ಹೊಸದಿಲ್ಲಿ: ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಇಂದು ಬೆಳಗ್ಗೆ ಆರೋಗ್ಯ ಇಲಾಖೆ ನೀಡಿದ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 84,332 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ದೇಶದಲ್ಲಿ ಇದುವರೆಗೆ ಒಟ್ಟು ಪತ್ತೆಯಾದ ಕೋವಿಡ್ ಪ್ರಕರಣಗಳ ಸಂಖ್ಯೆ 2,93,59,155ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 4002 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 3,67,081ಕ್ಕೆ ತಲುಪಿದೆ.
ತಮಿಳುನಾಡಿನಲ್ಲಿ ಅತೀ ಹೆಚ್ಚು ಅಂದರೆ 15,759 ಪ್ರಕರಣಗಳು ಪತ್ತೆಯಾಗಿದೆ. ಉಳಿದಂತೆ ಕೇರಳದಲ್ಲಿ 14,233 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 11,766 ಪ್ರಕರಣಗಳು, ಕರ್ನಾಟಕದಲ್ಲಿ 8249 ಪ್ರಕರಣಗಳು ಮತ್ತು ಆಂಧ್ರ ಪ್ರದೇಶದಲ್ಲಿ 8239 ಹೊಸ ಸೋಂಕು ಪ್ರಕರಗಳು ಪತ್ತೆಯಾಗಿದೆ.
ಇದನ್ನೂ ಓದಿ:ಮೆಹುಲ್ ಚೋಕ್ಸಿಗೆ ಜಾಮೀನು ನೀಡಲು ನಿರಾಕರಿಸಿದ ಡೊಮಿನಿಕಾ ಹೈಕೋರ್ಟ್
ದೇಶದಲ್ಲಿ ಒಟ್ಟು ಪತ್ತೆಯಾದ ಪ್ರಕರಣಗಳ ಪೈಕಿ ಶೇಕಡಾ 69.07 ರಷ್ಟು ಪ್ರಕರಣಗಳು ಈ ಐದು ರಾಜ್ಯಗಳಲ್ಲೇ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ ಹೆಚ್ಚಿದ್ದು, ಈ ಅವಧಿಯಲ್ಲಿ 2619 ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ರಿಕವರಿ ರೇಟ್ ಉತ್ತಮವಾಗಿದ್ದು, ಶೇ. 95.07 ಗೆ ಏರಿಕೆಯಾಗಿದೆ. ಈ 24 ಗಂಟೆ ಅವಧಿಯಲ್ಲಿ 1,21,311 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 10,80,690 ಸಕ್ರಿಯ ಕೋವಿಡ್ ಪ್ರಕರಣಗಳಿವೆ.