ಬೈಲಹೊಂಗಲ: ದೇಶನೂರ ಗ್ರಾಮದಲ್ಲಿ ಕೈಮಗ್ಗ ನಂಬಿ ಬದುಕುತ್ತಿರುವ ಕುಟುಂಬಗಳ ನೇಯ್ಗೆ ಕೆಲಸದ ಮೇಲೂ ಕೋವಿಡ್ 19 ಕರಿನೆರಳು ಬಿದ್ದಿದ್ದು, ನೇಕಾರ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.
ತಮ್ಮ ಹಿರಿಯರ ಕಾಲದಿಂದ ತಾಲೂಕಿನ ದೇಶನೂರ ಗ್ರಾಮದಲ್ಲಿ ಕೈಮಗ್ಗದಿಂದ ನೇಯ್ಗೆ ಕೆಲಸ ಮಾಡುತ್ತಾ ಬಂದಿದ್ದಾರೆ. ವಿನೂತನ ಮಾದರಿಯಲ್ಲಿ ಪಾಲಿಸ್ಟರ್, ಕಾಟನ್ ನೇಯ್ಗೆ ಕೆಲಸ ಮಾಡಲಾಗುತ್ತದೆ. ಇದರಿಂದ ಅನೇಕರು ಬದುಕನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಾರೆ. ಆದರೆ ಕೋವಿಡ್ 19 ದಿಂದ ದೇಶಾದ್ಯಂತ ಲಾಕ್‌ಡೌನ್ ಆಗಿರುವುದರಿಂದ ಈ ಉದ್ಯಮ ನಂಬಿಕೊಂಡಿದ್ದವರ ಜೀವನ ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ. ಇಲ್ಲಿ ನೇಯ್ಗೆ ಮಾಡುವ ಕೆಲಸ ಸ್ಥಗಿತಗೊಂಡಿದೆ. ಇನ್ನು ತಯಾರು ಮಾಡಿದ ಸೀರೆಗಳ ವ್ಯಾಪಾರವೂ ನಿಂತು ಹೋಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ಮದುವೆ, ಇನ್ನಿತರ ಶುಭ ಕಾರ್ಯಗಳಿಗೆ ನೇಯ್ಗೆ ಮಾಡಿದ ಬಟ್ಟೆಗಳಿಗೆ ಬೇಡಿಕೆ ಇರುತ್ತಿತ್ತು. ಆದರೆ ಕೋವಿಡ್ 19 ಕರಿನೆರಳು ಈ ಕ್ಷೇತ್ರದ ಮೇಲೂ ಬಿದ್ದಿರುವುದರಿಂದ ಬದುಕು ದುಸ್ತರವಾಗಿದೆ.
ಈ ಹಿಂದೆ ನೇಯ್ದ ಬಟ್ಟೆಗಳನ್ನು ಕೊಳ್ಳುವರಿಲ್ಲದೆ ಜನರು ಬೀದಿಗೆ ಬರುವಂತಾಗಿದೆ. ಕೆಲಸಗಾರರು ಕಷ್ಟಕರವಾಗಿ ದಿನ ದೂಡುವಂತಾಗಿದೆ. ಕಚ್ಚಾ ತಯಾರಿ ಪರಿಕರವನ್ನು ರಾಮದುರ್ಗದಿಂದ ತರಲಾಗುತ್ತದೆ. ರಾಮದುರ್ಗ, ಬೆಳಗಾವಿಗೆ ಸೀರೆ ಮಾರಾಟಕ್ಕೆ ಹೋಗುತ್ತಾರೆ. ನೇಯಲು ನೂಲು ದೊರಕದೆ, ನೇಯ್ಗೆ ಬಟ್ಟೆ ಸಾಗಣೆಗೆ ಸಂಚಾರ ವ್ಯವಸ್ಥೆ ಇಲ್ಲದೆ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ದೇಶನೂರದಲ್ಲಿ 300 ಕುಟುಂಬಗಳು ನಿತ್ಯ ನೇಯ್ಗೆ ನಂಬಿ ಬದುಕು ಸಾಗಿಸುತ್ತಿದ್ದಾರೆ. ನಿತ್ಯ ಇಲ್ಲಿ 10 ಸಾವಿರ ಸೀರೆ ತಯಾರಾಗುತ್ತದೆ. ಕೂಲಿಕಾರರಿಗೆ 100 ರಿಂದ 150 ರೂ. ಪಗಾರ ಕೊಡಲಾಗುತ್ತದೆ. ಆದರೆ ನೇಯ್ಗೆ ಕೆಲಸವಿಲ್ಲದೆ ಕೂಲಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಸರಕಾರ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ವಿವಿಧ ಯೋಜನೆಯಡಿ ಪರಿಹಾರ ಘೋಷಿಸಿದ್ದು, ಅದನ್ನು ನೇಯ್ಗೆ ಕಾರ್ಮಿಕರಿಗೂ ಅನ್ವಯ ಮಾಡಬೇಕೆಂದು ನೇಕಾರ ಕುಟುಂಬದವರಾದ ಪ್ರಶಾಂತ ಚಡಿಚಾಳ, ಬಸಪ್ಪ ಗೊರಗುದ್ದಿ, ನೀಲಕಂಠ ಸೊಗಲಿ, ಕಲ್ಲಪ್ಪ ತಿಳಗಂಜಿ, ಆನಂದ ಹಳಿಜೋಳ ಒತ್ತಾಯಿಸಿದ್ದಾರೆ.
ರೈತರಿಗೆ ಬೆಂಬಲ ಬೆಲೆ ಕೊಟ್ಟು ಬೆಳೆ ಸರಕಾರ ಖರೀದಿಸುವಂತೆ ನೇಕಾರರ ಬದುಕು ಹಸನಾಗಲು ನೇಯ್ಗೆ ಬಟ್ಟೆಗಳನ್ನು ನೀಡಬೇಕು. ಇದರಿಂದ ನಿರಂತರ ಉದ್ಯೋಗ ಸಿಗಲು ಸಾಧ್ಯ. ಒಳ್ಳೆಯ ಬೆಲೆಯನ್ನು ಸರಕಾರ ನಿಗದಿಪಡಿಸಿದಲ್ಲಿ ನೇಯ್ಗೆ ನಂಬಿದವರ ಬದುಕು ಉಜ್ವಲವಾಗುತ್ತದೆ. –
ಸಂತೋಷ ತಿಳಗಂಜಿ, ನೇಕಾರ, ದೇಶನೂರ
ಲಾಕ್‌ಡೌನ್‌ದಿಂದ ನೇಕಾರರ ಬಟ್ಟೆಗಳ ಮಾರಾಟ ನಿಂತು ಅವರ ಬದುಕು ದುಸ್ತರವಾಗಿದೆ. ಸರಕಾರ ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿದಂತೆ ನೇಕಾರರಿಗೆ ಪ್ಯಾಕೇಜ್ ಘೋಷಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅನುಕೂಲ ಮಾಡಿಕೊಡಬೇಕು. –
ಶ್ರೀಶೈಲ ಕಮತಗಿ, ತಾಪಂ ಸದಸ್ಯ
–ಸಿ.ವೈ. ಮೆಣಶಿನಕಾಯಿ