ನವದೆಹಲಿ: ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಹಾರ ಸರ್ಕಾರ ರಾಜ್ಯದಲ್ಲಿ ಇನ್ನೂ ಹತ್ತು ದಿನಗಳ ಕಾಲ ಲಾಕ್ ಡೌನ್ ವಿಸ್ತರಿಸುವುದಾಗಿ ಗುರುವಾರ(ಮೇ 13) ತಿಳಿಸಿದೆ.
ಇದನ್ನೂ ಓದಿ:ಆಸ್ಪತ್ರೆಗಳಲ್ಲಿ ತೆರಿಗೆ ವಿನಾಯಿತಿಯೊಂದಿಗೆ ಇಷ್ಟು ಹಣವನ್ನು ನಗದು ರೂಪದಲ್ಲಿ ಪಾವತಿಸಬಹುದು!
ರಾಜ್ಯದಲ್ಲಿನ ಕೋವಿಡ್ 19 ಪರಿಸ್ಥಿತಿ ಕುರಿತು ಸಚಿವರು ಮತ್ತು ಅಧಿಕಾರಿಗಳ ಜತೆ ಪರಿಶೀಲನಾ ಸಭೆಯನ್ನು ನಡೆಸಿದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ನಿರ್ಧಾರವನ್ನು ಘೋಷಿಸಿದ್ದಾರೆ. ನಿಗದಿಯಂತೆ ಮೇ 15ರಂದು ಲಾಕ್ ಡೌನ್ ಮುಕ್ತಾಯವಾಗಲಿದ್ದು, ಇನ್ನು ಮೇ 25ರವರೆಗೂ ಲಾಕ್ ಡೌನ್ ವಿಸ್ತರಣೆಯಾಗಲಿದೆ.
ಇಂದು ಸಚಿವರು ಮತ್ತು ಅಧಿಕಾರಿಗಳ ಜತೆ ರಾಜ್ಯದಲ್ಲಿ ಜಾರಿಗೊಳಿಸಿದ್ದ ಲಾಕ್ ಡೌನ್ ನ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ದು, ಲಾಕ್ ಡೌನ್ ಸೂಕ್ತ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಹತ್ತು ದಿನಗಳ ಕಾಲ ಲಾಕ್ ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ನಿತೀಶ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಸೋಂಕು ನಿಗ್ರಹಕ್ಕಾಗಿ ಈ ಮೊದಲು ಬಿಹಾರ ಸರ್ಕಾರ ಮೇ 15ರವರೆಗೆ ಲಾಕ್ ಡೌನ್ ಜಾರಿಗೊಳಿಸಿತ್ತು. ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಬೇಕು, ಇಲ್ಲದಿದ್ದರೆ ತಾವೇ ಸೂಕ್ತವಾದ ಆದೇಶ ಜಾರಿಗೊಳಿಸುವುದಾಗಿ ಪಾಟ್ನ ಹೈಕೋರ್ಟ್ ಬಿಹಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ ಲಾಕ್ ಡೌನ್ ಘೋಷಿಸಿತ್ತು.