Advertisement

ಕೋವಿಡ್ 19; ಅಮೆರಿಕ ಕಂಗಾಲು, ದಕ್ಷಿಣ ಕೊರಿಯಾದ ಯಶಸ್ಸಿನ ಹಿಂದಿನ ಗುಟ್ಟೇನು ಗೊತ್ತಾ?

10:56 AM Mar 22, 2020 | Nagendra Trasi |

ವಾಷಿಂಗ್ಟನ್/ಸಿಯೋಲ್: ಜಗತ್ತಿನಾದ್ಯಂತ ಕೋವಿಡ್ -19 ಮಹಾಮಾರಿ ಸೋಂಕಿನ ಅಟ್ಟಹಾಸ ಮುಂದುವರಿದಿದ್ದು, ಜಗತ್ತಿನ ದೊಡ್ಡಣ್ಣ ಅಮೆರಿಕದಲ್ಲಿ 18,090 ಪ್ರಕರಣಗಳು ಪತ್ತೆಯಾಗಿವೆ. 230 ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಕೋವಿಡ್-19ಗೆ ಜಗತ್ತಿನ ಬಹುತೇಕ ದೇಶಗಳು ತತ್ತರಿಸಿ ಹೋಗಿದ್ದರೆ ದಕ್ಷಿಣ ಕೊರಿಯಾ ಶೀಘ್ರವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ತಿಳಿಸಿದೆ.

Advertisement

ಕೋವಿಡ್ 19 ಸೋಂಕಿಗೆ ಯುರೋಪ್ ಇದೀಗ ಮೂಲ ಕೇಂದ್ರ ಸ್ಥಾನವಾಗಿದೆ. ಇಟಲಿ, ಸ್ಪೇನ್, ಫ್ರಾನ್ಸ್, ಇರಾನ್ ಹಾಗೂ ಜರ್ಮನಿಯಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ದೇಶಾದ್ಯಂತ ಲಾಕ್ ಡೌನ್ ಘೋಷಿಸಿ, ಗಡಿಭಾಗವನ್ನು ಬಂದ್ ಮಾಡಿರುವುದಾಗಿ ವರದಿ ವಿವರಿಸಿದೆ.

ದೋಷಪೂರಿತ ಪರೀಕ್ಷಾ ಕಿಟ್ ನಿಂದಾಗಿ ಅಮೆರಿಕ ಕೋವಿಡ್ 19 ವೈರಸ್ ಗೆ ತುಂಬಾ ಬೆಲೆ ತೆರುವಂತಾಗಿದೆ. ಇದೀಗ ಯುರೋಪ್ ಕೂಡಾ ಅಮೆರಿಕದ ಹಾದಿಯಲ್ಲಿದೆ ಎಂದು ವರದಿ ದೂರಿದೆ.

ಅಮೆರಿಕ ಕಂಗಾಲು, ದಕ್ಷಿಣ ಕೊರಿಯಾ ನಡೆ ಮಾದರಿ ಅನುಕರಣೀಯ:

ಕೋವಿಡ್-19ರ ಅಟ್ಟಹಾಸದಿಂದ ಅಮೆರಿಕ, ಇಟಲಿ, ಸ್ಪೈನ್ ನಲುಗಿ ಹೋಗಿವೆ. ಏತನ್ಮಧ್ಯೆ ದಕ್ಷಿಣ ಕೊರಿಯಾ ಭರವಸೆಯ ಸಂದೇಶ ನೀಡುವ ಮೂಲಕ ಮಾದರಿಯ ನಡೆಯನ್ನು ಅನುಸರಿಸಿದೆ. ದೇಶದಲ್ಲಿರುವ 5 ಕೋಟಿ ಜನಸಂಖ್ಯೆ (ಕರ್ನಾಟಕ ರಾಜ್ಯದ ಜನಸಂಖ್ಯೆಕ್ಕಿಂತ ಕಡಿಮೆ) ಹೊಂದಿದ್ದರು ಕೂಡಾ ಸೋಂಕು ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಪಣತೊಟ್ಟ ಪರಿಣಾಮ ಫೆ.29ರಂದು ದೇಶದಲ್ಲಿ 909 ಪ್ರಕರಣಗಳು ಪತ್ತೆಯಾಗಿದ್ದವು, ಇದೀಗ ಇಳಿಕೆಯಾಗಿ 74 ಹೊಸ ಪ್ರಕರಣಗಳು ಮಾತ್ರ ದಾಖಲಾಗಿರುವುದಾಗಿ ವರದಿ ತಿಳಿಸಿದೆ.

Advertisement

ದೇಶದ ಯಾವುದೇ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡದೆ ಚೀನಾ ಮಾದರಿಯಲ್ಲಿ ಕೆಲವೊಂದು ಆಡಳಿತಾತ್ಮಕ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಕೋವಿಡ್ 19 ಹರಡುವುದನ್ನು ತಡೆಗಟ್ಟಿರುವುದಾಗಿ ಹೇಳಿದೆ.

ದೇಶವನ್ನು ಲಾಕ್ ಡೌನ್ ಮಾಡುವುದು ಉತ್ತಮವಾದ ಆಯ್ಕೆಯಲ್ಲ ಎಂದು ಕೊರಿಯಾ ವಿವಿಯ ಸೋಂಕು ರೋಗಗಳ ತಜ್ಞ ಕಿಮ್ ವೂ ಜೋ ತಿಳಿಸಿದ್ದಾರೆ. ದಕ್ಷಿಣ ಕೊರಿಯಾದ ಯಶಸ್ವಿ ಮಾದರಿ ಇತರ ದೇಶಗಳಿಗೂ ಪಾಠವಾಗಬೇಕು. ಆದರೆ ಸೋಂಕಿನ ಪ್ರಮಾಣ ಕಡಿಮೆಯಾದ ನಂತರವೂ ಅದು ಮತ್ತೆ ತಲೆಎತ್ತದಂತೆ ತಡೆಗಟ್ಟಬೇಕಾದ ಎಚ್ಚರಿಕೆ ಇರಲಿ ಎಂಬ ಸಂದೇಶ ನೀಡಿದ್ದಾರೆ.

ದ.ಕೊರಿಯಾದ ಯಶಸ್ಸಿನ ಹಿಂದಿದೆ ದುಬಾರಿ ಬೆಲೆ:

ಕೋವಿಡ್ 19 ಮಹಾಮಾರಿಯ ಹರಡುವಿಕೆಯನ್ನು ತಡೆಯುವಲ್ಲಿ ದಕ್ಷಿಣ ಕೊರಿಯಾದ ಯಶಸ್ಸು ದುಬಾರಿ ಬೆಲೆ ತೆತ್ತಿದೆ. ಇಡೀ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಪರೀಕ್ಷಾ ಕಾರ್ಯವನ್ನು ನಡೆಸಿತ್ತು. ತ್ವರಿತವಾಗಿ ಸೋಂಕು ಪೀಡಿತರನ್ನು ಐಸೋಲೇಶನ್ ನಲ್ಲಿ ಇಟ್ಟಿತ್ತು. ಅವರ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಹಚ್ಚಿ ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಿರುವುದಾಗಿ ವರದಿ ತಿಳಿಸಿದೆ.

ದಕ್ಷಿಣ ಕೊರಿಯಾ ಈವರೆಗೆ 2,70,000ಕ್ಕೂ ಅಧಿಕ ಜನರನ್ನು ಪರೀಕ್ಷೆಗೊಳಪಡಿಸಿದೆ.  ಅಂದರೆ ಪ್ರತಿ ಲಕ್ಷ ಜನಸಂಖ್ಯೆಯಲ್ಲಿ 5,200 ಮಂದಿ ಪರೀಕ್ಷೆ ನಡೆಸಿದಂತಾಗಿದೆ. ವರ್ಲ್ಡೊಮೀಟರ್ ವೆಬ್ ಸೈಟ್ ಅಂಕಿಅಂಶದ ಪ್ರಕಾರ ಜಗತ್ತಿನಲ್ಲಿ ಬಹರೈನ್ ಹೊರತುಪಡಿಸಿ ಬೇರೆ ಯಾವುದೇ ದೇಶ ಈ ರೀತಿಯಾಗಿ ಅಧಿಕೃತ ಕಿಟ್ ಬಳಸಿ ಪರೀಕ್ಷೆ ನಡೆಸಿಲ್ಲ. ಮುಂದುವರಿದ ಶ್ರೀಮಂತ ದೇಶ ಎನಿಸಿಕೊಂಡ ಅಮೆರಿಕ ಪ್ರತಿ ಲಕ್ಷ ಜನಸಂಖ್ಯೆಯಲ್ಲಿ ಕೇವಲ 74 ಮಂದಿಯನ್ನಷ್ಟೇ ಪರೀಕ್ಷೆಗೊಳಪಡಿಸಿದೆ ಎಂದು ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next