ಬೆಂಗಳೂರು: ಮಕ್ಕಳು ಬರುತ್ತಾರೆಂದು ಮನೆಮಂದಿಯೆಲ್ಲಾ ಆಸೆ ಕಣ್ಣುಗಳಿಂದ ನೋಡುತ್ತಿದ್ದರು. ಆದರೆ, ಗೂಡು ಸೇರಬೇಕಾದ ಅಂತಾರಾಜ್ಯ ಬಾಲಕಿಯರು ತಾತ್ಕಾಲಿಕವಾಗಿ ರಾಜ್ಯದ ಬಾಲಮಂದಿರದಲ್ಲೇ ಉಳಿಯಬೇಕಾದ ಸ್ಥಿತಿ ಎದುರಾಗಿದೆ!
ಬಾಲಕಾರ್ಮಿಕ ಮಾಫಿಯಾ ಹಿಡಿತದಿಂದ ಪಾರಾಗಿ ಹೆತ್ತವರ ಮಡಿಲು ಸೇರಲು ಕಾತುರದಲ್ಲಿದ್ದ ಬಿಹಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಮೂಲದ ಐವರು ಬಾಲಕಿಯರಿಗೆ ನಿರಾಸೆ ಉಂಟಾಗಿದೆ. ಮಕ್ಕಳ ಕಲ್ಯಾಣ ಸಮಿತಿಯು ಬಾಲಕಿಯರನ್ನು ಅವರ ರಾಜ್ಯಕ್ಕೆ ಕಳುಹಿಸಲು ರೈಲ್ವೆ ಟಿಕೆಟ್, ಪೊಲೀಸ್ ಸಿಬ್ಬಂದಿ ವ್ಯವಸ್ಥೆಯನ್ನೂ ಮಾಡಿತ್ತು. ನಾಲ್ವರು ಮಾಸಾಂತ್ಯದಲ್ಲಿ ಮತ್ತು ಒಬ್ಬ ಬಾಲಕಿ ಏಪ್ರಿಲ್ ಮೊದಲ ವಾರದಲ್ಲಿ ಹೋಗಲು ದಿನಾಂಕವೂ ನಿಗದಿಯಾಗಿತ್ತು. ಕೋವಿಡ್ 19 ಭೀತಿ ಹಿನ್ನೆಲೆ ಇವರ ಪ್ರಯಾಣ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.
ಬಾಲನ್ಯಾಯ ಕಾಯ್ದೆಯಡಿ ಮಕ್ಕಳನ್ನು ರಕ್ಷಿಸಿದ ನಾಲ್ಕು ತಿಂಗಳಲ್ಲೇ ತಮ್ಮ ಮನೆಗೆ ಕಳುಹಿಸಬೇಕು. ಆದರೆ ಭದ್ರತಾ ಸಿಬ್ಬಂದಿ, ಅಂತಾರಾಜ್ಯದಲ್ಲಿ ಬಾಲಕಿಯರ ವಿಳಾಸ ದೊರೆಯದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಬಾಲಕಿಯರು ವರ್ಷಗಟ್ಟಲೇ ರಾಜ್ಯದಲ್ಲಿ ಉಳಿಯಬೇಕಾಗುತ್ತದೆ. ಈಗ ಎಲ್ಲ ವ್ಯವಸ್ಥೆಗಳು ಆಗಿದ್ದರೂ, ಕೊರೊನಾ ಹಿನ್ನೆಲೆಯಲ್ಲಿ ಊರಿಗೆ ತೆರಳುವ ಭಾಗ್ಯ ಇಲ್ಲದಂತಾಗಿದೆ. ಬಿಹಾರ, ಒಡಿಶಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ ಹಾಗೂ ಆರೋಗ್ಯ ಇಲಾಖೆಯು ಕೋವಿಡ್ 19 ಭೀತಿ ಕಡಿಮೆಯಾಗುವವರೆಗೂ ಈ ಬಾಲಕಿಯರು ರಾಜ್ಯಕ್ಕೆ ಬರುವುದು ಬೇಡ ಎಂದು ತಿಳಿಸಿದೆ.
ಹಾಗಾಗಿ, ತಡೆಹಿಡಿಯಲಾಗಿದೆ. ಈ ಮಧ್ಯೆ ಬೆಂಗಳೂರಿನ ಬಾಲಮಂದರಿ ಮತ್ತು ಅನುಸರಣಾ ಗೃಹಗಳಲ್ಲಿ ಕೋವಿಡ್ 19 ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ನಿರ್ದೇಶಕಿ ಪಲ್ಲವಿ ಅಕುರಾತಿ ತಿಳಿಸಿದರು.
ಥರ್ಮಲ್ ತಪಾಸಣೆ : ಭಿಕ್ಷಾಟನೆ, ಬಾಲಕಾರ್ಮಿಕ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 18 ವರ್ಷ ಕೆಳಪಟ್ಟ ಬಾಲಕಿಯರನ್ನು ಥರ್ಮಲ್ ತಪಾಸಣೆಗೆ ಒಳಪಡಿಸಿ ಕೋವಿಡ್ 19 ಇಲ್ಲ ಎಂಬುದನ್ನು ದೃಢಪಡಿಸಿ ಕೊಳ್ಳಲಾ ಗುತ್ತಿದೆ. ಇತ್ತೀಚಿಗೆ ಸಿಕ್ಕ ಬಾಲಕಿಯರಿಗೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ ನಂತರ ಬಾಲ ಮಂದಿರಕ್ಕೆ ಕಳುಹಿಸಲಾಗುವುದು ಎಂದು ಬೆಂಗಳೂರು ನಗರ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಅಂಜಲಿ ರಾಮಣ್ಣ ತಿಳಿಸಿದರು.
ಕೋವಿಡ್ 19 ಭೀತಿ ಮುನ್ನೆಚ್ಚರಿಕಾ ಕ್ರಮವಾಗಿ ಬಾಲಮಂದಿರಗಳನ್ನು ಸ್ವತ್ಛವಾಗಿಡಲು ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐಸಿಪಿಎಸ್) ಆದೇಶ ಹೊರಡಿಸಿದ್ದು, ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಅನ್ಯರಾಜ್ಯ ಮತ್ತು ಜಿಲ್ಲೆಯ ಮಕ್ಕಳನ್ನು ಊರಿಗೆ ಕಳುಹಿಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
–ವಾಸುದೇವ ಶರ್ಮಾ, ಕಾರ್ಯಕಾರಿ ನಿರ್ದೇಶಕರು, ಚೈಲ್ಡ್ ರೈಟ್ ಟ್ರಸ್ಟ್
-ಮಂಜುನಾಥ ಗಂಗಾವತಿ