Advertisement

ಮದುಮಗನೊಂದಿಗಿದ್ದ 21 ಜನರಿಗೆ ಕೋವಿಡ್-19 ಸೋಂಕು

11:51 PM Jul 01, 2020 | Sriram |

ಭಟ್ಕಳ: ಬೆಂಗಳೂರಿನಿಂದ ಭಟ್ಕಳಕ್ಕೆ ಬಂದು ಮದುವೆಯಾಗಿ ಅದೇ ದಿನ ಮಂಗಳೂರಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತ ಪಟ್ಟಿದ್ದ ವ್ಯಕ್ತಿಗೆ ಕೋವಿಡ್-19 ದೃಢವಾಗಿದ್ದು ಈತನ ಸಂಪರ್ಕಕ್ಕೆ ಬಂದಿದ್ದ ಹಲವರಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಸಹಾಯಕ ಆಯುಕ್ತ ಭರತ್‌ ಎಸ್‌. ಹೇಳಿದರು.

Advertisement

ಅವರು ಪತ್ರಕರ್ತರೊಂದಿಗೆ ಮಾತನಾಡಿ, ಆತನು ಬೆಂಗಳೂರಿನಿಂದ ಜೂ.22ಕ್ಕೆ ಬಂದಿದ್ದು 25ರಂದು ಭಟ್ಕಳದಲ್ಲಿ ಮದುವೆ ಇತ್ತು. ಆದರೆ ಅಂದೇ ಆತನಿಗೆ ಜ್ವರ ಉಲ್ಬಣಗೊಂಡ ಕಾರಣ ಆತ ಮಂಗಳೂರಿಗೆ ತೆರಳಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಆತನ ಗಂಟಲು ದ್ರವ ಪರೀಕ್ಷೆಯಲ್ಲಿ ಆತನಿಗೆ ಕೋರೊನಾ ಇರುವುದು ದೃಢವಾಗಿರುವ ಕಾರಣ ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ ಎಂದರು.

ಬೆಂಗಳೂರಿನಿಂದ ಬಂದಿದ್ದ ಆತನಿಂದ ಈಗಾಗಲೇ 21 ಜನಕ್ಕೆ ಕೋವಿಡ್-19 ಇರುವುದು ದೃಢವಾಗಿದ್ದು ಓರ್ವ ಧಾರ್ಮಿಕ ಮುಖಂಡರಿಗೂ ಕೂಡಾ ಈತನ ಸಂಪರ್ಕಕ್ಕೆ ಬಂದಿದ್ದರಿಂದಲೇ ಕೊರೊನಾ ಬಂದಿದೆ ಎಂದ ಅವರು, ಕೋವಿಡ್-19 ಸೋಂಕಿತರಿಗಾಗಿ ಸೊನಾರಕೇರಿಯಲ್ಲಿ ಒಂದು ಕೋವಿಡ್‌-19 ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಸ್ಥಾಪಿಸಲಾಗಿದ್ದು ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಭಟ್ಕಳದಲ್ಲಿ ಒಟ್ಟೂ 100 ಹಾಸಿಗೆಗಳ ಕೋವಿಡ್‌-19 ಆಸ್ಪತ್ರೆ ಮಾಡಲು ಕಟ್ಟಡದ ಅಗತ್ಯತೆ ಇದ್ದು ನಗರಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ಮಾಡಬೇಕಾಗಿದೆ ಎಂದರು.

ಜೂ.25ರಂದು ಆತನ ಮದುವೆಗೆ ಹೋದವರು ಸ್ವಯಂ ಆಗಿ ಕೋವಿಡ್-19 ಟೆಸ್ಟ್‌ ಮಾಡಿಸಿಕೊಳ್ಳಲು ಬರಬೇಕು ಎಂದು ಕರೆ ನೀಡಿದರು.

Advertisement

ಮದುವೆಗೆ ಎಷ್ಟು ಜನ ಬಂದಿದ್ದರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಎಎಸ್‌ಪಿ ನಿಖೀಲ್‌, 50 ಜನಕ್ಕೆ ಪರವಾನಿಗೆ ಕೊಟ್ಟಿದ್ದೆವು. ಆದರೆ 150 ರಿಂದ 175 ಜನ ಬಂದಿರುವ ಸಾಧ್ಯತೆ ಇದೆ. ಈ ಕುರಿತು ಈಗಾಗಲೇ ನೋಡಲ್‌ ಅಧಿಕಾರಿಯಿಂದ ವರದಿ ಬಂದ ನಂತರ ತಿಳಿಯಲಿದೆ ಎಂದರು.

ಭಟ್ಕಳದಲ್ಲಿ ಕೋವಿಡ್‌-19 ನಿಯಂತ್ರಣಕ್ಕೆ ಐದು ಕಡೆಗಳಲ್ಲಿ ಫಿವರ್‌ ಕ್ಲಿನಿಕ್‌ ಸ್ಥಾಪಿಸುತ್ತಿದ್ದು ಜನರು ಸ್ವಯಂ ಆಗಿ ಬಂದು ಜ್ವರ ತಪಾಸಣೆ ಮಾಡಿಸಿಕೊಳ್ಳಬೇಕು. 60 ಕ್ಕಿಂತ ಹೆಚ್ಚು ವಯಸ್ಸಾದವರು ಕಡ್ಡಾಯವಾಗಿ ಎರಡು ದಿನಕ್ಕೊಮ್ಮೆಯಾದರೂ ಪರೀಕ್ಷಿಸಿಕೊಳ್ಳಬೇಕು. ಈಗಾಗಲೇ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸರ್ವೇ ಮಾಡಿದಂತೆ ನಾವು ಎಲ್ಲರ ವಿವರಗಳನ್ನು ಹೊಂದಿದ್ದು ಅದರಂತೆ ಕೋವಿಡ್‌ ಕ್ಲಿನಿಕ್‌ಗೆ ಅವರನ್ನು ಕರೆಸಲಾಗುವುದು ಎಂದರು. ತಹಶೀಲ್ದಾರ್‌ ಎಸ್‌. ರವಿಚಂದ್ರ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next