Advertisement

ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕುವ ಪ್ರಯತ್ನ

09:17 AM Mar 30, 2020 | sudhir |

ಜರ್ಮನಿ: ಕೋವಿಡ್ 19 ಮಾರಕ ಕಾಯಿಲೆಯನ್ನು ಗಂಭೀರವಾಗಿ ತೆಗೆದುಕೊಂಡ ರಾಷ್ಟ್ರಗಳ ಸಂಖ್ಯೆಯೇ ಕಡಿಮೆ. ಬಹುತೇಕ ರಾಷ್ಟ್ರಗಳಲ್ಲಿ, ಅದರಲ್ಲೂ ಅಭಿವೃದ್ಧಿಗೊಂಡ ರಾಷ್ಟ್ರಗಳೆಲ್ಲಾ ಉಡಾಫೆ ತೋರಿದ್ದೇ ಹೆಚ್ಚು. ಅದಕ್ಕಾಗಿ ಒಂದೊಂದೇ ರಾಷ್ಟ್ರಗಳೂ ದಂಡವನ್ನು ತೆರುತ್ತಿವೆ.

Advertisement

ಬ್ರಿಟನ್‌ ಕಥೆಯೇ ಬದಲಾಗುತ್ತಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಲವು ರಾಷ್ಟ್ರಗಳ ಕಥೆಯೂ ಬಹುತೇಕ ಇದೇ.
ಚೀನಾ ಸಹ ಸಾವಿನ ಪ್ರಮಾಣ 2 ಸಾವಿರ ತಲುಪವವರೆಗೆ ಲಘುವಾಗಿ ಪರಿಗಣಿಸಿತ್ತು. ಅನಂತರ ಚುರುಕಾದರೂ ಆಗುವಷ್ಟು ಅನಾಹುತ ಆಗಿತ್ತು.

ವಿಮಾನ ಯಾನ ಸೇರಿದಂತೆ ಎಲ್ಲವನ್ನೂ ಬಂದ್‌ ಮಾಡಿ ಲಾಕ್‌ ಡೌನ್‌ ಘೋಷಿಸುವಷ್ಟರಲ್ಲಿ, ಜಗತ್ತಿನಾದ್ಯಂತ ಕೋವಿಡ್ 19 ವ್ಯಾಪಿಸಿಯಾಗಿತ್ತು.

ಜರ್ಮನಿಯಲ್ಲಿರುವ ಹಾಸನದ ಪವನ್‌ ಹೇಳುವಂತೆ, ಜರ್ಮನಿಯಲ್ಲೂ ಪರಿಸ್ಥಿತಿ ಬಹಳ ಭಿನ್ನವಾಗಿಲ್ಲ. “ ಆರಂಭದಲ್ಲಿ ಸ್ಥಳೀಯ ಸರಕಾರ ಮತ್ತು ನಾಗರಿಕರು ಗಂಭೀರವಾಗಿ ಪರಿಗಣಿಸಲಿಲ್ಲ. ಆದ ಕಾರಣ ಅರಿವಿಗೆ ಬರುವ ಮುನ್ನವೇ ಪರಿಸ್ಥಿತಿ ಬಿಗಡಾಯಿಸಿತು. ಹಾಗಾಗಿ ಸುಲಭವಾಗಿ ಒಬ್ಬರಿಂದ ಮತ್ತೂಬ್ಬರಿಗೆ ಸೋಂಕು ಹರಡಿದೆ. ಕೂಡಲೇ ಎಚ್ಚೆತ್ತುಕೊಂಡ ಸರಕಾರ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರೂ ಕೈ ಮೀರಿ ಹೋಗಿತ್ತು’ ಎಂದಿದ್ದಾರೆ.

ಸರಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಆದೇಶಿಸಿದ್ದರೂ ನಾಗರಿಕರು ಮಾತ್ರ ಸ್ವಲ್ಪವೂ ಪಾಲಿಸಲಿಲ್ಲ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿದ್ದು, ಮಾಸ್ಕ್ ಗಳನ್ನು ಧರಿಸುತ್ತಿಲ್ಲ. ಈಗ ಸೋಂಕು ಪೀಡಿತರಿಂದಲೇ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ’ ಎನ್ನುತ್ತಾರೆ ಪವನ್‌.

Advertisement

ಬಹಳ ಹೆಚ್ಚೇನೂ ಜನಸಂಖ್ಯೆಯಿಲ್ಲದ ಜರ್ಮನಿಯಲ್ಲೇ ಇಂಥ ಸ್ಥಿತಿ ನಿರ್ಮಾಣವಾದರೆ ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾದ ಭಾರತದಲ್ಲಿ ಪರಿಸ್ಥಿತಿ ಹೇಗಿದ್ದೀತು? ಹರಡಿದರೆ ನಿಯಂತ್ರಿಸಲು ಸಾಧ್ಯವೇ? ಎಂಬ ಪ್ರಶ್ನೆ ಅವರದ್ದು.

ಅದೇ ಕಾರಣಕ್ಕೆ ನಾಗರಿಕರು ತಮ್ಮ ಜವಾಬ್ದಾರಿಯನ್ನು ಅರಿತು ಸರಕಾರದ ನಿಯಮಗಳನ್ನು ಪಾಲಿಸಬೇಕು ಎನ್ನುತ್ತಾರೆ ಪವನ್‌.

“ದಯವಿಟ್ಟು ಯಾರೂ ಮನೆ ಬಿಟ್ಟು ಬರಬೇಡಿ. ಜರ್ಮನಿಯಲ್ಲಿ ವಾರಗಳ ಹಿಂದೆ ಎಚ್ಚರಿಸಿದ ಮೇಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಮಗೆ ಸೋಂಕು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಬೇರೆಯವರಿಂದ ನಮಗೆ ಬಂದು ನಮ್ಮಿಂದ ನಮ್ಮ ಮನೆಯಲ್ಲಿ, ಸಮಾಜದಲ್ಲಿ ಸಮಸ್ಯೆಯಾಗದೇ ಇರಲಿ. 21 ದಿನಗಳಿಗಲ್ಲ, ತಿಂಗಳುಗಳ ಅವಧಿಗಾದರೂ ನಮಗಾಗಿ, ನಮ್ಮ ಮನೆಯರಿಗಾಗಿ, ಸಮಾಜಕ್ಕಾಗಿ ಹೋಂ ಕ್ವಾರೆಂಟೇನ್‌ ಆಗಿರೋಣ ಎನ್ನುತ್ತಾರೆ ಪವನ್‌.

ಇದೇ ಪರಿಸ್ಥಿತಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿದೆ. ಕೊಲ್ಲಿ ರಾಷ್ಟ್ರಗಳಿಂದ ಹಿಡಿದು ಅಮೆರಿಕ, ರಷ್ಯಾ, ಫ್ರಾನ್ಸ್‌, ಆಸ್ಟ್ರೇಲಿಯಾ ಎಲ್ಲ ದೇಶಗಳಲ್ಲೂ ಇದಕ್ಕಿಂತ ಪರಿಸ್ಥಿತಿ ಭಿನ್ನವಾಗಿಲ್ಲ. ಅದರಲ್ಲೂ ಇಟಲಿಯಂಥ ಹಲವು ದೇಶಗಳು ಕೋವಿಡ್ 19 ಮಾರಿಗೆ ತತ್ತರಿಸಿ, ಈಗ ಜಗತ್ತಿನ ಎಲ್ಲರಲ್ಲೂ ಮಾಡುತ್ತಿರುವ ಮನವಿಯೊಂದೇ “ನಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ’ ಎಂಬುದು. ನಮಗೆ ಆಗ ತಿಳಿಯಲಿಲ್ಲ, ಎಲ್ಲವನ್ನೂ ಲಘುವಾಗಿ ತೆಗೆದುಕೊಂಡೆವು. ಸರಕಾರದ ಎಚ್ಚರಿಕೆಗಳನ್ನೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹಾಗಾಗಿ ನಮ್ಮ ಊರಿನ ಎಲ್ಲ ಬೀದಿಗಳಲ್ಲೂ ಮಹಾಮಾರಿ ಬಂದು ಕುಳಿತಿದೆ. ಅದನ್ನು ತೊಲಗಿಸುವುದೇ ದೊಡ್ಡ ಕೆಲಸವಾಗಿದೆ. ಇಂಥ ಸಂದರ್ಭದಲ್ಲಿ ನೀವೂ ಇಂಥ ತಪ್ಪುಗಳನ್ನು ಮಾಡಬೇಡಿ. ಮನೆಯೊಳಗೇ ಇರಿ. ನೀವು ಮನೆಯೊಳಗೇ ಇದ್ದಷ್ಟೂ ಹೊತ್ತು ನೀವು ಕ್ಷೇಮ, ನಿಮ್ಮ ಕುಟುಂಬ ಕ್ಷೇಮ, ನಿಮ್ಮ ಸಮಾಜ ಕ್ಷೇಮ, ನಿಮ್ಮ ದೇಶವೂ ಕ್ಷೇಮ. ಇದನ್ನು ಮರೆಯಬೇಡಿ.

Advertisement

Udayavani is now on Telegram. Click here to join our channel and stay updated with the latest news.

Next