ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿತರ ಪ್ರಮಾಣ ಕಳವಳ ಮೂಡಿಸುತ್ತಿದೆ. ಈ ಸೋಂಕಿನ ವಿರುದ್ಧ ಹೋರಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಯಂತ್ರಗಳು 24/7 ಕೆಲಸ ಮಾಡುತ್ತಿವೆ, ಲಾಕ್ ಡೌನ್ ಕೂಡ ಜಾರಿಯಲ್ಲಿದೆ. ಹಾಗಿದ್ದರೆ, ಈ ರೋಗದ ವಿರುದ್ಧದ ಯಶಸ್ಸು ಸನಿಹದಲ್ಲೇ ಇದೆಯೇ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗುತ್ತಿಲ್ಲ.
ಇದೆಲ್ಲದರ ನಡುವೆಯೇ ಮಂಗಳವಾರ ಆರೋಗ್ಯ ವಲಯದ ಸಿಬ್ಬಂದಿಗೆ ತುಸು ನೆಮ್ಮದಿಯ ಸುದ್ದಿ ಎದುರಾಗಿದೆ. ಕೇಂದ್ರ ಸರ್ಕಾರವು ಕೋವಿಡ್ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಿಗೆ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‌ಮೆಂಟ್) ಪರಿಕರಗಳನ್ನು ಹಾಗೂ 2 ಲಕ್ಷ ಮಾಸ್ಕ್ ಗಳನ್ನು ಪೂರೈಸಿದೆ. ಇದರೊಂದಿಗೆ ಇದುವರೆಗೂ ಕೇಂದ್ರವು 20 ಲಕ್ಷ ಎನ್ 95 ಮಾಸ್ಕ್ ಗಳನ್ನು ಪೂರೈಸಿರುವುದಾಗಿ ಹೇಳಿದೆ. ಚೀನದಿಂದಲೂ 1.70 ಪಿಪಿಇ ಕವರಾಲ್‌ಗಳು ಬಂದಿದ್ದು, ಹೊಸ ಸಪ್ಲೈಗಳನ್ನು ಕೋವಿಡ್ ನಿಂದ ಹೆಚ್ಚು ಬಾಧಿತವಾಗಿರುವ ರಾಜ್ಯಗಳಿಗೆ ಆದ್ಯತೆಯ ಮೇರೆಗೆ ಕಳುಹಿಸಲಾಗಿದೆ. ಇದು ನಿಜಕ್ಕೂ ಶ್ಲಾಘನೀಯ ಸಂಗತಿ.
ಕಳೆದ ಕೆಲವು ದಿನಗಳಿಂದ ಅಧಿಕ ಸಂಖ್ಯೆಯಲ್ಲಿ ಕ್ವಾರಂಟೀನ್ ಸೆಂಟರ್‌ಗಳನ್ನು ಸೃಷ್ಟಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನೆಲ್ಲ ಹುಡುಕಿ ಕ್ವಾರಂಟೀನ್‌ಗೆ ಕಳುಹಿಸಲಾಗುತ್ತಿದೆ. ಅನೇಕರು ರೋಗದಿಂದ ಚೇತರಿಸಿಕೊಂಡು ಮನೆಗೂ ಬಂದಿದ್ದಾರೆ. ಆದರೆ, ಈ ಇಡೀ ಚಿತ್ರಣದ ಇನ್ನೊಂದು ಮುಖವನ್ನು ನೋಡಿದಾಗ, ಆತಂಕವಾಗುವುದಂತೂ ನಿಜ. ನಮ್ಮಲ್ಲಿ ವೈದ್ಯರು, ಆರೋಗ್ಯ ವಲಯದ ಸಿಬ್ಬಂದಿಯ ಪರಿಶ್ರಮದ ಹೊರತಾಗಿಯೂ ಆರೋಗ್ಯ ವಲಯದ ಬಗ್ಗೆ ದಶಕಗಳಿಂದ ಸರ್ಕಾರಗಳು ಮಾಡುತ್ತಾ ಬಂದ ನಿಷ್ಕಾಳಜಿಯ ನಿಜರೂಪವೂ ಕಾಣಿಸುತ್ತಿದೆ.
ಈಗ ಕೇಂದ್ರ ಸರಕಾರ ಬೃಹತ್ ಪ್ರಮಾಣದಲ್ಲಿ ಮಾಸ್ಕ್ ಗಳನ್ನು ಹಾಗೂ ಪಿಪಿಇಗಳನ್ನು ಪೂರೈಸಲಾರಂಭಿಸಿದೆ ಎನ್ನುವುದು ನಿಜವಾದರೂ, ಅಪಾಯದ ಮುನ್ಸೂಚನೆಯನ್ನು ಪರಿಗಣಿಸಿ ಪೂರೈಕೆಯನ್ನು ಮತ್ತಷ್ಟು ವೇಗಗೊಳಿಸಲೇಬೇಕಿದೆ. ಏಕೆಂದರೆ, ಈಗಲೂ ಅನೇಕ ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ವಿರುದ್ಧ ಹೋರಾಡಲು ಅಗತ್ಯವಿರುವ ಸಾಮಗ್ರಿಗಳ ಅಭಾವ ಎದ್ದು ಕಾಣಿಸುತ್ತಿದೆ. ವೈದ್ಯರು, ನರ್ಸ್‌ಗಳು, ಮೆಡಿಕಲ್ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಕಾರ್ಯನಿರ್ವಹಿಸುವಂತೆ ಆಗಿದೆ.
ಅನೇಕ ಕಡೆಗಳಲ್ಲಿ ವೈದ್ಯರು 2-3 ದಿನಗಳವರೆಗೆ ನಿರಂತರವಾಗಿ ಒಂದೇ ಗೌನ್ ಅನ್ನೇ ಬಳಸುತ್ತಿದ್ದಾರೆ. ಹೀಗೆ ಮಾಡುವುದು ಅಪಾಯಕಾರಿ. ದೇಶದ ಕೆಲವು ರಾಜ್ಯದಲ್ಲಿ ವೈದ್ಯರು ರೇನ್ ಕೋಟ್ ತೊಟ್ಟು ಚಿಕಿತ್ಸೆ ಮಾಡುತ್ತಿರುವ ಉದಾಹರಣೆ ಎದುರಾಗುತ್ತಿವೆ. ಮುಂಬಯಿಯಿಯ ಒಂದು ಆಸ್ಪತ್ರೆಯಲ್ಲಿ ಸುರಕ್ಷತಾ ಉಪಕರಣಗಳ ಹೆಸರಲ್ಲಿ ಎಚ್‌ಐವಿ ಸುರಕ್ಷತಾ ಪರಿಕರಗಳನ್ನು ಕೊಡಲಾಗಿದೆ. ವೆಂಟಿಲೇಟರ್‌ಗಳ ಕೊರತೆ ಕಾಡುತ್ತಿದೆ.
ಇನ್ನು ವೈದ್ಯಕೀಯ ಸಿಬ್ಬಂದಿಯ ಹೊರತಾಗಿಯೂ ದೇಶದಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಹೋರಾಡುತ್ತಿರುವ ಅನೇಕ ಪರಿಶ್ರಮಿಗಳಿದ್ದಾರೆ. ಪೊಲೀಸರು, ಆಶಾ ಕಾರ್ಯಕರ್ತೆಯರು..ಇತ್ಯಾದಿ. ಇವರೂ ಕೂಡ ಸೋಂಕಿತರನ್ನು ಪತ್ತೆಹಚ್ಚುವ, ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇವರ ಸುರಕ್ಷತೆಯ ಬಗ್ಗೆಯೂ ಸರ್ಕಾರಗಳು ಯೋಚಿಸಬೇಕು. ಇನ್ನು ಅಗತ್ಯ ಸುರಕ್ಷತಾ ಉಪಕರಣಗಳ ಬೃಹತ್ ಉತ್ಪಾದನೆಗೂ ದೇಶದ ಖಾಸಗಿ ರಂಗಕ್ಕೆ ಪ್ರೋತ್ಸಾಹ ನೀಡಬೇಕಿದೆ. ಒಟ್ಟಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಶೀಘ್ರವೇ ಗೆಲುವು ಸಿಗಬೇಕೆಂದರೆ, ಆರೋಗ್ಯ ವಲಯದ ಯೋಧರು ಸದೃಢರಾಗಿರುವಂತೆ ನೋಡಿಕೊಳ್ಳಬೇಕು.