ಹುನಗುಂದ: ಕೋವಿಡ್ 19 ವೈರಸ್ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವ ಜಾಗೃತಿ ಅಭಿಯಾನ ಪಟ್ಟಣದಲ್ಲಿ ನಡೆಯಿತು.
ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಪುರಸಭೆ ಮತ್ತು ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ನಡೆದ ಕೋವಿಡ್ 19 ಜಾಗೃತಿ ಅಭಿಯಾನಕ್ಕೆ ತಹಶೀಲ್ದಾರ್ ಬಸವರಾಜ ನಾಗರಾಳ ಚಾಲನೆ ನೀಡಿದರು.
ತಹಶೀಲ್ದಾರ್, ಸಿಪಿಐ, ಪಿಎಸ್‌ಐ, ವೈದ್ಯಾಧಿಕಾರಿ ಹಾಗೂ ಪುರಸಭೆ ಮುಖ್ಯಾ ಧಿಕಾರಿಗಳಿಗೆ ಸಾರ್ವಜನಿಕರು ಹೂವಿನ ಸಿಂಚನ ಮಾಡಿದರು. ಅವರು ಪ್ರತಿ ವಾರ್ಡ್‌ಗೆ ಆಗಮಿಸುತ್ತಿದ್ದಂತೆ ಚಪ್ಪಾಳೆ ತಟ್ಟಿ ಅವರ ಒಂದು ತಿಂಗಳ ಕಾಲ ತಮ್ಮ ಕುಟುಂಬವನ್ನು ಮರೆತು ಸಾರ್ವಜನಿಕ ಜೀವನಕ್ಕಾಗಿ ಶ್ರಮಪಟ್ಟ ಅವರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಚಪ್ಪಾಳೆ: ಕೋವಿಡ್ 19 ಜಾಗೃತಿ ಜಾಥಾ ಅಭಿಯಾನವು ನಗರದ ಗಲ್ಲಿ ಗಲ್ಲಿಗೆ ಪ್ರವೇಶಿಸುತ್ತಿದ್ದಂತೆ ಜನರು ಸಾಮಾಜಿಕ ಅಂತರದಲ್ಲಿ ನಿಂತುಕೊಂಡು ಚಪ್ಪಾಳೆ ಹಾಕಿ ಹೂವು ಸಿಂಪಡಿಸುವ ಮೂಲಕ ಜಾಥಾಕ್ಕೆ ಶುಭ ಹಾರೈಸಿದರು. ಜಗತ್ತನ್ನೇ ಕಾಡುತ್ತಿರುವ ಕೋವಿಡ್ 19 ವೈರಸ್ ರೋಗದ ಬಗ್ಗೆ ಯಮನ ವೇಷಧಾರಿ ಶೇಖರ ಬಡಿಗೇರ, ಕಿಂಕರರಾದ ರವಿ ಕಂಬಾರ ಮತ್ತು ಮಹಾಬಳೇಶ ಬಡಿಗೇರ ವೇಷ ಧರಿಸಿ ಸಾರ್ವಜನಿಕರಲ್ಲಿ ಕೋವಿಡ್ 19 ಜಾಗೃತಿ ಮೂಡಿಸಿದರು.
ತಿಂಗಳಿನಿಂದ ಸತತವಾಗಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ತಾಲೂಕಿನಾದ್ಯಂತ ಕೋವಿಡ್ 19 ವೈರಸ್ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಂಡಿರುವ ತಹಶೀಲ್ದಾರ್ ಬಸವರಾಜ ನಾಗರಾಳ, ಸಿಪಿಐ ಅಯ್ಯನಗೌಡ ಪಾಟೀಲ, ಪಿಎಸ್‌ಐ ಪುಂಡಲೀಕ ಪಟಾತರ, ವೈದ್ಯಾಧಿಕಾರಿ ಪ್ರಶಾಂತ ತುಂಬಗಿ, ಮುಖ್ಯಾಧಿಕಾರಿ ಐ.ಕೆ. ಗುಡದಾರಿ ಅವರನ್ನು ಅಭಿನಂದಿಸಿದರು. ಜಾಗೃತಿ ಅಭಿಯಾನ ಪ್ರಮುಖ ಬೀದಿಗಳಲ್ಲಿ ಜರುಗಿತು.