ಹಾವೇರಿ: ಜಿಲ್ಲೆಯಲ್ಲಿ ಕೋವಿಡ್-19 ಅಟ್ಟಹಾಸ ಮುಂದುವರಿದಿದ್ದು ರವಿವಾರ ಒಂದೇ ದಿನ 12 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇವರಲ್ಲಿ ಓರ್ವ ವೈದ್ಯರು, ಮೂವರು ಆಶಾ ಕಾರ್ಯಕರ್ತೆಯರು, ಐದು ವರ್ಷದ ಬಾಲಕಿ ಹಾಗೂ 15 ವರ್ಷದ ಬಾಲಕ ಸೇರಿದ್ದಾರೆ.
ನಿನ್ನೆಯವರೆಗೂ ಕೊರೊನಾಮುಕ್ತವಾಗಿದ್ದ ರಟ್ಟಿಹಳ್ಳಿ ತಾಲೂಕಿನಲ್ಲಿ ರವಿವಾರ ಆರು ಸೋಂಕಿತರು ಪತ್ತೆಯಾಗಿದ್ದಾರೆ. ಹಾನಗಲ್ಲ ತಾಲೂಕಿನಲ್ಲಿ ಎರಡು, ಸವಣೂರು ತಾಲೂಕಿನಲ್ಲಿ ಎರಡು ರಾಣಿಬೆನ್ನೂರು ತಾಲೂಕಿನಲ್ಲಿ ಒಂದು ಕೋವಿಡ್-19 ಪಾಸಿಟಿವ್ ಪ್ರಕರಣ ಕಂಡು ಬಂದಿದೆ.
ಮಾಸೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ 38 ವರ್ಷದ ವೈದ್ಯ, ಮಾಸೂರಿನ 50 ವರ್ಷದ ಪುರುಷ, 45 ವರ್ಷದ ಮಹಿಳೆ, 22 ವರ್ಷದ ಯುವಕ, 15 ವರ್ಷದ ಬಾಲಕ, 35 ವರ್ಷದ ಪುರುಷ, ಸವಣೂರಿನ 27 ವರ್ಷದ ಪುರುಷ, 40 ವರ್ಷದ ಮಹಿಳೆ, ಹಾನಗಲ್ಲ ತಾಲೂಕಿನ ಆಶಾಕಾರ್ಯಕರ್ತೆಯರಾದ 36, 41, 50 ವರ್ಷದ ಮಹಿಳೆಯರು, ರಾಣೆಬೆನ್ನೂರಿನ 5 ವರ್ಷದ ಬಾಲಕಿಗೆ ಕೋವಿಡ್-19 ದೃಢಪಟ್ಟಿದೆ.
ರಟ್ಟಿಹಳ್ಳಿ ತಾಲೂಕಿನಲ್ಲಿ ಕಂಡುಬಂದ ಎಲ್ಲ ಸೋಂಕಿತರಿಗೆ ಪಿ-9546ರ ಸಂಪರ್ಕದಿಂದ ಸೋಂಕು ತಗುಲಿದೆ. ರಾಣಿಬೆನ್ನೂರಿನ ಬಾಲಕಿಗೆ ಪಿ- 9411ರ ಸಂಪರ್ಕದಿಂದ ಸೋಂಕು ಹರಡಿದೆ. ಸವಣೂರು ತಾಲೂಕಿನ ಇಬ್ಬರಿಗೆ ಕಂಟೈನ್ಮೆಂಟ್ ಪ್ರದೇಶದ ಸಂಪರ್ಕದಿಂದ ಸೋಂಕು ತಗುಲಿದೆ ಮತ್ತು ಹಾನಗಲ್ಲ ತಾಲೂಕಿನ ಮೂವರಿಗೆ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ಕೋವಿಡ್-19 ಪಾಸಿಟಿವ್ ಕಂಡು ಬಂದ ಮಾಸೂರಿನ ಹುಬ್ಬಳ್ಳಿಯವರ ಓಣಿ ಮತ್ತು ಸರ್ವಜ್ಞ ಪ್ಲಾಟ್, ದೂದಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕ್ವಾರಂಟೈನ್ ಕೇಂದ್ರ, ಸವಣೂರಿನ ಖಾದರ್ ಬಾಗ್ ಓಣಿ, ರಾಣಿಬೆನ್ನೂರಿನ ಮಾರುತಿ ನಗರ, ಹಾನಗಲ್ಲನ ಕಮತಗೇರಿ ಓಣಿ, ಇಂದಿರಾ ನಗರ, ಕಲ್ಲಹಕ್ಕಲ ಓಣಿ ಒಳಗೊಂಡಿರುವ 100 ಮೀ. ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶವನ್ನಾಗಿ ಪರಿವರ್ತಿಸಲಾಗಿದ್ದು, ಸುತ್ತಲಿನ 200 ಮೀ. ಪ್ರದೇಶವನ್ನು ಬಫರ್ ಝೋನ್ ಆಗಿ ಪರಿಗಣಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 68 ಕೋವಿಡ್-19 ಸೋಂಕಿತರು ಕಂಡು ಬಂದಿದ್ದು, ಇವರಲ್ಲಿ 25 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 43 ಪ್ರಕರಣಗಳು ಸಕ್ರಿಯವಾಗಿವೆ. ಇದರಲ್ಲಿ ಒಬ್ಬ ರೋಗಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.