ್‌ 19 ಮಾರಿಯನ್ನು ಹೆಬ್ಟಾಗಿಲಲ್ಲೇ ತಡೆಯುವಲ್ಲಿ ಒಂದಿಷ್ಟು ಮಟ್ಟಿಗೆ ಯಶಸ್ವಿಯಾಗಿದೆ.

ವಿಶೇಷ ಗುರುತಿನ ಚೀಟಿ
ಕೋವಿಡ್‌-19 ಪೀಡಿತರಿಗೆ, ಶಂಕಿತರಿಗೆ ವಿಶೇಷ ಗುರುತಿನ ನಂಬರ್‌ ನೀಡಲಾಗುತ್ತಿದ್ದು, ಸಂಗ್ರಹಿಸಿದ ಮಾಹಿತಿಯನ್ನು ಗುಪ್ತವಾಗಿಡಲಾಗುತ್ತಿದೆ. ಕೋವಿಡ್‌ 19 ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡುತ್ತಿದ್ದು, ಪ್ರತಿ ಓರ್ವ ರೋಗಿಯ ಸಂಪೂರ್ಣ ವಿವರಣೆಯ ಮಾಹಿತಿಯನ್ನು ಬಿತ್ತರಿಸುತ್ತಿದೆ. ಉದಾಹರಣೆ: 102 ಸಂಖ್ಯೆಯ ರೋಗಿ ಆವರ ಸ್ನೇಹಿತನೊಂದಿಗೆ ಇಂಥ ಚಿತ್ರಮಂದಿರದ ಇಂಥ ಆಸನಗಳಲ್ಲಿ ಕುಳಿತು ಚಿತ್ರ ವೀಕ್ಷಣೆ ಮಾಡಿದ್ದರು. ಅವರು ಟ್ಯಾಕ್ಸಿಯಲ್ಲಿ ಥಿಯೇಟರ್‌ಗೆ ತೆರಳಿದ್ದರು. 151 ಸಂಖ್ಯೆಯ ರೋಗಿ ಇಂಥ‌ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದ. 587 ಸಂಖ್ಯೆಯ ರೋಗಿ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಿ ಪಾರ್ಟಿಗೆ ತೆರಳಿದ್ದ. ಅಲ್ಲಿ 20 ಜನರನ್ನು ಭೇಟಿಯಾಗಿದ್ದ.-ಹೀಗೆ ಪ್ರತಿ ಚಲನವಲನದ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಇದರಿಂದ ಉಳಿದವರು ಜಾಗೃತರಾಗುತ್ತಿದ್ದಾರೆ.

ಸ್ಥಳೀಯ ಸರಕಾರದ ಸುದ್ದಿ ಜಾಲ
ಸರಕಾರವೇ ಕೋವಿಡ್‌-19 ಎಂಬ ಸುದ್ದಿ ಜಾಲತಾಣವನ್ನು ನಿರ್ವಹಿಸುತ್ತಿದೆ. ಅಲ್ಲಿಯೂ ಸೋಂಕಿತರ ಬಗೆಗಿನ ಮಾಹಿತಿ ನಾಗರಿಕರಿಗೆ ಲಭ್ಯ (ಹೆಸರು ಇತ್ಯಾದಿ ವಿವರ ಬಿಟ್ಟು). ಇದರೊಂದಿಗೆ ಉಳಿದ ಮಾಹಿತಿಯನ್ನು ನೀಡಿ ವದಂತಿ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯುತ್ತಿದೆ. ಇದರಿಂದ ಸಾರ್ವಜನಿಕರಲ್ಲೂ ಅನಗತ್ಯ ಗೊಂದಲ ಉಂಟಾಗುವುದು ತಪ್ಪುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next