ವಾಷಿಂಗ್ಟನ್: ಅಮೆರಿಕ ಕೋವಿಡ್ 19 ದಿಂದ ಅಕ್ಷರಶಃ ನಲುಗಿ ಹೋಗಿದೆ. ಇದರೊಂದಿಗೆ ನಿರುದ್ಯೋಗಿಗಳ ಸಂಖ್ಯೆ ದುಪ್ಪಟ್ಟಾಗುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.
ಪ್ರತಿಷ್ಠಿತ ಸಂಸ್ಥೆಗಳು ಆರ್ಥಿಕ ಹೊಡೆತಕ್ಕೆ ಸಿಲುಕಿದ್ದು, ಉದ್ಯೋಗ ಕಡಿತಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಪಿಂಕ್ ಸ್ಲಿಪ್ ಕೊಡುತ್ತಿವೆ. ಇದರಿಂದಾಗಿ ನಿರುದ್ಯೋಗಿಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಳವಾಗುತ್ತಿದ್ದು, ನಿರುದ್ಯೋಗಿಗಳಿಗೆ ನೀಡುವ ಭತ್ಯೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದು ಸಂಸ್ಥೆಯೊಂದು ವರದಿ ಮಾಡಿದೆ.
ಕಳೆದ ಒಂದು ವಾರದಲ್ಲಿಯೇ 30 ಲಕ್ಷಕ್ಕೂ ಅಧಿಕ ಅಮೆರಿಕನ್ನರು ನಿರುದ್ಯೋಗ ಭತ್ಯೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದು ಕೋವಿಡ್ 19 ವೈರಸ್ ನಿಂದ ಹಾಗೂ ಲಾಕ್ ಡೌನ್ ನಿಂದ ನಿರುದ್ಯೋಗಿಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಾಗೂ ಜನಜೀವನ ಅಸ್ತವ್ಯಸ್ತವಾಗುತ್ತಿರುವ ಚಿತ್ರಣ ಎಂದು ವರದಿ ವಿಶ್ಲೇಷಿಸಿದೆ.
ಅಮೆರಿಕದ ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ, ನಿರುದ್ಯೋಗ ಭತ್ಯೆಗಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಶನಿವಾರದ ವೇಳೆ 3.3 ಮಿಲಿಯನ್ ಗೆ ಏರಲಿದೆ ಎಂದಿತ್ತು. ಕಳೆದ ವಾರ ಈ ಸಂಖ್ಯೆ 2,82,000 ಆಗಿತ್ತು. ಇದಕ್ಕೂ ಮುನ್ನ 1.7 ಮಿಲಿಯನ್ ಅಮೆರಿಕನ್ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದ್ದರು. ಒಟ್ಟೂ ಈ ಪ್ರಮಾಣ ಸಾಕಷ್ಟು ಹೆಚ್ಚಳವಾಗಿದೆ.
ಕೋವಿಡ್ 19 ವೈರಸ್ ನಿಂದ ಉಂಟಾದ ತೊಂದರೆ, ನಷ್ಟದ ಬಗ್ಗೆ ಅಮೆರಿಕದ ಪ್ರತಿ ರಾಜ್ಯವೂ ವಿವರವನ್ನು ನೀಡುತ್ತಿದೆ. ಕಾರ್ಮಿಕ ಇಲಾಖೆ ಪ್ರಕಾರ, ರಾಜ್ಯಗಳಲ್ಲಿನ ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಸಂಪೂರ್ಣ ಬಂದ್ ಆಗಿವೆ. ಅದೇ ರೀತಿ ಸಿನಿಮಾ ಮಂದಿರಗಳು, ಸಾರಿಗೆ,ಕೈಗಾರಿಕಾ ವಲಯ, ಆರೋಗ್ಯ ವಲಯ ಮತ್ತು ಸಾಮಾಜಿಕ ನೆರವು ಕೂಡಾಬಂದ್ ಆಗಿದೆ.ಇದೊಂದು ದುರಂತ ಸ್ಥಿತಿ ಎಂದಿದ್ದಾರೆ ಡ್ನೂಶೆ ಬ್ಯಾಂಕ್ ಸೆಕ್ಯೂರಿಟೀಸ್ ನ ಮುಖ್ಯ ಆರ್ಥಿಕ ತಜ್ಞ ರ್ಟೋ ಸ್ಟೇನ್ ಸ್ಲೋಕ್. 1967ರ ನಂತರ ಕಾರ್ಮಿಕ ಇಲಾಖೆ ಪ್ರಕಟಿಸಿದ ಅಂಕಿ ಅಂಶದ ಪ್ರಕಾರ ದೇಶದ ಇತಿಹಾಸದಲ್ಲಿಯೇ ದಾಖಲೆಯ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ ಎಂದು ಹೇಳಿದರು.