ಹೊಸದಿಲ್ಲಿ/ಲೇಹ್: ದೇಶದ ಸೇನಾಪಡೆಯಲ್ಲಿ ಇದೇ ಮೊದಲ ಬಾರಿಗೆ ಯೋಧರೊಬ್ಬರಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಲಡಾಖ್ ಸ್ಕೌಟ್ ರೆಜಿಮೆಂಟ್‌ನಲ್ಲಿರುವ 34 ವರ್ಷದ ಯೋಧರಿಗೆ ನಡೆಸಲಾಗಿರುವ ಪರೀಕ್ಷೆಯ ಬಳಿಕ ಈ ಅಂಶ ದೃಢಪಟ್ಟಿದೆ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ. ಹೀಗಾಗಿ, ಕೇಂದ್ರ ಸರಕಾರ ಯೋಧರ ಅನಗತ್ಯ ರಜೆ ರದ್ದು ಮಾಡಿ ಸೋಂಕು ಎದುರಿಸಲು “ಯುದ್ಧ ಸನ್ನದ್ಧ ಸ್ಥಿತಿ’ಯಲ್ಲಿ ಇರುವಂತೆ ಸೂಚಿಸಲಾಗಿದೆ. ದೇಶದಲ್ಲಿ ಇದುವರೆಗೆ 158 ಪ್ರಕರಣಗಳು ದೃಢಪಟ್ಟಿವೆ.
ಲೇಹ್ ಜಿಲ್ಲೆಯ ಚೌಹಟ್ ಗ್ರಾಮಕ್ಕೆ ಯೋಧ ಸೇರಿದವರಾಗಿದ್ದಾರೆ. ಫೆ. 20ರಂದು ಅವರ ತಂದೆ ಇರಾನ್‌ನಿಂದ ತೀರ್ಥ ಯಾತ್ರೆಯಿಂದ ವಾಪಸಾಗಿದ್ದರು. ಅವರಿಂದ ಯೋಧರಿಗೆ ಸೋಂಕು ತಗುಲಿದೆ. ಅದೇ ದಿನ ಯೋಧನ ತಂದೆಗೆ ಸೋಂಕು ಇದ್ದದ್ದು ದೃಢವಾಗಿತ್ತು.
ಫೆ. 29ರಂದು ಅವರನ್ನು ಪ್ರತ್ಯೇಕವಾಗಿ ಇರಿಸುವ ಮೊದಲು ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದರು. ಫೆ. 25ರಿಂದ ಮಾ. 1ರ ವರೆಗೆ ಯೋಧ ರಜೆಯಲ್ಲಿದ್ದರು. ಮಾ. 2ರಂದು ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ಮಾ.7ರಂದು ಆತನನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಮಾ.16ರಂದು ಆತನಿಗೆ ಸೋಂಕು ಇರುವುದು ದೃಢವಾಗಿತ್ತು. ಗಮನಾರ್ಹ ಅಂಶವೆಂದರೆ ಯೋಧನ ಸಹೋದರನಿಗೆ ಕೂಡ ಸೋಂಕು ದೃಢಪಟ್ಟಿದೆ. ಜಿಲ್ಲಾಡಳಿತ ಕೂಡ ಈ ಅಂಶ ಖಚಿತಪಡಿಸಿದೆ.
ಸ್ವಯಂ ಪ್ರತ್ಯೇಕ ವಾಸ: ಪುಣೆಯಲ್ಲಿರುವ ಮಿಲಿಟರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೂಡ ಕೊರೊನಾ ವೈರಸ್‌ನಂತೆ ಹೋಲಿಕೆಯ ಲಕ್ಷಣಗಳು ಅಧಿಕಾರಿಯಲ್ಲಿ ಕಂಡು ಬಂದಿದೆ. ಹೀಗಾಗಿ, ಅವರನ್ನು ಪ್ರತ್ಯೇಕವಾಗಿ ವಾಸಿಸುವಂತೆ ಸೂಚನೆ ನೀಡಲಾಗಿದೆ. ಸಂಸ್ಥೆಯಲ್ಲಿರುವ ಮತ್ತೂಬ್ಬ ಅಧಿಕಾರಿಯ ಪತ್ನಿಯಲ್ಲಿಯೂ ಕೂಡ ಇದೇ ಮಾದರಿಯ ಲಕ್ಷಣಗಳು ಕಂಡು ಬಂದಿವೆ.
ಯುದ್ಧ ಸನ್ನದ್ಧರಾಗಿ: ಯೋಧನಿಗೆ ಸೋಂಕು ಇರುವ ಹಿನ್ನೆಲೆ ಯಲ್ಲಿ ಕೇಂದ್ರ ಸರಕಾರ ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ, ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ), ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ಸ್ ಮತ್ತು ಅಸ್ಸಾಂ ರೈಫಲ್ಸ್‌ಗಳ ಯೋಧರಿಗೆ ನೀಡಲಾಗಿರುವ ರಜೆ ರದ್ದುಗೊಳಿಸಿದೆ. ಕೊರೊನಾ ಸೋಂಕಿನ ವಿರುದ್ಧ ಯುದ್ಧ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚನೆ ನೀಡಲಾಗಿದೆ.
ಇದರ ಜತೆಗೆ ಬಸ್, ವಿಮಾನ, ರೈಲು ಪ್ರಯಾಣ ಬೇಡವೆಂದು ಹೇಳಿದೆ. ಇದರ ಜತೆಗೆ ಎಲ್ಲ ರೀತಿಯ ಸಭೆಗಳನ್ನೂ ಮುಂದೂಡು ವಂತೆ ಸಲಹೆ ಮಾಡಿದೆ. ಯೋಧರ ಕುಟುಂಬ ಸದಸ್ಯರೂ ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗದಂತೆ ಹೇಳಿದೆ. ಇದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿನ ಸಂದೇಶಗಳಿಂದ ಪ್ರಭಾವಿತರಾಗದೇ ಇರುವಂತೆಯೂ ಎಚ್ಚರಿಕೆ ನೀಡಲಾಗಿದೆ.
ಪರೀಕ್ಷೆ ಮುಂದೂಡಿಕೆ: ಐಎಎಫ್ ಈ ವಾರ ನಡೆಸಬೇಕಾಗಿದ್ದ ಕೆಲವು ಪ್ರವೇಶ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಇದರ ಜತೆಗೆ ಭೂಸೇನೆ ಕೂಡ ರಜೆಯಿಂದ ಕರ್ತವ್ಯಕ್ಕೆ ಹಿಂತಿರುಗಿದವರನ್ನು ಪ್ರತ್ಯೇಕವಾಗಿ ಇರಿಸಿದೆ. ಜತೆಗೆ ಅನಗತ್ಯ ಪ್ರಯಾಣ ರದ್ದು ಮಾಡುವಂತೆಯೂ ಸೂಚಿಸಿದೆ.
1 ತಿಂಗಳು ಪ್ರತಿಭಟನೆ ಇಲ್ಲ: ಮುಂದಿನ ಒಂದು ತಿಂಗಳ ಅವಧಿಗೆ ದೇಶಾದ್ಯಂತ ಯಾವುದೇ ರೀತಿಯ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳದೇ ಇರಲು ಬಿಜೆಪಿ ನಿರ್ಧರಿಸಿದೆ. ಈ ಬಗ್ಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬುಧವಾರ ಸೂಚನೆ ನೀಡಿದ್ದಾರೆ.
ಇದರ ಜತೆಗೆ ಪಕ್ಷದ ಯಾವುದೇ ಚಟುವಟಿಕೆಗಳೂ ಇರುವುದಿಲ್ಲ ಎಂದಿದ್ದಾರೆ. ಪಕ್ಷದ ಸಂಸದರು ಸ್ವಕ್ಷೇತ್ರಗಳಿಗೆ ತೆರಳಿ ಸೋಂಕಿನ ಬಗ್ಗೆ ಜಾಗೃತಿ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮಂಗಳವಾರ ನಡೆದಿದ್ದ ಬಿಜೆಪಿ ನಾಯಕರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೂಚಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.