Advertisement

ಕೋವಿಡ್-19 ಸಂಕಷ್ಟಕ್ಕೆ “ಕರುಣಾ ಗೋಡೆ’ಪ್ರಯೋಗ!

08:27 PM Apr 26, 2020 | Sriram |

ಉಡುಪಿ: ಕಷ್ಟದಲ್ಲಿರುವ ಬಡವರಿಗೆ ನೆರವಾ ಗಲೆಂದು ಉಡುಪಿ ಜಿಲ್ಲೆ ಬಸವ ಸಮಿತಿಯು ದಾನಿಗಳ ಮತ್ತು ಬಡವರ ಸೇತುವಾಗಿ “ಕರುಣಾ ಗೋಡೆ’ ಎಂಬ ಯೋಜನೆಯನ್ನು ರೂಪಿಸಿದ್ದು, ನಗರದಲ್ಲಿ ರವಿವಾರದಿಂದ ಆರಂಭಗೊಂಡಿದೆ. ಬಸವ ಜಯಂತಿ ದಿನದಂದೆ ಈ ಯೋಜನೆಗೆ ನಗರದ ಸಿಟಿ ಬಸ್‌ನಿಲ್ದಾಣದ ಬಳಿ ಶಾಸಕ ಕೆ. ರಘುಪತಿ ಭಟ್‌ ಚಾಲನೆ ನೀಡಿದರು.

Advertisement

ಯೋಜನೆ ವಿಶೇಷತೆಯೇನು?
ಬಳಸದೆ ಮನೆಯಲ್ಲಿ ಹಾಳು ಮಾಡುತ್ತಿರುವ ಅಗತ್ಯವಿಲ್ಲದ ವಸ್ತುಗಳಿದ್ದರೆ ಅದನ್ನು ದಾನಿಗಳು ತಂದು ಇಲ್ಲಿ ನೀಡಬಹುದು. ಅದನ್ನು ಅಗತ್ಯವಿದ್ದ ಬಡವರು ಬಳಕೆಗೆ ಕೊಂಡು ಹೋಗಲು ಅವಕಾಶ ನೀಡಲಾಗುತ್ತದೆ. ದಾನಿಗಳ ಮತ್ತು ಬಡವರ ಮಧ್ಯೆ ಸೇತುವಾಗಿ ಫ‌ುಟ್‌ಪಾತ್‌ ಮೇಲೆ ಗೋಡೆಯಲ್ಲಿ ನಿರ್ಮಿಸಿರುವ ರ್ಯಾಪ್‌ ಕೆಲಸ ಮಾಡುತ್ತದೆ.

ದಾನಿಗಳು ವಸ್ತುಗಳನ್ನು ತಂದು ಈ ರ್ಯಾಪ್‌ನಲ್ಲಿರಿಸಿದರೆ ಅಗತ್ಯವಿರುವ ಬಡವರು ತಮಗೆ ಬೇಕಾದ ವಸ್ತುಗಳನ್ನು ರ್ಯಾಪ್‌ನಿಂದ ಪಡೆದುಕೊಂಡು ಹೋಗುವುದಕ್ಕೆ ಅವಕಾಶ ನೀಡುವ ಯೋಜನೆ ಇದಾಗಿದೆ.

ಮೊದಲ ದಿನ ಮುಗಿಬಿದ್ದರು!
ಈಗ ದಿನಸಿ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ದಿನಸಿ ವಸ್ತುಗಳು ಹಾಗೂ ತರಕಾರಿ, ಹಣ್ಣು-ಹಂಪಲುಗಳನ್ನು ಇಡುವುದಕ್ಕೆ ಅವಕಾಶವಿದೆ. ಮುಂದಿನ ದಿನಗಳಲ್ಲಿ ಬಟ್ಟೆ, ಇನ್ನಿತರ ದಿನ ಬಳಕೆಯ ವಸ್ತುಗಳನ್ನು ಜೋಡಿಸಿಟ್ಟು ರ್ಯಾಪ್‌ ಅನ್ನು ಶಾಶ್ವತವಾಗಿ ಬಡವರ ಅನುಕೂಲತೆಗೆ ತೆರೆದಿಡುವ ಚಿಂತನೆ ಬಸವ ಸಮಿತಿಯದ್ದಾಗಿದೆ. ಈಗ ಕೊರೊನಾ ಲಾಕ್‌ಡೌನ್‌ನಿಂದ ದಿನಸಿ, ಹಣ್ಣುಹಂಪಲು ಸಹಿತ ಅಗತ್ಯ ವಸ್ತುಗಳಿಗೆ ಜನ ಮುಗಿ ಬೀಳುತ್ತಿದ್ದಾರೆ. ರವಿವಾರ ಕರುಣಾ ಗೋಡೆ ಮುಂದೆ ನೂರಾರು ಕಾರ್ಮಿಕರು ಅಗತ್ಯ ವಸ್ತುಗಳಿಗೆ ಮುಗಿಬಿದ್ದರು. ಬೆಳಗ್ಗೆ 8ರಿಂದ 11ರ ತನಕ ಮಾತ್ರ ವಸ್ತು ನೀಡಲು ಮತ್ತು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಜನ ಮುಗಿಬಿದ್ದಿದ್ದರಿಂದ ಬಸವ ಸಮಿತಿ ಕಾರ್ಯಕರ್ತರು ವಸ್ತುಗಳನ್ನು ಹಂಚಿ ನಿಯಂತ್ರಿಸಿದರು. ಸಾಮಾಜಿಕ ಅಂತರ ಕಾಯ್ದುಕೊಂಡು ವಸ್ತುಗಳನ್ನು ನೀಡಿದರು.ಬಡವರಿಗೆ ನೆರವಾಗುವ ದೃಷ್ಟಿಯಿಂದ ಕರುಣಾ ಗೋಡೆ ಮಾದರಿಯ ಕಾರ್ಯಕ್ರಮ ಈ ಹಿಂದೆ ಪೇಜಾವರ ಮಠದ ಪರಿಸರದಲ್ಲಿ ಅನುಷ್ಠಾನಗೊಂಡಿದ್ದು ಬಹಳಷ್ಟು ಇದರ ಪ್ರಯೋಜನ ಪಡೆದುಕೊಂಡಿದ್ದರು. ಅನಂತರ ದಿನಗಳಲ್ಲಿ ಕಾರಣಾಂತರಗಳಿಂದ ಇದು ನಿಂತಿದೆ.

ಹಲವು ಮಂದಿಗೆ ಪ್ರಯೋಜನ
ಬಸವ ಸಮಿತಿಯ ಕಾರ್ಯಕರ್ತ ಜೆ.ಕೆ. ಪ್ಲಾಸ್ಟಿಕ್‌ನ ಜನಾರ್ದನ ವಿ. ಕೆಂಬಾವಿ ನೇತೃತ್ವದಲ್ಲಿ ಆರಂಭದ ದಿನ 5 ಮಂದಿ ದಾನಿಗಳು ಹಲವು ರೂಪದ ವಸ್ತುಗಳನ್ನು ನೀಡಿದರು. ರ್ಯಾಪ್‌ನಲ್ಲಿ ವಿವಿಧ ರೂಪಗಳ ವಸ್ತುಗಳನ್ನು ಜೋಡಿಸಿಡಲಾಗಿತ್ತು. ಸುಮಾರು 200ಕ್ಕೂ ಅಧಿಕ ಮಂದಿ ಬಡವರು ತಮಗೆ ಅಗತ್ಯವಿರುವ ದಿನಸಿ, ತರಕಾರಿ, ಹಣ್ಣು ಬಟ್ಟೆಗಳನ್ನು ಅಲ್ಲಿಂದ ಪಡೆದು ಕೊಂಡೊಯ್ದಿದ್ದಾರೆ. ಇದರಲ್ಲಿ ದಿನಸಿ, ತರಕಾರಿ, ಬಟ್ಟೆಗಳು ಸೇರಿದ್ದವು.

Advertisement

ಶಾಶ್ವತವಾಗಿ ಉಳಿಸುವ ಇರಾದೆ
ಮುಂದಿನ ದಿನಗಳಲ್ಲಿ ಬಟ್ಟೆ, ಮಕ್ಕಳ ಸ್ಕೂಲ್‌ ಬ್ಯಾಗ್‌, ಪುಸ್ತಕ, ಛತ್ರಿ(ಕೊಡೆ)ಗಳನ್ನು ರ್ಯಾಪ್‌ನಲ್ಲಿ ಇರಿಸಲು ದಾನಿಗಳಿಗೆ ಅವಕಾಶ ಮಾಡಿಕೊಡುತ್ತೇವೆ. ದುರುಪಯೋಗವಾಗದಂತೆ ಕ್ರಮ ವಹಿಸುತ್ತೇವೆ. ನಿಜಕ್ಕೂ ಅಗತ್ಯವಿರುವ ಬಡವರ ಕೈ ಸೇರಲು ಬೇಕಾದ ಯೋಜನೆಗಳನ್ನು ರೂಪಿಸಿಕೊಳ್ಳುತ್ತೇವೆ.
-ಜನಾರ್ದನ ವಿ. ಕೆಂಬಾವಿ, ಯೋಜನೆಯ ರೂವಾರಿ

Advertisement

Udayavani is now on Telegram. Click here to join our channel and stay updated with the latest news.

Next