Advertisement

ಪಾಕ್‌: ಒಂದೇ ದಿನ 5,387 ಪ್ರಕರಣಗಳು

02:12 PM Jun 11, 2020 | Team Udayavani |

ಇಸ್ಲಾಮಾಬಾದ್‌: ಭಾರತದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಏರುತ್ತಿದ್ದಂತೆ ನೆರೆಯ ಪಾಕಿಸ್ಥಾನದಲ್ಲೂ ಕೋವಿಡ್‌ ಕಾಟ ಜೋರಾಗಿದ್ದು, ಒಂದೇ ದಿನದಲ್ಲಿ ಸರ್ವಾಧಿಕ 5,387 ಪ್ರಕರಣಗಳು ವರದಿಯಾಗಿವೆ.

Advertisement

ಲಾಕ್‌ಡೌನ್‌ ಹೇರಿಕೆಯಲ್ಲಿ ಆಗಾಗ್ಗೆ ಮಧ್ಯಪ್ರವೇಶ, ಸಂಪೂರ್ಣ ಲಾಕ್‌ಡೌನ್‌ ಮಾಡದೇ ಇರುವುದರಿಂದಾಗಿ ಕೇಸುಗಳ ಪ್ರಮಾಣ ಇಷ್ಟೊಂದು ಏರಿಕೆಯಾಗಲು ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕಳೆದ 24 ತಾಸುಗಳಲ್ಲಿ ಕೇಸುಗಳ ಪ್ರಮಾಣ 5 ಸಾವಿರ ದಾಟಿದ್ದು ಇದೇ ಮೊದಲಾಗಿದ್ದು 83ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಮೃತರ ಪ್ರಮಾಣ 2255 ಆಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳಿವೆ.

ದೇಶದಲ್ಲಿ ಈವರೆಗೆ 36308 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 1,13,702ಕ್ಕೆ ತಲುಪಿದ್ದು, ಪಂಜಾಬ್‌ನಲ್ಲಿ 43460 ಪ್ರಕರಣಗಳು, ಸಿಂಧ್‌ ಪ್ರಾಂತ್ಯದಲ್ಲಿ 41303 ಪ್ರಕರಣಗಳು, ಖೈಬರ್‌ ಪಕು¤ಂಖ್ವಾದಲ್ಲಿ 14527 ಪ್ರಕರಣಗಳು, ಬಲೂಚಿಸ್ಥಾನದಲ್ಲಿ 7031, ಇಸ್ಲಾಮಾಬಾದ್‌ನಲ್ಲಿ 5963, ಗಿಲ್ಗಿಟ್‌ ಬಾಲ್ಟಿಸ್ಥಾನ್‌ನಲ್ಲಿ 974, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ 444 ಪ್ರಕರಣಗಳು ವರದಿಯಾಗಿವೆ.

ಕಳೆದ 24 ತಾಸುಗಳಲ್ಲಿ ಒಟ್ಟು 23799 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ ದೇಶದಲ್ಲಿ 7.54 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿದೆ.

ನಿರಂತರ ಲಾಕ್‌ಡೌನ್‌ಗೆ ನಕಾರ
ಕೋವಿಡ್‌ ನಿಯಂತ್ರಣದ ಒಂದು ಕ್ರಮವಾಗಿ ನಿರಂತರ ನಾಲ್ಕುವಾರ ಲಾಕ್‌ಡೌನ್‌ ನಡೆಸಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದರೂ ಅದನ್ನು ಪಾಕಿಸ್ಥಾನ ಒಪ್ಪಿಲ್ಲ. ಅದು ಎರಡು ವಾರ ಲಾಕ್‌ಡೌನ್‌, ಮತ್ತೆರಡು ವಾರ ಲಾಕ್‌ಡೌನ್‌ ತೆರವು ನಡೆಸಿದೆ. ಇದರಿಂದ ಕೋವಿಡ್‌ ಸಂಖ್ಯೆ ನಿಯಂತ್ರಣಕ್ಕೆ ಬಾರದೆ ಹೆಚ್ಚಲು ಕಾರಣವಾಗಿದೆ. ನಿರಂತರ ಲಾಕ್‌ಡೌನ್‌ ನಡೆಸುವ ಯಾವುದೇ ಇರಾದೆ ನಮ್ಮಲ್ಲಿಲ್ಲ ಎಂದು ಆರೋಗ್ಯ ಸಚಿವಾಲಯದ ಸಲಹೆಗಾರ ಝಾಫ‌ರ್‌ ಮಿರ್ಜಾ ಅವರು ಹೇಳಿದ್ದರು. ಸದ್ಯ ಪಾಕಿಸ್ಥಾನದಲ್ಲಿ ಯಾವುದೇ ರೀತಿಯ ನಿರ್ಬಂಧಗಳು ಇಲ್ಲ. ಕೇಸುಗಳು ಕಂಡುಬಂದರೆ, ನಿರ್ದಿಷ್ಟ ಮನೆಯ ಮಂದಿಯನ್ನು ಪ್ರತ್ಯೇಕವಾಗಿರಿಸಿ, ಅವರ ಸಂಪರ್ಕಿತರನ್ನೂ ಗುರುತಿಸಿ ಚಿಕಿತ್ಸೆ, ಪರೀಕ್ಷೆ ನಡೆಸಲಾಗುತ್ತಿದೆ.

Advertisement

ಕೋವಿಡ್‌: ಹೊಸ ಕಾನೂನು ಮಾಡಿ
ಇಡೀ ದೇಶಕ್ಕೆ ಅನ್ವಯವಾಗುವಂತೆ ಕೋವಿಡ್‌ ವಿಚಾರದಲ್ಲಿ ಏಕರೂಪದ ಒಂದು ಹೊಸ ಕಾನೂನು ಜಾರಿಗೊಳಿಸಬೇಕು ಎಂದು ಪಾಕಿಸ್ಥಾನದ ಸುಪ್ರೀಂ ಕೋರ್ಟ್‌ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಸರಕಾರಕ್ಕೆ ಸೂಚನೆ ನೀಡಿದೆ. ಕೋವಿಡ್‌ ಸೋಂಕು ಹೆಚ್ಚುತ್ತಿರುವುದರಿಂದ ಏಕರೂಪದ ಕಾಯಿದೆಯೊಂದನ್ನು ಜಾರಿಗೆ ತರಬೇಕು, ಇದರ ಮೂಲಕ ಸೋಂಕು ನಿಯಂತ್ರಣಕ್ಕೆ ಯತ್ನಿಸಬೇಕು ಎಂದು ಹೇಳಿದೆ.

ಮುಖ್ಯ ನ್ಯಾ| ಗುಲ್ಜಾರ್‌ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಈ ಬಗ್ಗೆ ಸ್ವಯಂಪ್ರೇರಿತವಾಗಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಪೀಠ, ಕೋವಿಡ್‌ ನಿಯಂತ್ರಣಕ್ಕೆ ಪ್ರಾಂತ್ಯಗಳು ಆದೇಶಿಸುವ ನಿಯಮಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಪತ್ರಿಕಾಗೋಷ್ಠಿ ಮೂಲಕ ಇವುಗಳನ್ನೆಲ್ಲ ಮಾಡಲಾಗದು. ನಿರ್ದಿಷ್ಟ ಕಾನೂನು ಮೂಲಕ, ಎಲ್ಲರಿಗೂ ಅನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next