Advertisement

ಗ್ರಾಮೀಣ ಪ್ರದೇಶಗಳತ್ತ ಚಿತ್ತ ಕೋವಿಡ್ 19‌ ಪ್ರಸರಣ

01:48 AM Jul 22, 2020 | Hari Prasad |

ದೇಶದಲ್ಲಿ ಕೋವಿಡ್ 19 ಸಾಂಕ್ರಾಮಿಕವು ಸಮುದಾಯ ಪ್ರಸರಣ ಚರಣವನ್ನು ತಲುಪಿಬಿಟ್ಟಿದೆಯೇ ಎನ್ನುವ ಬಗ್ಗೆ ಕೆಲವು ದಿನಗಳಿಂದ ಜೋರಾಗಿ ಚರ್ಚೆ ನಡೆಯುತ್ತಿದೆ.

Advertisement

ಈ ಪ್ರಶ್ನೆಗೆ ಸಾಂಕ್ರಾಮಿಕ ರೋಗ ತಡೆ ವಿಶೇಷಜ್ಞರು ಮತ್ತು ಸರಕಾರಗಳ ನಡುವೆ ಸಹಮತವಂತೂ ಇಲ್ಲ.

ಆದರೆ ದೇಶದಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯನ್ನು ಪರಿಗಣಿಸಿದಾಗ ನಿಜಕ್ಕೂ ರೋಗ ಸಮುದಾಯ ಪ್ರಸರಣ ಹಂತವನ್ನು ತಲುಪಿಬಿಟ್ಟಿತೇ ಎನ್ನುವ ಅನುಮಾನ ಕಾಡದಿರದು.

ಒಟ್ಟು ಪ್ರಕರಣಗಳ ಸಂಖ್ಯೆ ಈಗಾಗಲೇ 11.71 ಲಕ್ಷ ದಾಟಿದ್ದರೆ, ಇದರಲ್ಲಿ 4 ಲಕ್ಷ ಸಕ್ರಿಯ ಪ್ರಕರಣಗಳು ಇವೆ. ಕಳವಳದ ಅಂಶವೆಂದರೆ, ಈಗ ನಿತ್ಯ ಸೋಂಕಿತರ ಸಂಖ್ಯೆ 40 ಸಾವಿರ ದಾಟಿರುವುದು!

ಇಂದು ದೇಶದಲ್ಲಿ ಟೆಸ್ಟ್‌ಗಳ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಕಾರಣದಿಂದಾಗಿಯೇ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣಿಸಿದೆ ಎನ್ನಲಾಗುತ್ತದೆ. ಆದರೆ ಮತ್ತಷ್ಟು ಪರೀಕ್ಷೆಗಳನ್ನು ನಡೆಸಿದರೆ, ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಮಗದಷ್ಟು ಏರಿಕೆ ಕಾಣುತ್ತದೆ ಎಂದರ್ಥ ಅಲ್ಲವೇ? ಈ ಕಾರಣಕ್ಕಾಗಿಯೇ ನಿತ್ಯ ಟೆಸ್ಟ್‌ಗಳ ಸಂಖ್ಯೆ ಈ ತಿಂಗಳಾಂತ್ಯಕ್ಕೆ ಕನಿಷ್ಠ ನಾಲ್ಕು ಲಕ್ಷದಷ್ಟಾದರೂ ನಡೆಯಬೇಕು ಎನ್ನುತ್ತಾರೆ ತಜ್ಞರು.

Advertisement

ದೇಶದಲ್ಲಿ ಜುಲೈ 15ರಿಂದ ಪ್ರತಿ ನಿತ್ಯ 3 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳು ನಡೆಯಲಾರಂಭಿಸಿವೆ. ಗಮನಾರ್ಹ ಸಂಗತಿಯೆಂದರೆ ಇತ್ತ ರಾಜ್ಯದಲ್ಲೂ ಸಹ ಟೆಸ್ಟಿಂಗ್‌ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿರುವುದು.

ಜೂನ್‌ ತಿಂಗಳ ವೇಳೆ 15-18 ಸಾವಿರದ ಆಸುಪಾಸು ನಡೆಯುತ್ತಿದ್ದ ನಿತ್ಯ ಟೆಸ್ಟಿಂಗ್‌ಗಳ ಸಂಖ್ಯೆ ಈಗ ಕೆಲವು ದಿನಗಳಿಂದ 35 ಸಾವಿರದ ಗಟಿ ದಾಟಿದೆ. ಈಗ ಕರ್ನಾಟಕವು ಸಕ್ರಿಯ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿದ್ದು, ಮೊದಲೆರಡು ಹಾಟ್‌ಸ್ಪಾಟ್‌ಗಳಲ್ಲಿ ಮಹಾರಾಷ್ಟ್ರ ಹಾಗೂ ತಮಿಳುನಾಡು ಇವೆ.

ರಾಜ್ಯದಲ್ಲಷ್ಟೇ ಅಲ್ಲದೇ ಅನ್ಯ ರಾಜ್ಯಗಳಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಅನೇಕ ರಾಜ್ಯಗಳು ತಮ್ಮಲ್ಲಿ ಹಲವು ಭಾಗಗಳಲ್ಲಿ ಅರೆ ಅಥವಾ ಪೂರ್ಣ ಲಾಕ್‌ ಡೌನ್‌ ಜಾರಿಮಾಡಿವೆ.

ಇವನ್ನೆಲ್ಲ ಗಮನಿಸಿದಾಗ ಕೋವಿಡ್‌-19 ಪ್ರಕರಣಗಳ ಸಂಖ್ಯೆ ಎಲ್ಲಿಗೆ ಹೋಗಿ ತಲುಪಲಿದೆ, ಎಷ್ಟು ಪಸರಿಸಲಿದೆ, ಯಾವಾಗ ನಿಲ್ಲಲಿದೆ ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಇದೇ ವೇಳೆಯಲ್ಲೇ ಈ ರೋಗ ಮಾರಣಾಂತಿಕವಲ್ಲ ಎನ್ನುವುದು ನಿಜವಾದರೂ ಪ್ರತಿಯೊಂದು ಜೀವವೂ ಅಮೂಲ್ಯವಾದ್ದರಿಂದ ಸಾವನ್ನು ಅಂಕಿಯಲ್ಲಿ ಅಳೆಯುವುದು ತರವಾಗದು. ಈಗಾಗಲೇ ದೇಶದಲ್ಲಿ 7 ಲಕ್ಷಕ್ಕೂ ಅಧಿಕ ಜನರು ಗುಣಮುಖರಾಗಿದ್ದಾರೆ ಎನ್ನುವುದು ನೆಮ್ಮದಿಯ ವಿಷಯವೇ ಆದರೂ ನಿತ್ಯ ಸೋಂಕಿತರ ಸಂಖ್ಯೆ 40 ಸಾವಿರ ದಾಟುತ್ತಿರುವುದು ಖಂಡಿತ ಚಿಂತೆಯ ವಿಷಯವೇ ಸರಿ.

ಈಗ ಗ್ರಾಮೀಣ ಭಾಗಗಳಲ್ಲೂ ಸೋಂಕಿತರ ಸಂಖ್ಯೆ ಏರುತ್ತಿದೆ. ಈ ಕಾರಣಕ್ಕಾಗಿಯೇ, ಎಲ್ಲ ರಾಜ್ಯ ಸರಕಾರಗಳೀಗ ತಮ್ಮ ಗಮನವನ್ನು ಗ್ರಾಮೀಣ ಭಾಗಗಳತ್ತ ಹೆಚ್ಚು ಹರಿಸಬೇಕಾದ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next