ಯಾದಗಿರಿ: ವಿಶ್ವದೆಲ್ಲೆಡೆ ತಲ್ಲಣ ಸೃಷ್ಟಿಸಿರುವ ಕೋವಿಡ್ 19 ರೈತರನ್ನು ಆತಂಕಕ್ಕೆ ದೂಡಿದೆ. ಜಿಲ್ಲೆಯ ಹಲವೆಡೆ ರೈತರು ತೋಟಗಾರಿಕೆ ಬೆಳೆ, ಹಣ್ಣುಗಳನ್ನು ಬೆಳೆದಿದ್ದು, ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ಬೆಳೆಯನ್ನು ಸಾರಿಗೆ ಸೌಕರ್ಯವಿಲ್ಲದೇ ಸಾಗಿಸಲಾಗದೇ ತೀವ್ರ ಹಾನಿ ಅನುಭವಿಸುವಂತಾಗಿದೆ.
ರೈತರು ಬೆಳೆದ ಬೆಳೆ ಕಟಾವಿಗೆ ಬಂದಿದ್ದರೂ ಅದಕ್ಕೆ ಮಾರುಕಟ್ಟೆ ವ್ಯವಸ್ಥೆ ಇಲ್ಲದ್ದರಿಂದ ಸಮಸ್ಯೆಯಾಗಿದೆ. ಅದರಲ್ಲೂ ವಿಶೇಷವಾಗಿ ತರಕಾರಿ, ಕಾಯಿಪಲ್ಲೆಗಳಾದ ಬೆಂಡೆ, ಚವಳಿಕಾಯಿ, ಪಾಲಕ, ಬದನೆಕಾಯಿ, ಹೀರೆಕಾಯಿ, ಸವತೆಕಾಯಿ, ಟೊಮೊಟೊ ಸೇರಿದಂತೆ ಎಲ್ಲವೂ ಕೊಳೆತು ಹೋಗಿ ಹಾಳಾಗಿವೆ. ಮಾರಾಟ ಮಾಡಲೂ ಆಗದೇ ತಿಪ್ಪೆಗೆ ಚೆಲ್ಲುವಪರಿಸ್ಥಿತಿ ನಿರ್ಮಾಣವಾಗಿದೆ. ಗುರುಮಠಕಲ್ ತಾಲೂಕಿನ ಅರಕೇರಾ ಕೆ. ಗ್ರಾಮದ ತಾಯಪ್ಪ ಸಿದ್ದಣ್ಣ ಪೂಜಾರಿ ತಮ್ಮ 6 ಎಕರೆ ತೋಟದಲ್ಲಿ ತೋಟಗಾರಿಕೆ ಹಾಗೂ ತರಕಾರಿ ಬೆಳೆ ಬೆಳೆದಿದ್ದು, ಎಲ್ಲ ಅರ್ಧ ತರಕಾರಿ ಕೊಳೆತು ಹೋಗಿದೆ. ಇನ್ನರ್ಧ ಕೇಳುವವರಿಲ್ಲ. ಸುಮಾರು 3.5 ಲಕ್ಷ ರೂ. ಖರ್ಚು ಮಾಡಿದ ರೈತ ಕಂಗಾಲಾಗುವಂತಾಗಿದೆ.
ಇನ್ನೊಂದೆಡೆ ಕಲ್ಲಂಗಡಿ ಬೆಳೆದ ರೈತರಿಗೂ ಈ ಆತಂಕದಿಂದ ಹೊರತಾಗಿಲ್ಲ. ವಡಗೇರಾ ತಾಲೂಕಿನ ಕಾಡಂಗೇರಾ(ಬಿ) ಗ್ರಾಮದ ಶಂಕರ ಬಂಡಿ ಸೀಮೆಯಲ್ಲಿ ಸರ್ವೇ ನಂ.25ರಲ್ಲಿ ಮಲ್ಲಪ್ಪ ಪುರಿ ತನ್ನ 2.32 ಎಕರೆಯಲ್ಲಿ ಬೆಳೆದಿದ್ದ ಕಲ್ಲಂಗಡಿ ಕಟಾವಿಗೆ ಬಂದು ರೈತನಿಗೆ ಕೈ ತುಂಬ ಹಣ ನೀಡಬೇಕಿತ್ತು. ಆದರೆ ಕೈ ಖಾಲಿ ಮಾಡಿ ಚಿಂತೆಗೀಡು ಮಾಡಿದೆ.
ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾರದೆ ಹೊಲದಲ್ಲಿ ಬಿಸಿಲಿಗೆ ಬಿದ್ದು ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ಖರ್ಚು ಮಾಡಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ನಷ್ಟದಿಂದ ಸಾಲದ ಸುಳಿಗೆ ಸಿಕ್ಕಿ ಬದುಕು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬೆಳೆದ ಫಸಲು ಮಾರಾಟಕ್ಕೆ ತೆಗೆದುಕೊಂಡು ಹೋಗುವುದಕ್ಕೆ ವ್ಯಾಪಾರಿಗಳು ಬರುತ್ತಿಲ್ಲ. ರೈತರಾದರೂ ತೆಗೆದುಕೊಂಡು ಹೋಗಬೇಕೆಂದರೆ ವಾಹನಗಳೂ ಸಂಚರಿಸುತ್ತಿಲ್ಲ. ಹಾಗಾಗಿ ದಿಕ್ಕು ತೋಚದೇ ರೈತರು ಕಂಗಾಲಾಗಿದ್ದಾರೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕಾಗಿದೆ ಎಂದು ರೈತ ಮಹಿಳಾ ಮುಖಂಡರಾದ ನಾಗರತ್ನ ಪಾಟೀಲ ಒತ್ತಾಯಿಸಿದ್ದಾರೆ.
ರೈತರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಗುರುಮಠಕಲ್ ತಾಲೂಕು ಸಮಿತಿ ಒತ್ತಾಯಿಸಿದೆ. ತೋಟಗಾರಿಕೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು ದೇಶಾದ್ಯಂತ ಬೀಗಮುದ್ರ ಸ್ಥಿತಿ ಇರುವ ಹಿನ್ನೆಲೆಯಲ್ಲಿ ದೇಶದ ಜನತೆಗೆ ಸಂಕಷ್ಟ ಎದುರಾಗಿದ್ದು ಅದರಲ್ಲೂ ರೈತರಿಗೆ ಇನ್ನಿಲ್ಲದ ಸಮಸ್ಯೆಯಾಗಿದೆ. ಕೊನೆಗೆ ವಿಧಿಯಿಲ್ಲದೇ ತಮ್ಮ ಹೊಲದಲ್ಲಿ ಬೆಳೆದ ಬೆಳೆಯನ್ನು ಟ್ರ್ಯಾಕ್ಟರ್‌ನಿಂದ ಅರಗುತ್ತಿರುವ ರೈತನ ನೆರವಿಗೆ ಸರ್ಕಾರ ತಕ್ಷಣ ಬರಬೇಕು. ರೈತರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಅಧ್ಯಕ್ಷ ನಾಗೇಂದ್ರ ಗದ್ದಿಗಿ ಆಗ್ರಹಿಸಿದ್ದಾರೆ.
ಬೆಳೆಗೆ ಪ್ರತಿ ಎಕರೆಗೆ 20 ರಿಂದ 30 ಸಾವಿರ ರೂ. ಖರ್ಚು ಮಾಡಿದ್ದೇವೆ. ಎಕರೆಗೆ ಒಂದೂವರೆ ಲಕ್ಷ ರೂ. ಲಾಭದ ನಿರೀಕ್ಷೆಯಿತ್ತು. ಮಹಾಮಾರಿ ಕೊರೊನಾ ನಮ್ಮ ಬದುಕು ದುಸ್ಥರಗೊಳಿಸಿದೆ. ಕೈಯಿಂದ ಖರ್ಚು ಮಾಡಿದ್ದಕ್ಕೆ ಒಂದು ರೂಪಾಯಿಯೂ ಕೈಗೆ ಬಾರದಿರುವುದು ಸಾಕಷ್ಟು ಆರ್ಥಿಕ ಹೊರ ಮಾಡಿದೆ. ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕು.
-ಹುಚ್ಚಪ್ಪ ಪುರಿಲಿಂಗಪ್ಪನೋರ್, ರೈತ.
-ಅನೀಲ ಬಸೂದೆ.