Advertisement
ವೆನ್ಲಾಕ್ ನ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟ ವೃದ್ಧೆ ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದವರಾಗಿದ್ದು, ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಈ ಮೊದಲು ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಎ. 18ರಂದು ವೆನ್ಲಾಕ್ ಗೆ ದಾಖಲಿಸಲಾಗಿತ್ತು. ವೈರಲ್ ನ್ಯೂಮೋನಿಯಾ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕ್ರೋನಿಕ್ ಅಬ್‌ಸ್ಟ್ರಕ್ಟಿವ್ ಫುಲ್‌ಮೋನರಿ ಕಾಯಿಲೆ ಮತ್ತು ಮಧುಮೇಹ ರೋಗದಿಂದ ಕೂಡ ಅವರು ಬಳಲುತ್ತಿದ್ದರು.
ವೃದ್ಧೆಯ ಶವಸಂಸ್ಕಾರವನ್ನು ಬೋಳೂರಿನ ರುದ್ರಭೂಮಿಯಲ್ಲಿ ಗುರುವಾರ ರಾತ್ರಿ ನೆರವೇರಿಸಲಾಯಿತು. ಕೋವಿಡ್-19 ದಿಂದ ಮೃತಪಟ್ಟವರ ಶವ ಸಂಸ್ಕಾರ ಕ್ರಿಯೆಗೆ ಈ ಹಿಂದೆ ನಗರದ ವಿವಿಧ ರುದ್ರಭೂಮಿ ಪ್ರದೇಶದಲ್ಲಿ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಮುಂದೆ ಬೋಳೂರಿನಲ್ಲಿಯೇ ನೆರವೇರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಸಕರ ಸಮ್ಮುಖದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
Related Articles
ಇದೇವೇಳೆ ಮಂಗಳೂರಿನ ಬೋಳೂರು ನಿವಾಸಿ 58 ವರ್ಷದ ಮಹಿಳೆಯಲ್ಲಿ ಗುರುವಾರ ಕೋವಿಡ್-19 ದೃಢಪಟ್ಟಿದೆ. ಮಹಿಳೆ ಅನಾರೋಗ್ಯದ ಕಾರಣದಿಂದ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾರದ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದರು. ಕಳೆದೆರಡು ದಿನಗಳಿಂದ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬೋಳೂರು ಪ್ರದೇಶವನ್ನು ಜಿಲ್ಲಾಡಳಿತವು ಗುರುವಾರ ಸೀಲ್‌ಡೌನ್ ಮಾಡಿದೆ.
Advertisement
ಈ ಮಹಿಳೆ ದಾಖಲಾಗಿದ್ದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಎ. 27ರಂದು ಕೋವಿಡ್-19 ದೃಢಪಟ್ಟಿತ್ತು. ಈ ಮಹಿಳೆಯ ಮುಖಾಂತರ ಬೋಳೂರಿನ ಮಹಿಳೆಗೆ ಕೋವಿಡ್-19 ಸೋಂಕು ಹರಡಿದೆ. ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಮನೆಯವರನ್ನು ಕ್ವಾರಂಟೈನ್ ಮಾಡ ಲಾಗಿದ್ದು, ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
548 ವರದಿ ಬರಲು ಬಾಕಿಜಿಲ್ಲೆಯಲ್ಲಿ ಗುರುವಾರ 126 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷೆಯ ವರದಿ ಸ್ವೀಕೃತವಾಗಿದ್ದು, ಒಂದು ಪಾಸಿಟಿವ್ ಪ್ರಕರಣ ದಾಖಲಾಗಿದೆ. ಗುರುವಾರ 279 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಒಟ್ಟು 548 ಮಂದಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ. 142 ಮಂದಿಯನ್ನು ಹೊಸದಾಗಿ ತಪಾಸಣೆಗೊಳಪಡಿಸಲಾಗಿದ್ದು, 9 ಮಂದಿ ಹೊಸದಾಗಿ ದಾಖಲಾಗಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 9 ಮಂದಿ ಗುರುವಾರ ದಾಖಲಾಗಿದ್ದಾರೆ. ಮತ್ತೆ ಇಬ್ಬರ ಸ್ಯಾಂಪಲ್ ರವಾನೆ
ಮುಂಡಾಜೆ: ಫಸ್ಟ್ ನ್ಯೂರೋ ಆಸ್ಪತ್ರೆ ಯಲ್ಲಿ ಚಿಕಿತ್ಸೆಗೆ ಒಳಗಾದ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಮಹಿಳೆ ಹಾಗೂ ಆಕೆಯ ಪತಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್-19 ಪರೀಕ್ಷೆಗೆ ಬುಧವಾರ ಸಂಜೆ ಕಳುಹಿಸಲಾಗಿದೆ. ಸೋಂಕಿನ ಮೂಲ ಇನ್ನೂ ನಿಗೂಢ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ 16 ಕೋವಿಡ್-19 ಸೋಂಕಿತರ ಪೈಕಿ ಎಂಟು ಮಂದಿಯೂ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಎ. 23ರಂದು ಮೃತಪಟ್ಟ ಬಂಟ್ವಾಳ ಕಸಬಾದ ವೃದ್ಧೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಾಗಿದ್ದರು. ಆ ವೃದ್ಧೆಯ ಸೊಸೆ ಎ. 19ರಂದು ಮೃತಪಟ್ಟಿದ್ದು, ಅತ್ತೆಯ ಉಪಚಾರದ ಹಿನ್ನೆಲೆಯಲ್ಲಿ ಅವರು ಅದೇ ಆಸ್ಪತ್ರೆಗೆ ಬಂದು ಹೋಗುತ್ತಿದ್ದವರು. ಎ. 30ರಂದು ನಿಧನ ಹೊಂದಿದ ಕಸಬಾದ ಇನ್ನೋರ್ವ ವೃದ್ಧೆ ಈ ಅತ್ತೆ-ಸೊಸೆಯ ನೆರೆಮನೆಯವರು. ಅವರ ಪುತ್ರಿಯೂ ಕೋವಿಡ್-19 ತುತ್ತಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಕೋವಿಡ್-19 ಪಾಸಿಟಿವ್ ಬಂದ ಶಕ್ತಿನಗರದ ವೃದ್ಧೆಯು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಮತ್ತು ಅವರ ಪುತ್ರ ಅದೇ ಆಸ್ಪತ್ರೆಯಲ್ಲಿ ತಾಯಿಯ ಸಹಾಯಕ್ಕಿದ್ದವರು. ಕೋವಿಡ್-19 ದೃಢಪಟ್ಟ ಪಾಣೆಮಂಗಳೂರಿನ ಮಹಿಳೆ ಕೂಡ ಅದೇ ಆಸ್ಪತ್ರೆಯಲ್ಲಿ ಕೆಲಸಕ್ಕಿದ್ದವರು. ಇನ್ನು ಗುರುವಾರ ಕೋವಿಡ್-19 ದೃಢಪಟ್ಟ ಬೋಳೂರಿನ ಮಹಿಳೆಯು ಕಳೆದ ಒಂದು ವಾರದ ಹಿಂದಷ್ಟೇ ಅಲ್ಲಿಂದಲೇ ಚಿಕಿತ್ಸೆ ಪಡೆದು ಬಿಡುಗಡೆಗೊಂಡವರು. ಒಟ್ಟಾರೆ ಎಂಟು ಪ್ರಕರಣಗಳಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆ ಹೆಸರು ಕೇಳಿ ಬಂದಿದ್ದರೂ ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗುತ್ತಿರುವುದಕ್ಕೆ ಮೂಲ ಯಾವುದು ಎಂಬುದು ಇನ್ನೂ ನಿಗೂಢವಾಗಿಯೇ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿದೆ. ಅತ್ತ ಸಂಬಂಧಪಟ್ಟವರೂ ಸರಣಿ ಸೋಂಕಿನ ಪ್ರಕರಣಗಳ ಮೂಲ ಪತ್ತೆ ಅಥವಾ ಆ ಬಗ್ಗೆ ತನಿಖೆಗೆ ಮುಂದಾಗದಿರುವುದು ಅನುಮಾನಕ್ಕೆ ಎಡೆಮಾಡುತ್ತಿದೆ. ಸೋಂಕಿತ 22ರ ಪೈಕಿ ಮೂವರ ಸಾವು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಒಟ್ಟು ಸೋಂಕಿತರ ಸಂಖ್ಯೆ 22ಕ್ಕೇರಿದ್ದು, ಆ ಪೈಕಿ ಓರ್ವ ಭಟ್ಕಳ, ಓರ್ವ ಉಡುಪಿ ಹಾಗೂ ನಾಲ್ವರು ಕೇರಳದವರಾಗಿದ್ದಾರೆ. ಉಳಿದ 16 ಮಂದಿ ದ.ಕ. ಜಿಲ್ಲೆಯವರು. ಒಟ್ಟು ಸೋಂಕಿತರ ಪೈಕಿ 12 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದ.ಕ. ಜಿಲ್ಲೆಯ ಮೂಲದವರನ್ನು ತೆಗೆದುಕೊಂಡಾಗ 16 ಮಂದಿ ಸೋಂಕಿತರ ಪೈಕಿ 6 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇನ್ನು ಏಳು ಮಂದಿ ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮೂವರು ಕೋವಿಡ್-19 ದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆರೆಂಜ್‌ನಿಂದ
ರೆಡ್ ಝೋನ್‌ಗೆ
ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚಳವಾಗುವ ಮೂಲಕ ಕಿತ್ತಳೆ ವಲಯದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಕೆಂಪು ವಲಯದ ಪಟ್ಟಿಗೆ ಸೇರ್ಪಡೆಯಾಗಿದೆ. ರಾಜ್ಯ ಆರೋಗ್ಯ ಇಲಾಖೆ ಬುಧವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದ.ಕ. ಜಿಲ್ಲೆ ಕೆಂಪು ವಲಯದಲ್ಲಿರುವುದು ಗೊತ್ತಾಗಿದೆ. ಕಂಟೈನ್‌ಮೆಂಟ್ ಝೋನ್
– ಪೂರ್ವಭಾಗದಿಂದ ಜೇಮ್ಸ್ ಡಿ’ಸೋಜಾ ಹೌಸ್
– ಪಶ್ಚಿಮದಿಂದ ಹಿಂದೂ ರುದ್ರಭೂಮಿ ಬೋಳೂರು
– ಉತ್ತರಕ್ಕೆ ಹೊಟೇಲ್ ಬಿ.ಜೆ. ಆ್ಯಂಡ್ ಹೊಟೇಲ್ ಶ್ರೀ ವಿನಾಯಕ ಸುಲ್ತಾನ್‌ಬತ್ತೇರಿ ರಸ್ತೆ
– ದಕ್ಷಿಣಕ್ಕೆ ಹಿಂದೂ ರುದ್ರಭೂಮಿ ಬೋಳೂರು,
– ಸುಲ್ತಾನ್‌ಬತ್ತೇರಿ ಪ್ರವೇಶ ರಸ್ತೆ ಬಫರ್ ಝೋನ್
– ಪೂರ್ವಕ್ಕೆ ಬೋಂದೆಲ್
– ಪಶ್ಚಿಮಕ್ಕೆ ಓಶಿಯನ್ (ಅರಬ್ಬೀ ಸಮುದ್ರ)
– ಉತ್ತರಕ್ಕೆ ಎಂಸಿಎಫ್ ರಾಷ್ಟ್ರೀಯ ಹೆದ್ದಾರಿ
– ದಕ್ಷಿಣಕ್ಕೆ ಬೋಳಾರ ನೇತ್ರಾವತಿ ನದಿ ಜಿಲ್ಲೆಗೆ ಮರಳಿದ ಪೊನ್ನುರಾಜ್
ಮಂಗಳೂರು: ಕೋವಿಡ್-19 ನಿಯಂತ್ರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಗೆ ನಿಯೋಜನೆಗೊಂಡಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್ ಅವರು ಜಿಲ್ಲೆಗೆ ಮರಳಿ ಬಂದಿದ್ದು, ಜಿಲ್ಲೆಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ವರದಿಯಾಗುತ್ತಿದ್ದಂತೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ರೋಗ ಹರಡ ದಂತೆ ಜಿಲ್ಲಾಡಳಿತದ ಜತೆ ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಕೆಲವೊಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಪೊನ್ನುರಾಜ್ ಬಳಿಕ ಜಿಲ್ಲೆಯಲ್ಲಿ ಕಾಣಿಸಿ ಕೊಂಡಿರಲಿಲ್ಲ. ಕೋವಿಡ್-19 ದಿಂದ ಎರಡು ಸಾವು ಸಂಭವಿಸಿ ಅಂತ್ಯಕ್ರಿಯೆಗೆ ಜಿಲ್ಲಾಡಳಿತ ಹೆಣಗಾಡುವ ಪರಿಸ್ಥಿತಿ ಎದುರಾದಾಗ ಅನುಭವಿ ಆಡಳಿತಗಾರ ಪೊನ್ನುರಾಜ್ ಅವರ ಅನುಪಸ್ಥಿತಿ ಎದ್ದು ಕಂಡಿತ್ತು. ಕೆಲವು ದಿನಗಳಿಂದ ಬೆಂಗಳೂರಿನ ಕಚೇರಿ ಯಿಂದಲೇ ಜಿಲ್ಲೆಯ ಪರಿಸ್ಥಿತಿ ಮೇಲೆ ನಿಗಾ ಇರಿಸಿದ್ದ ಅವರು ಮತ್ತೆ ಜಿಲ್ಲೆಗೆ ಆಗಮಿಸಿ ಎರಡು ದಿನಗಳಿಂದ ಮಾರ್ಗದರ್ಶನ ನೀಡುತ್ತಿದ್ದಾರೆ. ಇದೀಗ ಮತ್ತೆ ಅವರು ಆಯಕಟ್ಟಿನ ಹಾಗೂ ಸಮಸ್ಯಾತ್ಮಕ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.