Advertisement

ಕೋವಿಡ್ 19 ಸೋಂಕು: ಕುಕ್ಕಾಜೆಯ ಮಹಿಳೆ ಸಾವು, ಪೊಲೀಸರಿಗೆ ಪಾಸಿಟಿವ್

02:45 AM Jul 17, 2020 | Hari Prasad |

ಬಂಟ್ವಾಳ: ರಕ್ತದೊತ್ತಡ, ಮಧುಮೇಹ ಸಹಿತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಂಚಿ ಸಮೀಪದ ಕುಕ್ಕಾಜೆಯ 47 ವರ್ಷದ ಮಹಿಳೆಯೊಬ್ಬರು ಗುರುವಾರ ಮೃತಪಟ್ಟಿದ್ದು, ಪರೀಕ್ಷೆಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ.

Advertisement

ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕಿನ ಮೂಲಕ ಪತ್ತೆಯಾಗಿಲ್ಲ. ಗುರುವಾರ ಮಂಚಿ-ಕುಕ್ಕಾಜೆ ಮಸೀದಿಯ ಧಪನ ಅಂತ್ಯಕ್ರಿಯೆ ನಡೆಸಲಾಯಿತು.

ಬಂಟ್ವಾಳ ತಾಲೂಕಿನಲ್ಲಿ ಗುರುವಾರ 18 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಬಡಗಬೆಳ್ಳೂರು, ಜೋಡುಮಾರ್ಗ, ಬಂಟ್ವಾಳ, ಪಾಣೆಮಂಗಳೂರು, ಗೋಳ್ತಮಜಲು, ನಂದಾವರ, ಬಿಳಿಯೂರು, ಮಂಚಿ, ಇಡಿRದು, ನರಿಕೊಂಬು, ಬಾಳ್ತಿಲ, ಸಾಲೆತ್ತೂರು, ವಿಟ್ಲ, ಉರಿಮಜಲು, ಫರಂಗಿಪೇಟೆ, ಬಿ.ಸಿ. ರೋಡ್‌, ಬಿ.ಮೂಡದ ವ್ಯಕ್ತಿಗಳು ಬಾಧಿತರು.

ಸುಳ್ಯದಲ್ಲಿ ಮೂರನೇ ಸಾವು
ಅಸೌಖ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಜು. 14ರಂದು ಮೃತಪಟ್ಟಿದ್ದ ಐವರ್ನಾಡು ಪರ್ಲಿಕಜೆಯ 54 ವರ್ಷದ ವ್ಯಕ್ತಿಗೆ ಕೋವಿಡ್ 19 ದೃಢಪಟ್ಟಿದೆ. ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫ‌ಲಕಾರಿಯಾಗದೆ ಅದೇ ದಿನ ಮೃತಪಟ್ಟಿದ್ದರು. ಮೃತದೇಹವನ್ನು ಆಸ್ಪತ್ರೆಯಲ್ಲೇ ಇರಿಸಿ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಗುರುವಾರ ವರದಿ ಬಂದಿದೆ.

ಪುತ್ತೂರು: ಮೂವರು ಪೊಲೀಸರಿಗೆ ಸೋಂಕು
ಪುತ್ತೂರು ನಗರ ಮಹಿಳಾ ಪೊಲೀಸ್‌ ಠಾಣೆಯ ಜೀಪು ಚಾಲಕ, 27 ವರ್ಷದ ಸಿಬಂದಿ, 23 ವರ್ಷದ ಇನ್ನೋರ್ವ ಮಹಿಳಾ ಸಿಬಂದಿ ಸಹಿತ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಒಟ್ಟು 9 ಪ್ರಕರಣಗಳು ಗುರುವಾರ ವರದಿಯಾಗಿವೆ.

Advertisement

ಮೂರು ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಉಂಟಾಗಿವೆ. ಪುತ್ತೂರು ವಲಯ ಅರಣ್ಯಾಧಿಕಾರಿ ಕಚೇರಿಯ 32 ವರ್ಷದ ಮಹಿಳಾ ಸಿಬಂದಿ, ಕಬಕ ಗ್ರಾ.ಪಂ. ವ್ಯಾಪ್ತಿಯ ಮುರ ನಿವಾಸಿ 63ರ ಮಹಿಳೆ, ಉಪ್ಪಿನಂಗಡಿ ಹಳೆ ಬಸ್‌ ನಿಲ್ದಾಣ ಬಳಿಯ ನಿವಾಸಿ 23ರ ಯುವಕ, ಪುತ್ತೂರು ಪುರಸಭಾ ವ್ಯಾಪ್ತಿಯ ಪಡೀಲು ನಿವಾಸಿ 29ರ ಮಹಿಳೆಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ.

ಕಡಬ ತಾಲೂಕಿನಲ್ಲಿ ಮಸ್ಕತ್‌ನಿಂದ ಆಗಮಿಸಿದ ಕೋಡಿಂಬಾಳ ನಿವಾಸಿ 59ರ ವ್ಯಕ್ತಿ ಮತ್ತು ಅವರ 6ರ ಪುತ್ರನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇವರು ಕ್ವಾರಂಟೈನ್‌ನಲ್ಲಿದ್ದಾರೆ.

ಜು. 14ರಂದು ಕಬಕ ಗ್ರಾ.ಪಂ. ವ್ಯಾಪ್ತಿಯ ಮುರ ನಿವಾಸಿ ಮಹಿಳೆ ಊರಿಗೆ ಆಗಮಿಸಿದ್ದು, ಈಗಾಗಲೇ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಡೀಲು ನಿವಾಸಿ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್‌ ಸಿಬಂದಿ ಸಹಿತ ಇನ್ನುಳಿದವರು ಸುಬ್ರಹ್ಮಣ್ಯದಲ್ಲಿ ಸಿದ್ಧವಾಗಿರುವ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದಾರೆ ಎಂದು ತಾಲೂಕು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಈ ತನಕ ಒಟ್ಟು 67 ಪಾಸಿಟಿವ್‌ ಪ್ರಕರಣ ದಾಖಲಾಗಿವೆ.

ಉಳ್ಳಾಲ: 22 ಪ್ರಕರಣ
ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ನಾಲ್ವರು ಸೇರಿದಂತೆ ಗುರುವಾರ ಒಟ್ಟು 22 ಜನರಿಗೆ ಸೋಂಕು ದೃಢವಾಗಿದೆ. ಬಾಧಿತರಲ್ಲಿ 70, 72, 73 ವರ್ಷದ ವೃದ್ಧರು, 23, 25ರ ಯುವಕರೂ ಸೇರಿದ್ದಾರೆ.

ಕೋವಿಡ್ 19 ಸೋಂಕಿಗೆ ಮರವಂತೆಯ ವ್ಯಕ್ತಿ ಸಾವು
ಕುಂದಾಪುರ:
ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಬೈಂದೂರು ತಾಲೂಕಿನ ಮರವಂತೆ ಗ್ರಾಮದ 58 ವರ್ಷದ ವ್ಯಕ್ತಿ ಗುರುವಾರ ಮೃತಪಟ್ಟಿದ್ದಾರೆ. ತೀವ್ರ ಅಸ್ತಮಾದಿಂದ ಬಳಲುತ್ತಿದ್ದು, ಬುಧವಾರ ಸಂಜೆ ಅವರನ್ನು ಮರವಂತೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಕುಂದಾಪುರ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಆರಂಭಿಸುವ ವೇಳೆ ಸಾವನ್ನಪ್ಪಿದ್ದರು. ಗಂಟಲ ದ್ರವ ಮಾದರಿ ಪರೀಕ್ಷೆಯಲ್ಲಿ ಕೋವಿಡ್ 19 ಸೋಂಕು ದೃಢವಾಗಿದೆ.

ಅಂತ್ಯಸಂಸ್ಕಾರಕ್ಕೆ ವಿರೋಧ
ಕೋವಿಡ್‌ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನಡೆಸಲು ಮೃತದೇಹವನ್ನು ಕುಂದಾಪುರ ಪುರಸಭೆ ವ್ಯಾಪ್ತಿಯ ರುದ್ರಭೂಮಿಗೆ ಒಯ್ದಾಗ ಅಲ್ಲಿ ವಿರೋಧ ವ್ಯಕ್ತವಾಗಿದ್ದು, ಬಳಿಕ ಬೇರೆ ಕಡೆಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಪಡುಬಿದ್ರಿ: ಹೊಟೇಲ್‌, ಮಳಿಗೆ ಸೀಲ್‌ಡೌನ್‌
ಹೊಟೇಲ್‌ ಕಾರ್ಮಿಕರಿಬ್ಬರಿಗೆ ಮತ್ತು ವ್ಯವಹಾರ ಮಳಿಗೆಯ ಸಿಬಂದಿಗೆ ಕೋವಿಡ್ 19 ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಪಡುಬಿದ್ರಿಯ ಒಂದು ಹೊಟೇಲು ಮತ್ತು ವ್ಯವಹಾರ ಮಳಿಗೆಯನ್ನು ಗುರುವಾರ ಸೀಲ್‌ಡೌನ್‌ ಮಾಡಲಾಗಿದೆ. ಆರೋಗ್ಯ ಇಲಾಖೆಯು ಸಾರ್ವಜನಿಕ ಸಂಸ್ಥೆಗಳಲ್ಲಿ ರ್‍ಯಾಂಡಮ್‌ ಪರೀಕ್ಷೆಗಳನ್ನು ನಡೆಸಿದ್ದು, ಬುಧವಾರ ಇವರಲ್ಲಿ ಕೊರೊನಾ ಪತ್ತೆಯಾಗಿತ್ತು.

ಕಾಪು: 9 ಪ್ರಕರಣ
ತಾಲೂಕಿನ ವಿವಿಧೆಡೆ ಗುರುವಾರ ಮತ್ತೆ 10 ಮಂದಿಗೆ ಸೋಂಕು ದೃಢವಾಗಿದೆ. ಮಲ್ಲಾರು, ಮೂಳೂರು, ಕುರ್ಕಾಲಿನ ಮೂವರು ಮಹಿಳೆಯರು, ಉಳಿಯಾರಗೋಳಿಯ ವೃದ್ಧ, ಕೈಪುಂಜಾಲಿನ ಇಬ್ಬರು ವ್ಯಕ್ತಿಗಳಲ್ಲಿ, ಕುರ್ಕಾಲಿನ 9 ವರ್ಷದ ಬಾಲಕ, ಗಿರಿನಗರದ ಯುವಕ ಮತ್ತು 5 ವರ್ಷದ ಬಾಲಕ, ಬೆಳಪುವಿನ ಪುರುಷನಿಗೆ ಪಾಸಿಟಿವ್‌ ಪತ್ತೆಯಾಗಿದೆ.

ಬೇಳೂರು: ಚಾಲಕನಿಗೆ ಸೋಂಕು
ತೆಕ್ಕಟ್ಟೆ: ಕುಂದಾಪುರ ತಾಲೂಕು ಬೇಳೂರು ಗ್ರಾ.ಪಂ. ವ್ಯಾಪ್ತಿಯ ಮುಳ್ಳುಗುಡ್ಡೆ ನಿವಾಸಿ ವಾಹನ ಚಾಲಕನಿಗೆ ಸೋಂಕು ಇರುವುದು ಗುರವಾರ ದೃಢಪಟ್ಟಿದೆ.

2ನೇ ಬಾರಿಗೆ ಬೈಂದೂರು ಠಾಣೆ ಸೀಲ್‌ಡೌನ್‌!
ಇಲ್ಲಿನ ಪೊಲೀಸ್‌ ಠಾಣೆಯ ಮೂವರು ಸಿಬಂದಿಗೆ ಕೋವಿಡ್ 19 ಸೋಂಕು ದೃಢವಾಗಿದ್ದು ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಕೋವಿಡ್ 19 ಸೋಂಕಿನಿಂದಾಗಿ ಈ ಠಾಣೆ ಸೀಲ್‌ ಡೌನ್‌ ಆಗುತ್ತಿರುವುದು ಇದು ಎರಡನೇ ಬಾರಿ.

ಪೊಲೀಸ್‌ ಎಎಸ್‌ಐ, ಮಹಿಳಾ ಸಿಬಂದಿ ಮತ್ತು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಓರ್ವ ಗೃಹರಕ್ಷಕರಿಗೆ ಪಾಸಿಟಿವ್‌ ಬಂದಿದ್ದು, ಕುಂದಾಪುರ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ಸಿಬಂದಿಯನ್ನು ಹೋಂ ಕ್ವಾರಂಟೈನ್‌ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next