ಶಿಡ್ಲಘಟ್ಟ: ಕೋವಿಡ್ 19 ಸೋಂಕು ಹರಡುವ ಭೀತಿಯಿಂದ ಜನರು ತತ್ತರಿಸಿದ್ದು, ಮತ್ತೂಂದೆಡೆ ದೇಶಿಯ ವಸ್ತುಗಳು ವಿದೇಶಕ್ಕೆ ರಫ್ತು ಮಾಡುವುದನ್ನು ನಿಲ್ಲಿಸಿರುವುದರಿಂದ ತಾಲೂಕಿನಲ್ಲಿ ಕ್ಯಾಪ್ಸಿಕಾಂ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ.
ತಾಲೂಕಿನ ಅಬ್ಲೂಡು ಗ್ರಾಪಂ ವ್ಯಾಪ್ತಿಯ ಚೀಮನಹಳ್ಳಿಯಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕ್ಯಾಪ್ಸಿಕಾಂ ಖರೀದಿಗೆ ಯಾರೊಬ್ಬರು ಮುಂದೆ ಬರದಿದ್ದರಿಂದ ಕಂಗಾಲಾದ ರೈತ ಗೋಪಾಲ್ ಸುಮಾರು 2 ಟನ್ ಕ್ಯಾಪ್ಸಿಕಾಂ ಬೀದಿಗೆ ಎಸೆದಿದ್ದಾರೆ. ಇದರಿಂದ ರೈತನಿಗೆ ಸುಮಾರು 4 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕೈಗೆ ಬರದ ಬಂಡವಾಳ: ಜಿಲ್ಲೆಯಲ್ಲಿ ಯಾವುದೇ ನದಿನಾಲೆಗಳಿಲ್ಲ. ಮಳೆನೀರು ಮತ್ತು ಕೊಳವೆಬಾವಿ ನೀರು ಆಶ್ರಯಿಸಿಕೊಂಡು ಬೆಳೆದಿದ್ದ ಕ್ಯಾಪ್ಸಿಕಾಂ ರೈತನ ಕೈಹಿಡಿದಿದೆ. ಆದರೂ ಕೊರೊನಾ ಸೋಂಕಿನಿಂದ ರಫ್ತು ನಿಲ್ಲಿಸಿದ್ದರಿಂದ ಖರೀದಿದಾರರು ಇಲ್ಲದೇ ರೈತ ಹೂಡಿದ್ದ ಬಂಡವಾಳ ಕೈಗೆ ಸಿಗದೆ ಕಂಗಾಲಾಗಿದ್ದು, ಸರ್ಕಾರ ನೆರವಿಗೆ ಧಾವಿಸಬೇಕಾಗಿದೆ. ಸಾಮಾನ್ಯವಾಗಿ ಪಾಲಿಹೌಸ್ ನಿರ್ಮಿಸಿಕೊಂಡು 4 ತಿಂಗಳನಲ್ಲಿ ಕ್ಯಾಪ್ಸಿಕಾಂ ಬೆಳೆ ಬೆಳೆ ಯುತ್ತಿದ್ದಾರೆ. ಚೀಮನ ಹಳ್ಳಿಯಲ್ಲಿ ಗೋಪಾಲ್ ಸಹ ಈಗಾಗಲೇ ಬೆಳೆ ಬೆಳೆದು ಕಂಪನಿ ಯೊಂದಿಗೆ ಒಪ್ಪಂದ ಮಾಡಿಕೊಂಡು ಕೆ.ಜಿ 20 ರಿಂದ 100 ರೂ.ವರೆಗೆ ಮಾರಾಟ ಮಾಡಿದ್ದಾರೆ. ಆದರೆ ಇದೀಗ ಕ್ಯಾಪ್ಸಿಕಾಂನ್ನು ಕೇಳ್ಳೋರಿಲ್ಲದೇ ತೋಟದಲ್ಲಿ ನಾಶವಾಗುತ್ತಿರುವುದನ್ನು ಕಂಡು ಕಿತ್ತು ಹಾಕಿ ಬೀದಿಯಲ್ಲಿ ಸುರಿದಿದ್ದಾರೆ.
ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಸರಕು ಸಾಗಾಣಿಕೆ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ಖರೀದಿದಾರರು ಇಲ್ಲದಾಗಿದೆ. ಚೀಮನಹಳ್ಳಿ ರೈತ ಗೋಪಾಲ್ ಪ್ರತಿಕ್ರಿ ಯಿಸಿ, ಲಾಭದಾಯಕವಾಗಿದ್ದ ಕ್ಯಾಪ್ಸಿಕಾಂ ಬೆಳೆಯಿಂದ ಆದಾಯಗಳಿಸುತ್ತಿದ್ದೆ. ಆದರೆ ಕೋವಿಡ್ 19 ಸೋಂಕು ಭೀತಿಯಿಂದ ವಿದೇಶಕ್ಕೆ ರಫ್ತು ನಿಲ್ಲಿಸಿದ್ದರಿಂದ ಖರೀದಿ ಮಾಡುವ ಕಂಪನಿಗಳು ಸಹ ಕೈಬಿಟ್ಟಿದ್ದರಿಂದ ಬಂಡವಾಳ ಹೂಡಿ ಬೆಳೆದಿದ್ದ ಕ್ಯಾಪ್ಸಿಕಾಂ ಬೀದಿಯಲ್ಲಿ ಸುರಿಯುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಸಮಸ್ಯೆ ಅರಿತು ಪರಿಹಾರ ಕಲ್ಪಿಸುವ ವಿಶ್ವಾಸವಿದೆ ಎಂದರು.
ಕೇಂದ್ರ ಸರ್ಕಾರ ಸರಕು ಸಾಗಾಣಿಕೆ ಮಾಡುವ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆಯಬಾರದು ಎಂದು ಸೂಚನೆ ನೀಡಿರುವುದರಿಂದ ಖರೀದಿದಾರರಿಗೆ ಸರಕು ಸಾಗಾಣಿಕೆಗೆ ಅನುಕೂಲವಾಗಲಿದೆ. ಕ್ಯಾಪ್ಸಿಕಾಂ ಮಾರಾಟವಾಗದಿರುವ ಕುರಿತು ದೂರು ಬಂದಿಲ್ಲ.
– ಎಸ್.ಆರ್.ಕುಮಾರಸ್ವಾಮಿ, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ
– ತಮೀಮ್ ಪಾಷ ಎಂ.ಎ.