Advertisement

ಕೊನೆಗೂ ಕೋವಿಡ್‌ಗೆ ತಲೆ ಬಾಗಿದ ಸ್ವೀಡನ್‌

04:09 PM Apr 15, 2020 | sudhir |

ಸ್ಟಾಕ್‌ಹೋಮ್‌: ಕೋವಿಡ್‌ ಹರಡುವುದನ್ನು ತಡೆಯಲು ಯಾವುದೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಗೊಳಿಸಲು ಮುಂದಾಗದೆ ಜನರೇ ತಮ್ಮ ಜವಾಬ್ದಾರಿ ಅರಿತು ವರ್ತಿಸುತ್ತಾರೆ ಎಂದು ಹೇಳುತ್ತಿದ್ದ ಸ್ವೀಡನ್‌ಗೂ ಈಗ ಬಿಸಿ ತಟ್ಟಿದೆ.

Advertisement

ದೇಶದ ಕೆಲವೆಡೆಗಳಲ್ಲಿ ಕೋವಿಡ್‌ ಸಾಮುದಾಯಿಕ ಪ್ರಸರಣ ಹಂತವನ್ನು ಪ್ರವೇಶಿಸಿದ್ದು, ಸರಕಾರ ಕೆಲವು ನಿರ್ಬಂಧಗಳನ್ನು ಜಾರಿಗೆ ತಂದಿದೆ. ಸಂಪೂರ್ಣ ಲಾಕ್‌ಡೌನ್‌ ಅಲ್ಲದಿದ್ದರೂ ಜನರ ಓಡಾಟವನ್ನು ಗಣನೀಯವಾಗಿ ನಿಯಂತ್ರಿಸುವ ನಿಯಮಗಳನ್ನು ರೂಪಿಸಲಾಗಿದೆ. ಕೋವಿಡ್‌ ಹಾವಳಿಯ ಬಳಿಕ ಸ್ವೀಡನ್‌ನಲ್ಲಿ ಆಗಿರುವ ಕೆಲವು ಬದಲಾವಣೆಗಳು ಇಂತಿವೆ.

ಮಾರ್ಗಸೂಚಿ :
50ಕ್ಕಿಂತ ಹೆಚ್ಚು ಜನರು ಒಟ್ಟು ಸೇರಬಾರದು, ಅನಗತ್ಯ ಪ್ರಯಾಣ ಕೈಗೊಳ್ಳಬಾರದು, ಬಾರ್‌ ಮತ್ತು ಹೊಟೇಲುಗಳು ನಿರ್ಬಂಧಗಳನ್ನು ಪಾಲಿಸಿ ವ್ಯಾಪಾರ ನಡೆಸಬೇಕೆಂಬ ಸಾಮಾನ್ಯ ಮಾರ್ಗಸೂಚಿಯನ್ನು ಸ್ವೀಡನ್‌ ಸರಕಾರ ಜಾರಿಗೆ ತಂದಿದೆ. ಇವು ಐಚ್ಛಿಕವಲ್ಲ, ಕಡ್ಡಾಯವಾಗಿ ಪಾಲಿಸಲೇ ಬೇಕಾದ ಮಾರ್ಗಸೂಚಿಗಳು.

ಮನೆಯಿಂದಲೇ ಕೆಲಸ ಮಾಡುವುದಕ್ಕೆ ಉತ್ತೇಜನ ನೀಡುವುದು, ಸೋಂಕು ಬಾಧಿತರನ್ನು ಅಥವಾ ಹಾಗೆಂದು ಅನುಮಾನ ಇರುವವರನ್ನು ಭೇಟಿಯಾಗದೆ ಇರುವುದು ಇತ್ಯಾದಿ ನಿಯಮಗಳನ್ನು ಪ್ರತಿ ನಿಮಿಷವೂ ಪಾಲಿಸಬೇಕೆಂದು ಪ್ರಧಾನಿ ಸ್ಟೀಫ‌ನ್‌ ಲೋಫೆÌನ್‌ ಹೇಳಿದ್ದಾರೆ.

ಸಾರ್ವಜನಿಕ ಸಾರಿಗೆ : ರೈಲುಗಳ ಸಂಚಾರವನ್ನು ಕಡಿಮೆಗೊಳಿಸಲಾಗಿದೆ. ಮರು ಕಾದಿರಿಸುವಿಕೆ ಮತ್ತು ಹಣ ವಾಪಸ್‌ ಕೊಡುವ ಸ್ಕೀಂಗಳನ್ನು ಜಾರಿಗೆ ತರಲಾಗಿದೆ.

Advertisement

ಸ್ಟಾಕ್‌ಹೋಮ್‌ ಮತ್ತು ಗೊಥೆನ್‌ಬರ್ಗ್‌ ನಡುವೆ ರೈಲು ಸೇವೆ ಒದಗಿಸುವ ಎಂಟಿಆರ್‌ಎಕ್ಸ್‌ ಸೀಟಿನ ಪಕ್ಕದಲ್ಲಿ ಖಾಲಿ ಸೀಟು ನೀಡುವ ಆಕರ್ಷಕ ಕೊಡುಗೆಯನ್ನು ಪ್ರಕಟಿಸಿದೆ.

ಪಕ್ಕದ ಡೆನ್ಮಾರ್ಕ್‌ ಗಡಿಯನ್ನು ಮುಚ್ಚಲಾಗಿದೆ. ಹೀಗಾಗಿ ಒರೆಸಂಡ್‌ ಸೇತುವೆ ಮೇಲೆ ಸಂಚರಿಸಬೇಕಾದರೆ ವಿಶೇಷವಾದ ಕಾರಣ ಇರಲೇಬೇಕು ಎಂಬ ನಿಯಮ ಜಾರಿಯಾಗಿದೆ.

ಸ್ಥಳೀಯ ಸಾರಿಗೆ : ಸ್ಥಳೀಯ ಸಾರಿಗೆಯ ಸಂಚಾರ ಸಮಯದಲ್ಲಿ ದೊಡ್ಡ ಬದಲಾವಣೆ ಮಾಡಿರದಿದ್ದರೂ ಜನರಿಗೆ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ರಶ್‌ ಇರುವ ಬಸ್‌ ಹತ್ತದಂತೆ ಹಾಗೂ ನಡೆದು ತಲುಪಲು ಸಾಧ್ಯವಿರುವ ಕಡೆಗೆ ನಡೆದುಕೊಂಡೇ ಹೋಗಲು ಸ್ಥಳೀಯಾಡಳಿತಗಳು ಸೂಚಿಸಿವೆ.

ಹತ್ತುವಾಗ ಮತ್ತು ಇಳಿಯುವಾಗ ಅಂತರ ಕಾಯ್ದುಕೊಳ್ಳಬೇಕು. ಬಸ್‌ಗಳಿಗೆ ಹಿಂಬಾಗಿಲಿನಿಂದಲೇ ಹತ್ತಬೇಕು. ದಟ್ಟಣೆ ಇರುವ ಅವಧಿಯ ಪ್ರಯಾಣವನ್ನು ತಪ್ಪಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ನೀಡಲಾಗಿದೆ.

ಸಿಕ್‌ ಲೀವ್‌ ನಿಯಮ ಬದಲು : ಜನರಿಗೆ ಮನೆಯಲ್ಲಿ ಇರಲು ಅವಕಾಶ ಕೊಡುವ ಸಲುವಾಗಿ ಸರಕಾರ ಸಿಕ್‌ ಲೀವ್‌ (ಅನಾರೋಗ್ಯದ ರಜೆ) ನಿಯಮಗಳನ್ನು ಸಾಕಷ್ಟು ಸಡಿಲಿಸಿದೆ. ಎರಡು ವಾರಗಳ ತನಕ ವೈದ್ಯರ ಶಿಫಾರಸು ಪತ್ರವಿಲ್ಲದೆ ರಜೆ ಹಾಕಬಹುದು.

ಶಾಲೆಗಳು ಮುಚ್ಚುಗಡೆ : ಶಾಲೆ-ಕಾಲೇಜುಗಳನ್ನು ಮುಚ್ಚಲಾಗಿದೆ. ನಗರಪಾಲಿಕೆಗಳಿಗೆ ಮತ್ತು ಸ್ಥಳೀಯಾಡಳಿತಗಳಿಗೆ ಸ್ಥಳೀಯ ಅಗತ್ಯಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ಕೈಗೊಳ್ಳುವ ವಿಶೇಷಾಧಿಕಾರವನ್ನು ನೀಡಲಾಗಿದೆ.

ಕಾರ್ಯಕ್ರಮಗಳು ರದ್ದು : 500ಕ್ಕಿಂತ ಹೆಚ್ಚು ಜನರು ಸೇರುವ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಸಣ್ಣ ಕಾರ್ಯಕ್ರಮಗಳನ್ನು ಏರ್ಪಡಿಸುವವರು ಮುಂಚಿತವಾಗಿ “ಸಂಭವನೀಯ ಅಪಾಯದ ಅವಲೋಕನ’ ಮಾಡಿ ವರದಿ ಸಲ್ಲಿಸಬೇಕು. ಸೋಂಕು ಹರಡುವ ಯಾವುದೇ ಸಾಧ್ಯತೆ ಕಂಡು ಬಂದರೆ ಕಾರ್ಯಕ್ರಮವನ್ನು ರದ್ದು ಮಾಡಬೇಕು.

ಸಾಮಾಜಿಕ ಅಂತರ : ಸಾರ್ವಜನಿಕ ಸ್ಥಳಗಳಲ್ಲಿ ಜನರು ಸುರಕ್ಷಿತ ಸಾಮಾಜಿಕ ಅಂತರವನ್ನು ಪಾಲಿಸುವುದು ಕಡ್ಡಾಯವಾಗಿದೆ. ಇದು ಸ್ವೀಡನ್‌ನಲ್ಲಿರುವ ಪ್ರತಿಯೊಬ್ಬರಿಗೂ ಅನ್ವಯಿಸುವ ನಿಯಮ. ವ್ಯಾಪಾರ ಮಳಿಗೆಗಳಲ್ಲೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next