Advertisement

ಸವಣೂರಿನಲ್ಲಿ ಕೋವಿಡ್‌-19 ಆಸ್ಪತ್ರೆ

05:31 PM May 07, 2020 | Suhan S |

ಹಾವೇರಿ: ಸವಣೂರಿನಲ್ಲಿ ಇಬ್ಬರಿಗೆ ಕೋವಿಡ್  ಸೋಂಕು ಪತ್ತೆಯಾಗಿರುವುದರಿಂದ ತಾಲೂಕಾಸ್ಪತ್ರೆಯನ್ನು ಕೋವಿಡ್‌-19 ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಇತರ ರೋಗಿಗಳಿಗಾಗಿ ಪಟ್ಟಣದ ನಗರ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕ ಹೊರರೋಗಿ ವಿಭಾಗ ಆರಂಭಿಸಬೇಕು ಹಾಗೂ ಪಟ್ಟಣದ ಎಚ್‌. ಎಲ್‌.ವಿ. ಶಾಲೆಯಲ್ಲಿ ತಾತ್ಕಾಲಿಕವಾಗಿ ಒಳರೋಗಿ ವಿಭಾಗ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಕೋವಿಡ್ ಪಾಸಿಟಿವ್‌ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಸವಣೂರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಕೆಲ ಸೂಚನೆ ನೀಡಿದರು. ಸೀಲ್‌ಡೌನ್‌ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಕಾರ್ಯಕರ್ತೆಯರಿಗೆ ಫೀವರ್‌ ಕ್ಲಿನಿಕ್‌ನಲ್ಲಿ ಖಾಲಿ ಇರುವ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಬೇಕು. ಹಾಸ್ಟೆಲ್‌ನ ಅಡುಗೆ ಕೋಣೆಯಿಂದ ಪ್ರತಿನಿತ್ಯ ಕರ್ತವ್ಯ ನಿರತ ಎಲ್ಲ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಕೆಎಸ್‌ಆರ್‌ಟಿಸಿ ಹಾವೇರಿ ವಿಭಾಗದಿಂದ ಸಂಚಾರಿ ಫೀವರ್‌ ಕ್ಲಿನಿಕ್‌ ಸೋಂಕಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸಬೇಕು. ಹೊರ ಪ್ರದೇಶದಿಂದ ಬರುವ ಜನರ ಓಡಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು. ಸೀಲ್‌ಡೌನ್‌ ಪ್ರದೇಶದಲ್ಲಿರುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ರಮೇಶ ದೇಸಾಯಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸವಣೂರು ಸಹಾಯಕ ಆಯುಕ್ತೆ ಅನ್ನಪೂರ್ಣ ಮುದಕಮ್ಮನವರ, ಸವಣೂರು ತಹಶೀಲ್ದಾರ್‌, ತಾಲೂಕು ವೈದ್ಯಾ ಧಿಕಾರಿಗಳು ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next