ನವದೆಹಲಿ:ದೇಶದಲ್ಲಿ ಕೋವಿಡ್ ಸೋಂಕು ಮತ್ತೆ ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸೋಮವಾರದಿಂದ ಮಂಗಳವಾರಕ್ಕೆ(ಮಾರ್ಚ್ 30) 24 ಗಂಟೆಗಳ ಅವಧಿಯಲ್ಲಿ 56,211 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಪಾಣೆಮಂಗಳೂರು: ಗ್ಯಾಸ್ ಟ್ಯಾಂಕರ್- ಇಕೋ ಕಾರು ಅಪಘಾತ, ಆರು ಮಂದಿ ಗಂಭೀರ
ಭಾರತದಲ್ಲಿ ದಿನಂಪ್ರತಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಒಟ್ಟು ಸಕ್ರಿಯ ಕೋವಿಡ್ ಪ್ರಕರಣ 5.40ಲಕ್ಷಕ್ಕೆ ಏರಿಕೆಯಾಗಿದೆ ಎಂದು ವಿವರಿಸಿದೆ.
ಕಳೆದ 24ಗಂಟೆಗಳಲ್ಲಿ 37,028 ಮಂದಿ ಕೋವಿಡ್ ಸೋಂಕಿತರು ಚೇತರಿಸಿಕೊಂಡಿದ್ದು, ಇದರೊಂದಿಗೆ ದೇಶದಲ್ಲಿ ಕೋವಿಡ್ 19 ಸೋಂಕಿತರ ಚೇತರಿಕೆ ಪ್ರಮಾಣ ಶೇ.94.19ರಷ್ಟಿರುವುದಾಗಿ ವರದಿ ತಿಳಿಸಿದೆ.
ಭಾರತದಲ್ಲಿ ಇದೀಗ ಕೋವಿಡ್ 19 ಸೋಂಕಿತರ ಸಂಖ್ಯೆ ಒಟ್ಟು 1,20,95,855ಕ್ಕೆ ಹೆಚ್ಚಳವಾಗಿದ್ದು, ಈವರೆಗೆ 1,13,93,021 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ. ಕೋವಿಡ್ 19 ಸೋಂಕಿನಿಂದ ಒಟ್ಟು 1,62,114 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.
ಕಳೆದ ಕೆಲವು ದಿನಗಳಿಂದ ದೇಶದಲ್ಲಿ 55,000ಕ್ಕೂ ಅಧಿಕ ಕೋವಿಡ್ 19 ಸೋಂಕು ಪ್ರಕರಣ ವರದಿಯಾಗುತ್ತಿದೆ ಎಂದು ತಿಳಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ(ಮಾರ್ಚ್ 29), ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಮಧ್ಯಪ್ರದೇಶ, ಗುಜರಾತ್, ಕೇರಳ, ತಮಿಳುನಾಡು ಮತ್ತು ಚತ್ತೀಸ್ ಗಢ ಸೇರಿದಂತೆ ಎಂಟು ರಾಜ್ಯಗಳಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದಾಗಿ ತಿಳಿಸಿದೆ.