Advertisement

ಕಲಾವಿದರ ಮೇಲೆ ಕೋವಿಡ್‌-19 ದುಷ್ಪರಿಣಾಮ

09:16 PM May 15, 2020 | Sriram |

ಮಣಿಪಾಲ: ಕೋವಿಡ್‌ 19 ವೈರಸ್‌ ಹಿನ್ನೆಲೆ ದೇಶಾದ್ಯಂತ ಲಾಕ್‌ಡೌನ್‌ ಹೇರಲಾಗಿದೆ. ಇದರಿಂದ ಜನರು ಆರ್ಥಿಕ ಬಿಕ್ಕಟ್ಟು ಎದುರಿಸುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಕಲೆ ಮತ್ತು ಸಂಸ್ಕೃತಿಯಾದರೂ ಹೇಗೆ ಬೆಳವಣಿಗೆ ಕಂಡೀತು. ಲಾಕ್‌ಡೌನ್‌ನಿಂದ ಹೊರಗೆ ಬರಲಾಗದೆ ಅದೆಷ್ಟು ಮಂದಿ ಸಂಸ್ಕೃತಿ ಹರಿಕಾರರು ತಣ್ಣಗೆ ಮನೆಯೊಳಗೆ ಗುನುಗುತ್ತಿದ್ದಾರೋ ದೇವನೇ ಬಲ್ಲ.

Advertisement

ಕಲಾವಿದರಿಗೆ ಸಂಕಷ್ಟ
ಮಾಡೋಕೆ ಕೆಲಸವೇ ಇಲ್ಲ. ಇದ್ದರೂ ಹೋಗುವಂತಿಲ್ಲ. ಹೋದರೂ ಮತ್ತೆ ಮನೆ ಸೇರಬಹುದೆಂಬ ವಿಶ್ವಾಸವೂ ಇಲ್ಲ. ಕಲಾವಿದ ಬದುಕಬೇಕೆಂದರೆ ಆತ ಸದಾ ಪ್ರಚಲಿತದಲ್ಲಿರಬೇಕು. ಕಲೆಯೊಂದಿಗೆ ಉಸಿರಾಡಬೇಕು. ಅದರ ಹಿಡಿತವನ್ನೇ ಬಿಟ್ಟು ಬಿಟ್ಟರೆ ಈಜು ಮರೆತ ಮೀನಿನಂತಾಗುವ ಸ್ಥಿತಿ ಕಲಾವಿದನಿಗೂ ಬರಬಹುದು.

ಕಲೆ, ಸಂಸ್ಕೃತಿಯನ್ನು ಆರ್ಥಿಕ ಸಂಕಷ್ಟದಿಂದ ಹೇಗೆ ಪಾರು ಮಾಡಬಹುದು?
ಕಲೆ ಮತ್ತು ಸಂಸ್ಕೃತಿಯ ರಕ್ಷಣೆಯ ಜವಾಬ್ದಾರಿ ಸರಕಾರ ಮಾಡಬೇಕಾಗಿರುವುದು ಅಗತ್ಯ. ವಿವಿಧ ಕಂಪೆನಿಗಳ ಪರವಾಗಿ ಕೆಲಸ ಮಾಡುವವರಿಗಾಗಿ (ಗಿಗ್‌ ವರ್ಕರ್ಸ್‌) ಸಾಮಾಜಿಕ ಭದ್ರತೆ ಯೋಜನೆ ಜಾರಿ ಮಾಡಲಾಗುತ್ತದೆ. ಕೆಲಸದಿಂದ ಕಿತ್ತು ಹಾಕಲ್ಪಟ್ಟ ಉದ್ಯೋಗಿಗಳ ಕೌಶಲಾವೃದ್ಧಿಗೆ ನಿಧಿ ಸ್ಥಾಪನೆ ಮಾಡಲಾಗುತ್ತದೆ. ಮಹಿಳೆಯರಿಗೆ ಎಲ್ಲ ರೀತಿಯ ಕೆಲಸ ಮಾಡಲು ಅನುಮತಿಯಿದೆ. ಆದರೆ ಕಲಾವಿದರಿಗಾಗಿ ಏನು ಸೌಲಭ್ಯಗಳನ್ನು ನೀಡಿದೆ? 20 ಲಕ್ಷ ಕೋ. ರೂ.ಗಳಲ್ಲಿ ಒಂದು ಚೂರಾದರೂ ಕಲಾವಿದರ ನೆರವಿಗೆ ಒದಗಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.

ಕಲಾವಿದರಿಗೂ ಸಿಗಲಿ ಸಹಾಯಹಸ್ತ
ದೇಶದ ಎಲ್ಲ ಕಡೆ ಸಮಾನ ಕನಿಷ್ಠ ವೇತನ ಜಾರಿ ಮಾಡಲಾಗುತ್ತದೆ. ಇನ್ನು ಉದ್ಯೋಗಿಗಳಿಗೆ ವಾರ್ಷಿಕ ಆರೋಗ್ಯ ಪರೀಕ್ಷೆ, ಔದ್ಯೋಗಿಕ ಸುರಕ್ಷತೆಯನ್ನು ನೀಡಬೇಕಾಗುತ್ತದೆ. ಕೇವಲ 10 ಮಂದಿಗಿಂತ ಕಡಿಮೆ ಕೆಲಸಗಾರರಿದ್ದರೂ ಇದು ಅನ್ವಯವಾಗುತ್ತದೆ ಎಂಬ ನಿಯಮಗಳನ್ನು ಇತರ ವರ್ಗಕ್ಕೆ ಸರಕಾರ ರೂಪಿಸಿದೆ. ಆದರೆ ಕಲೆಯನ್ನೇ ಬದುಕಾಗಿಸಿಕೊಂಡ ಕಲಾವಿದರಿಗೆ ಯಾವ ಪ್ಯಾಕೇಜ್‌ ನೀಡಲು ಬಯಸುತ್ತದೆ. ಸರಕಾರದ ಮುಂದೆ ಕಲಾವಿದರ ಅವಲತ್ತು ಹಲವಿದೆ. ಮನೆ ಬಾಡಿಗೆ, ವಿದ್ಯುತ್‌, ನೀರಿನ ಬಿಲ್‌ಗ‌ಳನ್ನು ಕಟ್ಟಲು ಕಷ್ಟವಿದೆ, ಸಾಲವೂ ಇನ್ನೂ ಹಾಗೇ ಬಾಕಿ ಇದೆ. ಏನು ಮಾಡೋದು? ಜೀವನ ಸಾಗಿಸೋದು ಆದರೂ ಹೇಗೆ? ಸರಕಾರ ಶೀಘ್ರ ಕಲಾವಿದರು, ಅದಕ್ಕೆ ಪೂರಕ ಇತರ ವೃತ್ತಿ ಸಂಬಂಧೀ ಚಟುವಟಿಕೆ ನಡೆಸುವವರಿಗೆ ಸಂದಿಗ್ಧ ಕಾಲದಲ್ಲಿ ನೆರವಾಗುವುದು ಅಗತ್ಯವಾಗಿದೆ.

ಯಾರಿಗೆಲ್ಲ ನೆರವು ಬೇಕಾಗಿದೆ?
ಯಕ್ಷಗಾನ ಕ್ಷೇತ್ರ, ನಾಟಕ ರಂಗ, ಸಿನೇಮಾ, ಗೊಂಬೆಯಾಟ ಇತರ ರಂಗ ಚಟುವಟಿಕೆಗಳನ್ನು ನಡೆಸುವ ಕಲಾವಿದರಿಗೆ ಕಲೆಯ ಪ್ರಸ್ತುತಿ ಇಲ್ಲದೆ ಆದಾಯ ಇಲ್ಲ. ಕಲಾವಿದ ಬದುಕಬೇಕೆಂದರೆ ಕಲೆಯ ಪ್ರಸ್ತುತಿಯಾಗಬೇಕು. ಎಷ್ಟೋ ದಿನಗಳಿಂದ ಕಲಾ ಪ್ರದರ್ಶನವಿಲ್ಲದೆ ಹೇಗೆ ಕುಟುಂಬವನ್ನು ಪೊರೆಯಬೇಕೆಂಬ ಸಂಕಷ್ಟ ಅವರಲ್ಲಿ ಮನೆ ಮಾಡಿದೆ. ಅನೇಕ ಮಾನವೀಯ ಹೃದಯವುಳ್ಳವರು ಆಹಾರ ವಸ್ತುಗಳ ನೆರವು ಒದಗಿಸಿದ್ದರೂ ಅದು ಎಲ್ಲ ಕಲಾವಿದರಿಗೂ ಸಿಕ್ಕಿವೆ ಹಾಗೂ ಸಾಕಾಗಿವೆ ಎಂಬ ಸ್ಪಷ್ಟ ಮಾಹಿತಿ ಇಲ್ಲ.

Advertisement

ಸಿನೇಮಾ ರಂಗ ತತ್ತರ
ಶೂಟಿಂಗ್‌ ಮುಗಿಸಿ ಇನ್ನೇನು ಬಿಡುಗಡೆ ಮಾಡಬೇಕು ನಿರ್ಧರಿಸಿದ್ದ ಚಿತ್ರಗಳೆಷ್ಟೋ, ಶೂಟಿಂಗ್‌ ಅರ್ಧಕ್ಕೆ ನಿಂತು ಪ್ಯಾಕಪ್‌ ಆದ ಚಿತ್ರಗಳೆಷ್ಟೋ?, ಮತ್ತೆ ಕಲಾವಿದರನ್ನು, ಸಂಪನ್ಮೂಲಗಳನ್ನು ಹೊಂದಿಸುವುದು ಸುಲಭದ ಮಾತಂತೂ ಖಂಡಿತಾ ಅಲ್ಲ. ಒಂದು ಸಿನೇಮಾ ನಿಂತರೆ ಅಸಂಖ್ಯಾತ ಜನ ಸಂಕಟ ಪಡುತ್ತಾರೆ. ಅಷ್ಟೇ ಅಲ್ಲದೆ ಸಿನೇಮಾ ರಂಗವನ್ನೇ ನಂಬಿದ ಪೂರಕ ಉದ್ಯಮಗಳಿವೆ. ಸಿನೇಮಾ ಥಿಯೇಟರ್‌ಗಳು, ಮಾಲ್‌ಗ‌ಳಲ್ಲಿ ದುಡಿಯುವವರೂ ಕೆಲಸವಿಲ್ಲದೆ ಮನೆಯಲ್ಲೇ ದಿನ ದೂಡುತ್ತಿದ್ದಾರೆ.

ಸರಕಾರ ಏನು ಮಾಡಬಹುದು?
ಕನಿಷ್ಠ ವೇತನ ವ್ಯವಸ್ಥೆ ಕಲಾವಿದರಿಗೂ ಅನ್ವಯವಾಗಬೇಕು. ಉದ್ಯೋಗ ಸುರಕ್ಷೆ, ಆಪತ್ಕಾಲದಲ್ಲಿ ನೆರವಿನ ಹಸ್ತ ಚಾಚಬೇಕು. ಸಾಮಾಜಿಕ ಭದ್ರತೆಯನ್ನು ಕಲಾವಿದನಲ್ಲಿ ಮೂಡಿಸುವ ಕಾರ್ಯ ಸರಕಾರದಿಂದ ಆಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next