ಹೊಸದಿಲ್ಲಿ: ದೇಶದಲ್ಲಿ ಕೆಲವು ದಿನಗಳಿಂದ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಸಾವಿನ ಸಂಖ್ಯೆ ಮಾತ್ರ ಏರುತ್ತಿದೆ. ಇಂದು ಮತ್ತೆ ಸಾವಿನ ಸಂಖ್ಯೆ ನಾಲ್ಕು ಸಾವಿರ ದಾಟಿದ್ದು, 24 ಗಂಟೆ ಅವಧಿಯಲ್ಲಿ 4120 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಈ ಅವಧಿಯಲ್ಲಿ 3,62,727 ಮಂದಿಗೆ ಕೋವಿಡ್ 19 ಸೋಂಕು ದೃಢವಾಗಿದೆ. 3,52,181 ಮಂದಿ ಸೋಂಕಿತರು ಈ ಅವಧಿಯಲ್ಲಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಇದುವರೆಗೆ 2 ,37,03,665 ಮಂದಿಗೆ ಸೋಂಕು ದೃಢವಾಗಿದ್ದು, ಅವರಲ್ಲಿ ಇದುವರೆಗೆ 1,97,34,823 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 2,58,317 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 37,10,525 ಸಕ್ರಿಯ ಸೋಂಕು ಪ್ರಕರಣಗಳಿವೆ.
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ 20 ಸಾವಿರ ಗಡಿದಾಟಿದ್ದು, ಸತತ 2ನೇ ದಿನವೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸೋಂಕಿತರ ಸಾವಾಗಿದೆ. ಬುಧವಾರ 39,998 ಮಂದಿಗೆ ಸೋಂಕು ತಗುಲಿದ್ದು, 517 ಸೋಂಕಿತರ ಸಾವಾಗಿದೆ. 34752 ಸೋಂಕಿತರು ಗುಣಮುಖರಾಗಿದ್ದಾರೆ.
ಬೆಂಗಳೂರಿನಲ್ಲಿಯೇ 16286 ಮಂದಿಗೆ ಸೋಂಕು ತಗುಲಿದ್ದು, 275 ಸಾವಾಗಿವೆ. ಸೋಂಕಿನ ಪಾಸಿಟಿವಿಟಿ ದರ ಶೇ.30ರ ಆಸುಪಾಸಿನಲ್ಲಿ ಮತ್ತು ಸೋಂಕಿತರ ಮರಣ ದರ ಶೇ.1.3 ರಷ್ಟು ದಾಖಲಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆ ಗಳು 20 ಸಾವಿರದಷ್ಟು ಹೆಚ್ಚಳವಾಗಿವೆ. ಹೊಸ ಪ್ರಕರಣಗಳು 488, ಸೋಂಕಿತರ ಸಾವು 37 ಹೆಚ್ಚಳವಾಗಿದೆ.