ಹಾಂಗ್‌ಕಾಂಗ್: ಹೊಸ ವರ್ಷದ ನಿಮಿತ್ತ ಒಂದು ಕುಟುಂಬ ತಮ್ಮ ಮನೆಯವರಿಗಾಗಿ ಏರ್ಪಡಿಸಿದ್ದ ಒಂದು ಔತಣಕೂಟದಿಂದ ಇಡೀ ಒಂದು ನಗರವೇ ಆಪತ್ತಿಗೆ ಸಿಲುಕಿದೆ.
ಚೀನಿ ಹೊಸ ವರ್ಷದಂದು ಹಾಂಗ್‌ಕಾಂಗ್‌ನ ಈ ಕುಟುಂಬ ಕೆಲವು ಹತ್ತಿರದ ಬಂಧುಗಳ ಜತೆಗೆ ಔತಣಕ್ಕಾಗಿ ನಗರದ ಜನಪ್ರಿಯ ಹೊಟೇಲಿಗೆ ಬಂದಿತ್ತು. ಈ ಔತಣದಲ್ಲಿ ಭಾಗವಹಿಸಿದ ಒಂದೇ ಕುಟುಂಬದ 11 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಹೊಸವರ್ಷದಂದು ಸವಿಯುವ ಹಾಟ್‌ಪಾಟ್ ಎಂಬ ಔತಣಕೂಟಕ್ಕೆ ಕುಟುಂಬದ ಒಟ್ಟು 19 ಮಂದಿ ಸೇರಿದ್ದರು. ಇದರೊಂದಿಗೆ 70 ಲಕ್ಷ ಜನಸಂಖ್ಯೆಯಿರುವ ಹಾಂಗ್‌ಕಾಂಗ್ ನಗರವೂ ಆಪತ್ತಿಗೆ ಸಿಲುಕಿದೆ.
ಹಾಂಗ್‌ಕಾಂಗ್‌ನಲ್ಲಿ ಇದು ಒಂದೇ ಘಟನೆಯಲ್ಲಿ ಅತ್ಯಧಿಕ ಮಂದಿಗೆ ಸೋಂಕು ತಗಲಿದ ಪ್ರಕರಣ. ಈ ಕುಟುಂಬವನ್ನು ಈಗ ಹಾಟ್‌ಪಾಟ್ ಕುಟುಂಬ ಎಂದು ಗುರುತಿಸಲಾಗುತ್ತಿದೆ.
ಈ ಕುಟುಂಬದ ಸದಸ್ಯರು ಔತಣದ ಬಳಿಕ ಎಲ್ಲೆಲ್ಲಿ ಹೋಗಿದ್ದಾರೆ, ಯಾರನ್ನೆಲ್ಲ ಭೇಟಿಯಾಗಿದ್ದಾರೆ ಎಂಬ ಮಾಹಿತಿಗಳನ್ನು ಕಲೆ ಹಾಕುವುದೇ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಘಟನೆಯ ಬಳಿಕ ಹಾಂಗ್‌ಕಾಂಗ್‌ನ ಹೊಟೇಲುಗಳಲ್ಲಿ ಕಟ್ಟುನಿಟ್ಟಿನ ಪರೀಕ್ಷಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಹೊಟೇಲುಗಳ ವ್ಯಾಪಾರ ಶೇ.90 ರಷ್ಟು ಕುಸಿದಿದೆ. ಈಗ ಜನರು ಹೊಟೇಲುಗಳಿಗೆ ಹೋಗಲೇ ಹೆದರುತ್ತಿದ್ದಾರೆ.