ಹಾವೇರಿ: ಮಹಾರಾಷ್ಟ್ರ ರಾಜ್ಯದಿಂದ `ಸೇವಾ ಸಿಂಧು’ ಪಾಸ್ ಪಡೆದು ಜಿಲ್ಲೆಗೆ ಆಗಮಿಸಿದ್ದ ಎರಡು ವರ್ಷದ ಮಗು ಸೇರಿದಂತೆ ನಾಲ್ವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ರಾಣಿಬೆನ್ನೂರು ತಾಲೂಕು ತುಮ್ಮಿನಕಟ್ಟಿ ಗ್ರಾಮದವರಾದ ಎರಡು ವರ್ಷದ ಗಂಡು ಮಗು (ಪಿ-2494), 34ವರ್ಷದ ಪುರುಷ (ಪಿ-2495 ), 28ವರ್ಷದ ಮಹಿಳೆ (ಪಿ-2496) ಹಾಗೂ 22 ವರ್ಷದ ಪುರುಷ (ಪಿ- 2497) ಗುರುವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಪಿ-2495ಮತ್ತು ಪಿ-2496 ಗಂಡ, ಹೆಂಡತಿ ಹಾಗೂ ಪಿ-2494 ಮಗು ಒಂದೇ ಕುಟುಂಬದವಾಗಿದ್ದಾರೆ. ಕೋವಿಡ್-19 ಪಾಸಿಟಿವ್ ಬಂದಿರುವುದನ್ನು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ದೃಢಪಡಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಪಾಂಡಪಾಡ್ವಾದ ಕಲ್ವಾದಲ್ಲಿ ಬೀದಿ ವ್ಯಾಪಾರ ಮಾಡಿಕೊಂಡಿದ್ದ ಇವರು `ಸೇವಾ ಸಿಂಧು’ ಆಪ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಬಸ್‌ನಲ್ಲಿ ಬಂದಿದ್ದರು. ಇವರನ್ನು ಮೇ 24ರಂದು ಮಾಕನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇರಿಸಿ, ಗಂಟಲು ದ್ರವ ಮಾದರಿಯನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಗುರುವಾರ ನಾಲ್ಕು ಜನರಿಗೆ ಕೋವಿಡ್ ಸೋಂಕು ದೃಢಗೊಂಡಿರುವ ವರದಿ ಬಂದಿದೆ. ನಿಗದಿತ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಾಕನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 100 ಮೀಟರ್ ವ್ಯಾಪ್ತಿಯನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಹಾಗೂ ಬಫರ್ ಝೋನ್ ಎಂದು ಗುರುತಿಸಲಾಗಿದೆ. ಈ ಕಂಟೈನ್‌ಮೆಂಟ್ ಹಾಗೂ ಬಫರ್ ಝೋನ್ ಪ್ರದೇಶಕ್ಕೆ ಇನ್ಸಿಡೆಂಟ್ ಕಮಾಂಡರ್ ಆಗಿ ರಾಣಿಬೆನ್ನೂರ ತಹಶೀಲ್ದಾರ್ ಬಸವನಗೌಡ ಕೊಟೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಏಳು ಸಕ್ರಿಯ ಪ್ರಕರಣ…
ಜಿಲ್ಲೆಯಲ್ಲಿ ಮೇ 27 ವರೆಗೂ ಆರು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ಮೂವರಿಗೆ ಚಿಕಿತ್ಸೆ ಮುಂದುವರಿದಿತ್ತು. ಗುರುವಾರ ಮತ್ತೆ ನಾಲ್ವರಿಗೆ ಪಾಸಿಟಿವ್ ಕಂಡು ಬಂದಿದ್ದರಿಂದ ಜಿಲ್ಲೆಯಲ್ಲಿ ಈಗ ಏಳು ಪ್ರಕರಣಗಳು ಸಕ್ರಿಯವಾಗಿವೆ