Advertisement

ಅಮೀನಗಡ ಕರದಂಟು ಉದ್ಯಮಕ್ಕೆ ಕಂಟಕ

02:47 PM May 07, 2020 | Suhan S |

ಅಮೀನಗಡ:ಉತ್ತರ ಕರ್ನಾಟಕದ ಮನೆ ಮಾತಾಗಿರುವ ಅಮೀನಗಡ ಕರದಂಟು ಉದ್ಯಮಕ್ಕೆ ಕೋವಿಡ್ 19 ಕರಿಛಾಯೆ ಆವರಿಸಿದೆ. ಪಟ್ಟಣದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರಾಟವಾಗುತ್ತಿದ್ದ ಅಮೀನಗಡ ಪ್ರಸಿದ್ಧ ಕರದಂಟು ವ್ಯಾಪಾರ ಲಾಕ್‌ಡೌನ್‌ದಿಂದ ಸ್ಥಗಿತಗೊಂಡಿದೆ. ಲಾಕ್‌ಡೌನ್‌ ಮುನ್ನ ಸಿದ್ಧಪಡಿಸಿದ್ದ ಲಕ್ಷಾಂತರ ರೂ. ಮೌಲ್ಯದ ಕರದಂಟು ಸಿಹಿ ತಿಂಡಿಯನ್ನು ಕೆಲ ಉದ್ಯಮಿಗಳು ಉಚಿತವಾಗಿ ಹಂಚಿದ್ದಾರೆ. ಇನ್ನು ಕೆಲವರು ಸಮಸ್ಯೆ ಆಗುವುದಿಲ್ಲ ಎಂದು ಅದನ್ನು ಸಂಗ್ರಹಿಸಿಟ್ಟಿದ್ದಾರೆ. ಸುಮಾರು 42 ದಿನಗಳಿಂದ ಕೋಟ್ಯಂತರ ರೂ. ವ್ಯವಹಾರ ಸ್ಥಗಿತಗೊಂಡಿದೆ.

Advertisement

ಕರದಂಟು ತಯಾರಿಕೆಯಿಲ್ಲ: ಉತ್ತರ ಕರ್ನಾಟಕ ಪ್ರಸಿದ್ಧ ಸಿಹಿ ತಿಂಡಿ ಅಮೀನಗಡ ಕರದಂಟು ತಯಾರಿಕೆಯಲ್ಲಿ ನೈಸರ್ಗಿಕ ಅಂಟು, ಚುಕ್ಕಿ ಬೆಲ್ಲ, ಶುದ್ದ ತುಪ್ಪ ಹಾಗೂ ಹತ್ತಾರು ಬಗೆಯ ಡ್ರೈ ಫುಟ್‌ಗಳ ಮಿಶ್ರಣದಲ್ಲಿ ತಯಾರಾಗುತ್ತದೆ. ಇದರಲ್ಲಿ ಪ್ರೀಮಿಯಮ್‌, ಕ್ಲಾಸಿಕ್‌, ಆರ್ಗೆನಿಕ್‌ ಸುಪ್ರೀಂ ಎಂದು ಮೂರು ತರಹದ ಕರದಂಟು ತಯಾರಿಸಲಾಗುತ್ತದೆ. ಗುಣಮಟ್ಟದ ಕರದಂಟು ಮೂರು ತಿಂಗಳು ಬಳಕೆ ಮಾಡಲಾಗುತ್ತದೆ. ಆರ್ಗೆನಿಕ್‌ ಸುಪ್ರಿಂ ಕರದಂಟು ನಾಲ್ಕರಿಂದ ಆರು ತಿಂಗಳವರೆಗೆ ಬಳಕೆ ಮಾಡಬಹುದಾಗಿದೆ. ಈ ಕರದಂಟು ಶತಮಾನ ಇತಿಹಾಸ ಹೊಂದಿದೆ. 1907ರಲ್ಲಿ ಅಮೀನಗಡದ ಐಹೊಳ್ಳಿ ಮನೆತನದ ದಿವಂಗತ ಸಾವಳಿಗೆಪ್ಪ ಐಹೊಳ್ಳಿಯವರು ಈ ಕರದಂಟು ಸಿಹಿಯ ಮೂಲ ತಯಾರಕರು. ನೂರಾರು ವರ್ಷಗಳಿಂದ ಕರದಂಟು ಸಿಹಿಯನ್ನು ವಿಜಯಾ ಕರದಂಟು ಮಾಲೀಕತ್ವದಲ್ಲಿ ತಯಾರಿ ಮಾಡುತ್ತಾರೆ ಮತ್ತು ಪಟ್ಟಣದ ಇನ್ನಿತರ ಕರದಂಟು ಅಂಗಡಿಕಾರರು ಕೂಡಾ ಕರದಂಟು ಸಿದ್ಧಪಡಿಸುತ್ತಾರೆ. ಆದರೆ, ಲಾಕ್‌ಡೌನ್‌ನಿಂದ ಕರದಂಟು ತಯಾರಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಕರದಂಟು ಅಂಗಡಿಗಳು ಬಂದ್‌: ಮೂಲ ಕರದಂಟು ತಯಾರಕರಾದ ವಿಜಯಾ ಕರದಂಟು ತಯಾರಕರ ಅಮೀನಗಡ ಪಟ್ಟಣದಲ್ಲಿರುವ 5 ಮಳಿಗೆಗಳು, ರಾಜಧಾನಿ ಬೆಂಗಳೂರನಲ್ಲಿರುವ ಎರಡು ಮಳಿಗೆಗಳು ಮತ್ತು ಪಟ್ಟಣದ ಇತರ 7-8 ಕರದಂಟು ಅಂಗಡಿಕಾರರ ಮಳಿಗೆ ಸೇರಿದಂತೆ ಸುಮಾರು 14 ಕರದಂಟು ಅಂಗಡಿಗಳಲ್ಲಿ ಕರದಂಟು ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿತ್ತು. ಈ ಎಲ್ಲ ಕರದಂಟು ಅಂಗಡಿಗಳು ಬಂದ್‌ ಆಗಿವೆ. ಇದರಿಂದ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಗೆ ಪೂರೈಕೆಯಾಗುತ್ತಿದ್ದ ಕರದಂಟು ಪೂರೈಕೆ ಸ್ಥಗಿತಗೊಂಡಿದೆ.

ಕೋಟ್ಯಂತರ ರೂ. ವ್ಯವಹಾರ ಸ್ಥಗಿತ: ಪಟ್ಟಣ ದಲ್ಲಿ 12ಕ್ಕೂ ಹೆಚ್ಚು ಕರದಂಟು ಮಳಿಗೆಗಳಿದ್ದು, ಪ್ರತಿದಿನ ಸುಮಾರು 300-400 ಕೆಜಿ ಕರದಂಟು ಪಟ್ಟಣದಲ್ಲಿ ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತದೆ. ಪ್ರತಿದಿನ ಸುಮಾರು 2 ರಿಂದ 3 ಲಕ್ಷ ರೂ. ವಹಿವಾಟು ಆಗುತ್ತಿತ್ತು. ಮದುವೆ ಕಾರ್ಯಕ್ರಮಗಳು ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುವುದರಿಂದ ವ್ಯಾಪಾರ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ, 43 ದಿನಗಳ ಕಾಲ ಕರದಂಟು ತಯಾರಿಕೆ ಸ್ಥಗಿತ ಗೊಂಡಿದ್ದರಿಂದ ಕೋಟ್ಯಂತರ ರೂ. ವ್ಯವಹಾರ ಸ್ಥಗಿತಗೊಂಡಿದೆ. ಇದು ಪ್ರಸಿದ್ಧ ಕರದಂಟು ಉದ್ಯಮಕ್ಕೂ ಪೆಟ್ಟು ಬಿದ್ದಿದೆ.

ವಿಜಯಾ ಕರದಂಟು ಅಮೀನಗಡದಲ್ಲಿರುವ ಐದು ಮಳಿಗೆಗಳು ಹಾಗೂ ಬೆಂಗಳೂರಿನಲ್ಲಿರುವ ಎರಡು ಮಳಿಗೆ ಮತ್ತು ಸುಮಾರು ಹತ್ತು ಜಿಲ್ಲೆಗಳಲ್ಲಿ ಕರದಂಟು ದಿನನಿತ್ಯ ಮಾರಾಟವಾಗುತ್ತದೆ. ಪ್ರತಿದಿನ 200-300 ಕೆಜಿ ಕರದಂಟು ಮಾರಾಟ ಮಾಡಲಾಗುತ್ತಿತ್ತು. ಲಾಕ್‌ಡೌನ್‌ಗಿಂತ ಮುಂಚೆ ಸಿದ್ಧಪಡಿಸಿದ 3 ಲಕ್ಷ ರೂ. ಕರದಂಟು ಇದೆ. ಆದರೆ, ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಕರದಂಟು ತಯಾರಿಕೆ ಮತ್ತು ಮಾರಾಟ ಸ್ಥಗಿತಗೊಳಿಸಿದ್ದೇವೆ.-ಸಂತೋಷ ಐಹೊಳ್ಳಿ, ವಿಜಯಾ ಕರದಂಟು ಮಾಲೀಕರು

Advertisement

ಕೋವಿಡ್ 19 ಲಾಕ್‌ ಹಿನ್ನೆಲೆಯಲ್ಲಿ ಕರದಂಟು ಮಳಿಗೆ ಬಂದ್‌ ಮಾಡಲಾಗಿದೆ. ಆದರೆ ಲಾಕ್‌ಡೌನ್‌ಗಿಂತ ಮುಂಚಿತವಾಗಿ ಸಿದ್ಧಪಡಿಸಿದ್ದ 150 ಕೆಜಿ ಕರದಂಟು ಉಚಿತವಾಗಿ ಹಂಚಲಾಗಿದೆ. 43 ದಿನಗಳಿಂದ ಅಂಗಡಿಗಳು ಬಂದ್‌ ಆಗಿವೆ. ಇದರಿಂದ ಬಾಡಿಗೆ ಕಟ್ಟುವುದು ಕಷ್ಟವಾಗಿದೆ. ಲಕ್ಷಾಂತರ ರೂ. ನಷ್ಟವಾಗಿದೆ ಮತ್ತು ಉದ್ಯಮ ಕೂಡಾ ಬಂದ್‌ ಆಗಿದೆ. –ಸಯ್ಯದ ಸಿಕಂದರ ಪಾಷಾ ಖಾದ್ರಿ, ಖಾದ್ರಿ ಕರದಂಟು ಮಾಲೀಕರು

 

-ಎಚ್‌.ಎಚ್‌.ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next