ರಿಯೊ ಡಿ ಜನೈರೋ: ವಿಚಿತ್ರ ಕ್ರಮವೊಂದರಲ್ಲಿ ಬ್ರೆಜಿಲ್ ಕೋವಿಡ್ ಪೀಡಿತರ ಸಂಖ್ಯೆ, ಮೃತರ ಸಂಖ್ಯೆಯನ್ನು ಪ್ರಕಟಿಸುವುದನ್ನೇ ಸ್ಥಗಿತಗೊಳಿಸಿದೆ. ಈ ಮೂಲಕ ಪರೋಕ್ಷವಾಗಿ ಕೋವಿಡ್ ಪ್ರಕರಣ-ಸಾವು “ಲೆಕ್ಕಕ್ಕಿಲ್ಲ’ದಷ್ಟು ಉಲ್ಬಣಗೊಂಡಿದೆ ಎಂಬುದನ್ನು ಸಾಬೀತು ಪಡಿಸಿದೆ. ಬ್ರೆಜಿಲ್ ಸರಕಾರದ ಈ ಕ್ರಮ ತಜ್ಞರ ಖಂಡನೆಗೂ ಒಳಗಾಗಿದೆ.
ಈ ಮೊದಲೇ ತಜ್ಞರು ಬ್ರೆಜಿಲ್‌ನ ಅಂಕಿ ಅಂಶಗಳು ಸರಿಯಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ನೈಜ ದತ್ತಾಂಶ ಗಳನ್ನು ತಿರುಚಲಾಗಿದ್ದು, ಅವುಗಳನ್ನು ಮರೆಮಾಚಲಾಗುತ್ತಿದೆ ಎಂದು ಹೇಳಿದ್ದಾರೆ.
ಬ್ರೆಜಿಲ್‌ನಲ್ಲಿ ಕೋವಿಡ್ ಸಾವಿನ ಸಂಖ್ಯೆಗಳು 34 ಸಾವಿರಕ್ಕೇರಿದಾಗ ಪ್ರಕಟಿಸಿದ ಸಂಖ್ಯೆಗಳೇ ಕೊನೆಯ ಅಧಿಕೃತ ಸಂಖ್ಯೆಗಳಾಗಿವೆ. ಆ ಬಳಿಕ ಸರಿಯಾದ ಅಂಕಿ ಅಂಶಗಳನ್ನು ಪ್ರಕಟಿಸಲಾಗಿಲ್ಲ ಎಂದು ಹೇಳಲಾಗಿದೆ. ಆ ಹೊತ್ತಿಗೆ ಬ್ರೆಜಿಲ್ ಜಗತ್ತಿನಲ್ಲೇ ಮೂರನೇ ಅತಿ ಹೆಚ್ಚು ಕೋವಿಡ್ ಸಾವು ಕಂಡ ದೇಶ ಎಂದು ಹೇಳಲಾಗಿತ್ತು. ಇದೇ ಸಂದರ್ಭ ಒಟ್ಟು ಪ್ರಕರಣಗಳ ಸಂಖ್ಯೆ 6.15 ಲಕ್ಷಕ್ಕೂ ಹೆಚ್ಚಾಗಿತ್ತು. ಬ್ರೆಜಿಲ್‌ನ ಜನಸಂಖ್ಯೆ ಸುಮಾರು 21 ಕೋಟಿಯಾಗಿದ್ದು, ಜಗತ್ತಿನ 7ನೇ ಅತಿ ದೊಡ್ಡ ಜನಸಂಖ್ಯೆ ಹೊಂದಿದ ದೇಶವಾಗಿದೆ.
ಶುಕ್ರವಾರದ ಬಳಿಕ ಅಲ್ಲಿನ ಆರೋಗ್ಯ ಸಚಿವಾಲಯ ಕೋವಿಡ್ ಅಂಕಿ ಅಂಶಗಳನ್ನು ಕೊಡುವುದನ್ನು ನಿಲ್ಲಿಸಿದೆ. ಆದ್ದರಿಂದ ವೆಬ್‌ಸೈಟ್ ಅನ್ನು ನಿಲ್ಲಿಸಲಾಗಿದೆ. ಟೀಕೆಗಳ ಬಳಿಕ ಶನಿವಾರ ಮತ್ತೆ ವೆಬ್‌ಸೈಟ್ ಪುನರಾರಂಭಗೊಂಡಿದ್ದರೂ, ಅದರಲ್ಲಿ ವಾರದ ಮತ್ತು ತಿಂಗಳಿನ ಅಂಕಿ ಅಂಶಗಳು ಮಾತ್ರ ಇದ್ದವು. ಆದರೆ ದೈನಂದಿನ ಮಾಹಿತಿಗಳು ಇರಲಿಲ್ಲ. ಸದ್ಯ ಹಿಂದಿನ 24 ತಾಸುಗಳ ಅಂಕಿ ಅಂಶಗಳು ಮಾತ್ರ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಇನ್ನು ಬ್ರೆಜಿಲ್‌ನ ಅಧ್ಯಕ್ಷ ಜೈಲ್ ಬೊಲ್ಸೊನಾರೋ ಅವರು ಟ್ವೀಟ್ ಮಾಡಿ ಶನಿವಾರ ಮೃತಪಟ್ಟವರ ಅಂಕಿ ಅಂಶಗಳು ಬ್ರೆಜಿಲ್‌ನ ಈಗಿನ ಕೋವಿಡ್ ಪರಿಸ್ಥಿತಿ ಬಗ್ಗೆ ಹೇಳುವುದಿಲ್ಲ ಎಂಬರ್ಥದ ಟ್ವೀಟ್ ಮಾಡಿದ್ದರು.
ಬ್ರೆಜಿಲ್‌ನ ಖಾಸಗಿ ತನಿಖಾ ವ್ಯಕ್ತಿಗಳು ಹೇಳುವ ಪ್ರಕಾರ ಮೇ 14ರವರೆಗೆ ಬ್ರೆಜಿಲ್‌ನಲ್ಲಿ ಸುಮಾರು 5 ಲಕ್ಷ ಸಾವುಗಳು ಸಂಭವಿಸಿವೆ. ರಿಯೋ ನಗರದಲ್ಲಿ ಅಷ್ಟು ಪ್ರಮಾಣದ ಮರಣ ಪ್ರಮಾಣ ಪತ್ರಗಳನ್ನು ನೀಡಲಾಗಿದ್ದು ಈ ಬಗ್ಗೆ ಸಂಶಯ ಮೂಡಿಸಿವೆ ಎಂದು ಹೇಳಿದ್ದಾರೆ.