ಮಹಾನಗರ: ಸಾಮಾನ್ಯವಾಗಿ ವಿದ್ಯಾರ್ಥಿಗಳ ಬೇಸಗೆ ರಜೆ ಸಮಯದಲ್ಲಿ ಕರಾವಳಿ ಭಾಗದ ಪ್ರವಾಸಿ ತಾಣಗಳು ಫುಲ್ ರಶ್ ಇರುತ್ತದೆ. ದೇಶ-ವಿದೇಶದ ಪ್ರವಾಸಿಗರು ಇಲ್ಲಿನ ಸೌಂದರ್ಯ ನೋಡಲು ಬರುತ್ತಾರೆ. ಆದರೆ ಈ ಬಾರಿ ಕೋವಿಡ್ -19 ಕರಿಛಾಯೆಯು ಪ್ರವಾಸೋದ್ಯಮ ಕ್ಷೇತ್ರಕ್ಕೂ ಬಹುದೊಡ್ಡ ಹೊಡೆತವುಂಟು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಕಳೆದ ನಾಲ್ಕು ವರ್ಷಗಳಿಂದಲೂ ವರ್ಷದಿಂದ ವರ್ಷಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಆದರೆ ಈ ವರ್ಷ ಪ್ರವಾಸಿಗರ ಪ್ರಮಾಣ ಇಳಿಮುಖವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ ವರ್ಷ ಸುಮಾರು 2 ಕೋಟಿಯಷ್ಟು ಪ್ರವಾಸಿಗರು ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದರು. ಅದು ಈ ಬಾರಿ ಶೇ.50ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
ಪ್ರವಾಸಕ್ಕೆಂದು ಆಗಮಿಸುವ ಮಂದಿ ಪ್ರಮುಖ ಬೀಚ್‌ಗಳು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದೇವಸ್ಥಾನ, ಪುತ್ತೂರು ದೇವಸ್ಥಾನ, ಉಪ್ಪಿನಂಗಡಿ ದೇವಸ್ಥಾನ, ಮೂಡುಬಿದಿರೆ ಸಾವಿರಕಂಬ ಬಸದಿ, ಜೈನಮಠ, ಪಿಲಿಕುಳ ನಿಸರ್ಗಧಾಮ ಸಹಿತ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಕೊರೊನಾ ಆತಂಕವು ಈಗ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ.
ಮುಂಬರುವ ದಿನಗಳಲ್ಲಿ ಚೇತ ರಿಕೆ ಕಾಣಲು ಕೆಲವು ತಿಂಗಳು ತಗಲ ಬಹುದು. ಮಾರ್ಚ್ ತಿಂಗಳ ಎರಡನೇ ವಾರದಿಂದಲೇ ಕೊರೊನಾ ಆತಂಕ ಆರಂಭವಾಗಿದ್ದು, ಮುಂಜಾಗ್ರತಾ ದೃಷ್ಟಿಯಿಂದ ದ.ಕ. ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಿಸಲಾಯಿತು. ಇದ ರಿಂದ ಪ್ರವಾಸಿತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಅದೇ ರೀತಿ ಬೇಸಗೆ ರಜೆ ವೇಳೆ ಸಾಮಾನ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವ ಮಂದಿಯೂ ತಮ್ಮ ವಿಮಾನ, ರೈಲು ಟಿಕೆಟ್ ರದ್ದು ಗೊಳಿಸಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರವನ್ನು ಅಲವಂಭಿಸಿರುವ ಟ್ಯಾಕ್ಸಿ ಚಾಲಕರು, ಏಜೆಂಟ್‌ಗಳು, ಪ್ರವಾಸಿ ವಾಹನಗಳ ಮಾಲಕರು ಕೂಡ ಈಗ ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರಕ್ಕೆ ಪರಿಣಾಮ
ಕೊರೊನಾ ಆತಂಕದ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರಕ್ಕೂ ಬೀರಿದೆ. ಮಾರ್ಚ್ ತಿಂಗಳ ಎರಡನೇ ವಾರದಿಂದ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು. ಲಾಕ್‌ಡೌನ್ ಪೂರ್ಣಗೊಂಡ ಬಳಿಕವೂ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆ ಕಾಣಲು ಕೆಲವು ತಿಂಗಳು ಬೇಕಾಗಬಹುದು.
- ಸುಧೀರ್ ಗೌಡ, ದ.ಕ. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ
ಆರ್ಥಿಕತೆಗೆ ಭಾರೀ ಹೊಡೆತ
ಪ್ರವಾಸಿಗರು ಇಲ್ಲದಿರುವುದರಿಂದ ಜಿಲ್ಲೆಯ ಆರ್ಥಿಕತೆಯ ಮೇಲೆಯೂ ತೀವ್ರ ಪರಿಣಾಮ ಬೀಳುತ್ತಿದೆ. ದೇಗುಲ, ಮಠ, ಮಂದಿರ, ಬೀಚ್ ಸಹಿತ ಪ್ರವಾಸಿ ತಾಣಗಳಿಗೆ ಹೊಂದಿಕೊಂಡಿರುವ ಸಣ್ಣಪುಟ್ಟ ಅಂಗಡಿಗಳಿಂದ ಸ್ಟಾರ್ ಹೊಟೇಲ್‌ನವರೆಗೆ ಎಲ್ಲರಿಗೂ ವ್ಯವಹಾರ ಇಲ್ಲದಂತಾಗಿದೆ. ಸಾರಿಗೆ ಉದ್ಯಮಕ್ಕೂ ಪೆಟ್ಟು ಬಿದ್ದಿದೆ.