Advertisement

ಸಂಕಷ್ಟದ ಹಾದಿಯಲ್ಲಿ ಜಗತ್ತು ರೋಗ ನಿಯಂತ್ರಣಕ್ಕೆ ಏನು ದಾರಿ?

01:08 AM Jul 02, 2020 | Hari Prasad |

ಪ್ರಪಂಚದಲ್ಲಿ ಕೋವಿಡ್ 19 ಪ್ರಸರಣ ವೇಗ ಈಗ ಮೊದಲಿಗಿಂತಲೂ ಅಧಿಕವಾಗಿದೆ.

Advertisement

ಕಳೆದ ಡಿಸೆಂಬರ್‌ನಲ್ಲಿ ಚೀನದ ವುಹಾನ್‌ನಿಂದ ಆರಂಭವಾದ ಈ ರೋಗ ಈಗಲೂ ನಿಲ್ಲುವ ಸೂಚನೆಯನ್ನು ತೋರಿಸುತ್ತಿಲ್ಲ.

ಬೇಸಗೆಯ ವೇಳೆ ಇದರ ಪ್ರಸರಣ ತಗ್ಗಬಹುದು ಎನ್ನಲಾಯಿತು, ಮಳೆಗಾಲದಲ್ಲಿ ಮಂದವಾಗುತ್ತದೆ ಎಂದು ಹೇಳಲಾಯಿತು, ಅದಷ್ಟೇ ಅಲ್ಲದೇ ವೈರಸ್‌ ರೂಪಾಂತರ ಹೊಂದುತ್ತಿದ್ದು ಅದು ಶೀಘ್ರದಲ್ಲೇ ದುರ್ಬಲವಾಗಿ ತಾನಾಗಿಯೇ ಇಲ್ಲವಾಗುತ್ತದೆ ಎಂಬ ಭರವಸೆಯ ನುಡಿಗಳೆಲ್ಲ ಹುಸಿಯಾಗಿವೆ.

ಅತ್ತ ಅಮೆರಿಕದಲ್ಲಿ ರೋಗವು ಎಪ್ರಿಲ್‌ ತಿಂಗಳಲ್ಲೇ ಉತ್ತುಂಗಕ್ಕೇರಿದೆ ಎಂದು ಅನಿಸಿತಾದರೂ ಈಗ ಮೊದಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲೇ ಪ್ರಕರಣಗಳು ಪತ್ತೆಯಾಗುತ್ತಿವೆ. ಹಾಗಿದ್ದರೆ ದೇಶಗಳಲ್ಲಿ ರೋಗ ಉತ್ತುಂಗಕ್ಕೇರಿತೇ ಎನ್ನುವ ಪ್ರಶ್ನೆಗೂ ಸ್ಪಷ್ಟ ಉತ್ತರವಿಲ್ಲ.

ಆದರೆ ಇದರ ಅನಂತರ ಎರಡನೆಯ ಅಲೆಯೂ ಜಗತ್ತಿಗೆ ಬಂದಪ್ಪಳಿಸಲಿದೆ ಎಂದೂ ಸಾಂಕ್ರಾಮಿಕ ರೋಗ ತಜ್ಞರು ಎಚ್ಚರಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಂತೂ ಈಗ ಅಂಕಿಅಂಶಗಳನ್ನು ಎದುರಿಡುವುದಕ್ಕೆ ಸೀಮಿತವಾಗಿದೆಯೇನೋ ಎಂದೆನಿಸುತ್ತಿದೆ.

Advertisement

ಆದಾಗ್ಯೂ ಅನ್ಯ ರೋಗಗಳಷ್ಟು ಕೋವಿಡ್ 19 ಸೋಂಕು ಮಾರಕವಲ್ಲ ಎನ್ನುವುದೇನೋ ಸತ್ಯ. ಪ್ರತಿನಿತ್ಯ ಟಿ.ಬಿ., ಕ್ಯಾನ್ಸರ್‌, ಹೃದಯ ತೊಂದರೆಯಂಥ ಸಮಸ್ಯೆಯಿಂದುಂಟಾಗುವ ಮರಣ ದರವೇ ಅಧಿಕವಿದೆ. ಆದರೆ, ಈ ವೈರಸ್‌ನ ಪ್ರಸರಣ ವೇಗ, ಅದು ಬಹು ಆಯಾಮದಲ್ಲಿ ಮಾಡುತ್ತಿರುವ ಹಾನಿ ಅಧಿಕವಿದೆ.

ದೈಹಿಕ ಆರೋಗ್ಯಕ್ಕಿಂತ ಹೆಚ್ಚಾಗಿ ದೇಶಗಳ ಆರ್ಥಿಕ ಆರೋಗ್ಯಕ್ಕೆ ಅದು ಹೆಚ್ಚು ಹಾನಿ ಮಾಡುತ್ತಿದೆ. ವಿತ್ತ ಸ್ಥಿತಿಯಲ್ಲಿ ಏನೇ ಚೇತರಿಕೆ ಕಂಡಂತೆ ಆದರೂ ಉದ್ಯೋಗ ವಲಯಗಳು ನೆಲಕಚ್ಚಿವೆ. ಜನರ ಖರೀದಿ ಸಾಮರ್ಥ್ಯವೇ ಕುಸಿದುಹೋಗಿರುವುದರ ಬಿಸಿಯು ಉದ್ಯಮಗಳ ಮೇಲೆ, ತನ್ಮೂಲಕ ದೇಶಗಳ ಆರ್ಥಿಕತೆಯ ಮೇಲೆಯೇ ಕಾಣಿಸಿಕೊಳ್ಳುತ್ತಿದೆ. ಹಾಗಿದ್ದರೆ ಮುಂದೇನು ಕಥೆ ಎನ್ನುವ ಪ್ರಶ್ನೆ ಎದುರಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮುಂದಿನ ವರ್ಷದ ವೇಳೆಗೆ ಈ ರೋಗಕ್ಕೆ ಲಸಿಕೆ ಸಿದ್ಧವಾಗಬಹುದು (ಅಥವಾ ಇಲ್ಲ). ಹೀಗಾಗಿ ಈ ಕ್ಲಿಷ್ಟಕರ ಸಮಯದಲ್ಲಿ  ಜನಸಾಮಾನ್ಯರ ಬಳಿ ಇರುವ ಮಾರ್ಗವಿಷ್ಟೆ- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ವತ್ಛತೆಯನ್ನು ಪಾಲಿಸುವುದು.

ಹಾಗೆಂದು, ಇದು ನೆಪ ಮಾತ್ರದ ಕೆಲಸವಾಗಲೇಬಾರದು. ನಾವು ನಿರಾಶೆಯಿಂದ ಕೈಚೆಲ್ಲಬಾರದು. ಸದ್ಯಕ್ಕೆ ಔಷಧಗಳಿಗಿಂತ ಸಾಮಾಜಿಕ ಅಂತರ ಪಾಲನೆಯೇ ಪರಿಣಾಮಕಾರಿ ಎನ್ನುವುದು ಸಾಬೀತಾಗುತ್ತಿದೆ. ಈ ವಿಷಯದಲ್ಲಿ ಪ್ರತಿಯೊಬ್ಬ ನಾಗರಿಕನೂ ಜಾಗೃತನಾದರೆ ಖಂಡಿತ ರೋಗದ ವಿರುದ್ಧ ಮೇಲುಗೈ ಸಾಧಿಸುವುದಕ್ಕೆ ಸಾಧ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next