ಕೋವಿಡ್ 19 ವೈರಸ್ ಎಲ್ಲ ರಂಗಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಇದಕ್ಕೆ ಸ್ಮಾರ್ಟ್ ಫೋನ್ ಉದ್ಯಮ ಕೂಡ ಹೊರತಲ್ಲ. ಕೋವಿಡ್ 19 ವೈರಸ್‌ನ ವ್ಯಾಪಕ ಹರಡುವಿಕೆಯಿಂದ ಅನೇಕ ದೇಶಗಳು ಲಾಕ್‌ಡೌನ್ ಘೋಷಿಸಿದ ಪರಿಣಾಮ ಹಾಗೂ ಸಾರ್ವಜನಿಕರ ಗಮನವೆಲ್ಲವೂ ಈ ವೈರಸ್ ವಿರುದ್ಧ ಹೋರಾಟದಲ್ಲೇ ಇರುವುದರಿಂದ, ಮೊಬೈಲ್ ಫೋನ್ ಕೊಳ್ಳಲು ಜನ ಆಸಕ್ತಿ ತೋರುತ್ತಿಲ್ಲ. ಈ ಕಾರಣದಿಂದ, ಸ್ಮಾರ್ಟ್‌ಫೋನ್ ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಕಳೆದ ವರ್ಷದ ಫೆಬ್ರವರಿಯಲ್ಲಾದ ಮಾರಾಟಕ್ಕೂ ಈ ವರ್ಷದ ಫೆಬ್ರವರಿಗೂ ಹೋಲಿಸಿದಾಗ, ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಶೇ. 38ರಷ್ಟು ಕುಸಿತವನ್ನು ಸ್ಮಾರ್ಟ್‌ಫೋನ್ ಮಾರುಕಟ್ಟೆ ಕಂಡಿದೆ. 2019ರ ಫೆಬ್ರವರಿಯೊಂದರಲ್ಲೇ, ಜಗತ್ತಿನಾದ್ಯಂತ 99.2 ದಶಲಕ್ಷ ಫೋನ್ ಗಳು ಮಾರಾಟವಾಗಿದ್ದವು. 2020ರ ಫೆಬ್ರವರಿಯಲ್ಲಿ 61.8 ದಶಲಕ್ಷ ಫೋನ್ ಗಳು ಮಾತ್ರ ಮಾರಾಟವಾಗಿವೆ. ಕೋವಿಡ್ 19ರ ಪ್ರಭಾವದಿಂದ ಏಷ್ಯಾದಲ್ಲಿ ಮುಖ್ಯವಾಗಿ ಹಾಗೂ ಜಗತ್ತಿನ ಅನೇಕ ದೇಶಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟ ಕುಸಿತ ಕಂಡಿದ್ದು, ಇದಕ್ಕೆ ಪ್ರಮುಖ ಕಾರಣ ಎಂದು ಸ್ಟ್ರಾಟಜಿ ಅನಾಲಿಟಿಕ್ಸ್ ತಿಳಿಸಿದೆ.
ಸ್ಟೋರ್ ಬಾಗಿಲು ಬಂದ್ 2020ರ ಫೆಬ್ರವರಿಯ ಮೊಬೈಲ್ ಮಾರಾಟದ ಕುಸಿತ, ಇದುವರೆಗೆ ಸ್ಮಾರ್ಟ್ ಫೋನ್ ಉದ್ಯಮದಲ್ಲಿ ಕಂಡುಬಂದ ಅತಿ ದೊಡ್ಡ ಕುಸಿತ ಎಂದು ವಿಶ್ಲೇಷಿಸಿದೆ. ಅಲ್ಲದೆ, ಇದು ಸ್ಮಾರ್ಟ್‌ಫೋನ್ ಮಾರಾಟದ ಅಂಕಿ ಅಂಶವನ್ನು 2003ನೇ ಇಸವಿಯಷ್ಟು ಹಿಂದಕ್ಕೆ ಒಯ್ದಿದೆ. ಆ್ಯಪಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳು ಕೋವಿಡ್ 19 ಕಾರಣದಿಂದ ಜಗತ್ತಿನಾದ್ಯಂತ ತಮ್ಮ ಅನೇಕ ಸ್ಟೋರ್‌ಗಳನ್ನು ಮುಚ್ಚಿದ್ದವು. ಇದು ಸಹ ಸ್ಮಾರ್ಟ್‌ಫೋನ್ ಮಾರಾಟ ಕುಸಿತಕ್ಕೆ ಕಾರಣವಾಗಿದೆ ಎಂದು ಅನಾಲಿಟಿಕ್ಸ್ ವರದಿ ತಿಳಿಸಿದೆ.
ಇದೇ ಪರಿಸ್ಥಿತಿ ಮಾರ್ಚ್‌ನಲ್ಲೂ ಮುಂದುವರಿಯಲಿದೆ ಎಂದು ಅದು ಹೇಳಿದೆ. ಲಾಂಚ್ ಮುಂದೂಡಿಕೆ ಕೊರೊನಾ ಕಾರಣದಿಂದಾಗಿ ಪ್ರಮುಖ ಕಂಪನಿಗಳು ತಮ್ಮ ಹೊಸ ಫೋನ್‌ಗಳ ಬಿಡುಗಡೆಯನ್ನು ಮುಂದೂಡಿವೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಮುಖ ಹೆಸರಾಗಿರುವ ಒನ್‌ಪ್ಲಸ್ ಕಂಪನಿ, ತನ್ನ ಹೊಸ ಒನ್‌ಪ್ಲಸ್ 8 ಪ್ರೊ ಸರಣಿಯ ಫೋನ್‌ಗಳನ್ನು ಮಾ. 5ಕ್ಕೆ ಬಿಡುಗಡೆ ಮಾಡಬೇಕಿತ್ತು. ಆದರೆ, ತನ್ನ ಮಾತೃದೇಶವಾದ ಚೀನಾದಲ್ಲೇ ಕೋವಿಡ್ 19 ರೌದ್ರಾವತಾರ ತಾಳಿ, ಅನೇಕ ದೇಶಗಳಿಗೆ ಹಬ್ಬಿದ ಕಾರಣ, ಹೊಸ ಫೋನಿನ ಬಿಡುಗಡೆಯನ್ನು ಮುಂದೂಡಿದೆ. ಅಲ್ಲದೆ, ಶಿಯೋಮಿ ಕಂಪನಿಯ ಎಂಐ 10 ಪ್ರೀಮಿಯಂ ದರ್ಜೆಯ ಸ್ಮಾರ್ಟ್‌ಫೋನ್ ಮಾರ್ಚ್ 31ರಂದು ಬಿಡುಗಡೆಯಾಗಬೇಕಿತ್ತು. ಈ ಫೋನ್ ಬಿಡುಗಡೆಯ ಬಗ್ಗೆ, ಎಂಐ ಸ್ಟೋರ್ ಆ್ಯಪ್ ಮತ್ತು ಅಮೇಜಾನ್.ಇನ್‌ನಲ್ಲಿ ಜಾಹೀರಾತು ಕೂಡ ಪ್ರಸಾರವಾಗಿತ್ತು.
ಆದರೆ, ಅದರ ಬಿಡುಗಡೆ ಸಹ ಈಗ ಮುಂದಕ್ಕೆ ಹೋಗಿದೆ. ವೋ ಕಂಪನಿ, ತನ್ನ ವೋ 19 ಮಾಡೆಲ್ ಅನ್ನು ಮಾ. 26ಕ್ಕೆ ಬಿಡುಗಡೆ ಮಾಡಬೇಕಿತ್ತು, ಅದೂ ಮುಂದೂಡಿದೆ. ಹಾಗೆಯೇ, ಆ್ಯಪಲ್ ಕಂಪನಿ ತನ್ನ ಕಡಿಮೆ ಬೆಲೆಯ ಐಫೋನ್ 9ಅನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಿತ್ತು. ಆದರೆ, ಕೋವಿಡ್ 19 ಕಾರಣದಿಂದ, ಅದರ ತಯಾರಿಕೆಯೇ ನಿಧಾನವಾಗಿ, ಬಿಡುಗಡೆ ಮುಂದಕ್ಕೆ ಹೋಗಿದೆ. ಇದಿಷ್ಟೇ ಅಲ್ಲ, ಕಳೆದ ಜನವರಿಯಿಂದ ಅನೇಕ ಮೊಬೈಲ್ ಫೋನ್‌ಗಳ ಬಿಡುಗಡೆ ಕಾರ್ಯಕ್ರಮವನ್ನು ಸಹ ಕಂಪನಿಗಳು ರದ್ದುಗೊಳಿಸಿದ್ದವು. ಅಂದರೆ ಲಾಂಚ್ ಇವೆಂಟನ್ನು ನಡೆಸದೇ ನೇರವಾಗಿ ಮಾರಾಟಕ್ಕೆ ಬಿಡುಗಡೆ ಮಾಡಿದ್ದವು. ಈಗ ಒಟ್ಟಾರೆ ಬಿಡುಗಡೆಯನ್ನೇ ಮುಂದೂಡಿವೆ.
-ಕೆ.ಎಸ್. ಬನಶಂಕರ ಆರಾಧ್ಯ