ಚಿಕ್ಕಬಳ್ಳಾಪುರ: ಕೋವಿಡ್ 19 ಲಾಕ್‌ಡೌನ್ ಪರಿಣಾಮ ಅನೇಕ ಉದ್ಯಮಗಳಿಗೆ ಹೊಡೆತ ಬಿದ್ದಂತೆ ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯ ಸಭೆ, ಸಮಾರಂಭ ಅದರಲ್ಲೂ ಶುಭ ಸಮಾರಂಭಗಳಲ್ಲಿ ಅಡುಗೆ ತಯಾರಿಸಲು ತೆರಳುತ್ತಿದ್ದ ಬಾಣಸಿಗರ ಕೈಗಳಿಗೆ ಕೆಲಸ ಇಲ್ಲದೇ ಈಗ ಬೆಂದು ಬೆಂಡಾಗಿದ್ದಾರೆ.
ಕೋವಿಡ್ 19 ಸೋಂಕು ಹರಡುವುದನ್ನು ತಡೆ ಯುವ ಉದ್ದೇಶದಿಂದ ಲಾಕ್‌ಡೌನ್ ಘೋಷಿ ಸಿದ್ದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ದೃಷ್ಟಿಯಿಂದ ಸರ್ಕಾರಗಳು ಮದುವೆ, ನಾಮಕಾರಣ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರುವ ಜನರನ್ನು ನಿಯಂತ್ರಿಸಲು 50 ಮಂದಿಗಿಂತ ಹೆಚ್ಚು ಸೇರಬಾರದೆಂದು ಮಿತಿ ಹೇರಿರುವುದರಿಂದ ಅಡುಗೆ ತಯಾರಿಸುವ ಬಾಣಸಿಗರು ಕೆಲಸ ಇಲ್ಲದೇ ಪರದಾಡಬೇಕಿದೆ.
3000 ಕ್ಕೂ ಅಧಿಕ ಮಂದಿ: ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮದುವೆ, ನಾಮಕಾರಣ ಮತ್ತಿತರ ಶುಭ ಕಾರ್ಯಗಳಿಗೆ ಅಡುಗೆ ತಯಾರಿಸುವ ತಂಡಗಳು ಇದ್ದು ಅಡುಗೆ ಮೇಸಿOಉಗಳ ಜೊತೆಗೆ ಅಡುಗೆ ಬಡಿಸುವ ಮಂದಿಗೂ ಲೆಕ್ಕವಿಲ್ಲ. ಪ್ರತಿ ತಾಲೂಕಿನಲ್ಲಿ ಇಂತಹ ಗುಂಪುಗಳು ಹತ್ತಾರು ಇದ್ದು ಜಿಲ್ಲೆಯಲ್ಲಿ ಅಂದಾಜಿನ ಪ್ರಕಾರ 2,500, 3000 ಕ್ಕೂ ಅಧಿಕ ಮಂದಿ ಅಡುಗೆ ತಯಾರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಆದರೆ ಸತತ ಎರಡು ತಿಂಗಳಿಂದ ಕೋವಿಡ್ 19 ಲಾಕ್‌ಡೌನ್‌ನಿಂದ ಯಾವುದೇ ಅಡುಗೆ ತಯಾರಿಸುವ ಕಾರ್ಯ ಇಲ್ಲದೇ ಮನೆಗಳಲ್ಲಿ ಇದ್ದು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ನಿತ್ಯ ಶುಭ ಸಮಾರಂಭಗಳಲ್ಲಿ ತರಹೇವಾರಿ ಊಟ ಸಿದಪಡಿಸಿ ಬಡಿಸುವುದರ ಜೊತೆಗೆ ತಾನು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬಾಣಸಿಗರು ಹಾಗೂ ಅವರ ಸಹಾಯಕರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.
ನಮಗೂ ಕೊಡಿ ಪರಿಹಾರ: ಸರ್ಕಾರ ಇತ್ತೀಚೆಗೆ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರಿಗೆ ಸೇರಿದಂತೆ ವಿವಿಧ ವಲಯಗಳಿಗೆ ಪರಿಹಾರ ಘೋಷಿಸಿದ್ದು, ಅದರಂತೆ ಕಾರ್ಮಿಕರಾಗಿರುವ ಅಡುಗೆ ತಯಾರಿಸುವ ಬಾಣಸಿಗರನ್ನು ಹಾಗೂ ಅವರ ಸಹಾಯಕರಿಗೂ ಸರ್ಕಾರ ಪರಿಹಾರ ನೀಡಬೇಕೆಂಬ ಆಗ್ರಹವನ್ನು ಜಿಲ್ಲೆಯ ಬಾಣಸಿಗರು ಮಾಡುತ್ತಿದ್ದಾರೆ.
ಇನ್ನೂ ಶುಭ ಕಾರ್ಯಗಳಿಗೆ ಕ್ಯಾಟರಿಂಗ್ ಪೂರೈಕೆ ಮಾಡುತ್ತಿದ್ದವರಿಗೂ ಲಾಕ್‌ಡೌನ್ ಸಂಕಷ್ಟ ತಂದೊಡ್ಡಿದೆ. ಕೆಲ ಕ್ಯಾಟರಿಂಗ್ ಮಾಲೀಕರು, ಹತ್ತಾರು ಕೂಲಿ ಕಾರ್ಮಿಕರನ್ನು ಹೊಂದಿದ್ದು ಅವರು ಆಂಧ್ರ, ತಮಿಳುನಾಡು ಹೀಗೆ ಉತ್ತರ ಭಾರತದಿಂದ ಬಂದಿದ್ದಾರೆ. ಆದರೆ ಅವರನ್ನು ಲಾಕ್‌ಡೌನ್ ಹಿನ್ನೆಲೆಯಲ್ಲಿ ಊರುಗಳಿಗೆ ಕಳುಹಿಸಲಾಗದೇ ಇಲ್ಲಿಯೂ ಇಟ್ಟುಕೊಳ್ಳಲಾಗದೇ ಸಂಕಷ್ಟದಲ್ಲಿದ್ದಾರೆ.
ಸರ್ಕಾರ ಈಗಾಗಲೇ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಅದೇ ರೀತಿ ಸಭೆ, ಸಮಾರಂಭ, ಶುಭ ಕಾರ್ಯಗಳು ಇಲ್ಲದೇ ಸಂಕಷ್ಟದಲ್ಲಿರುವ ಅಡುಗೆ ತಯಾರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನೂರಾರು ಬಾಣಸಿಗರಿಗೂ ಸರ್ಕಾರ 5000 ಸಾವಿರ ರೂ. ನೆರವು ಕೊಡಲಿ.
-ಬಾಬು, ಗಂಜಿಗುಂಟೆ, ಅಡುಗೆ ತಯಾರಿಸುವ ಮೇಸ್ತ್ರಿ
* ಕಾಗತಿ ನಾಗರಾಜಪ್ಪ