Advertisement

ಪಿಯು ಮೌಲ್ಯಮಾಪಕರಿಗೆ ಕೋವಿಡ್-19 ಆತಂಕ

09:06 AM May 19, 2020 | Sriram |

ಮಂಗಳೂರು: ದ್ವಿತೀಯ ಪಿಯುಸಿಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಆದರೆ ಮೌಲ್ಯಮಾಪನ ಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ತೆರಳಬೇಕಾಗಿರುವ ಉಪನ್ಯಾಸಕರಲ್ಲಿ ಆತಂಕ ಆವರಿಸಿದೆ.

Advertisement

ಇಂಗ್ಲಿಷ್‌ ಹೊರತುಪಡಿಸಿ ಇತರ ಪತ್ರಿಕೆಗಳ ಮೌಲ್ಯಮಾಪನ ಶೀಘ್ರದಲ್ಲೇ ನಡೆಯಲಿದ್ದು ಈಗಾಗಲೇ ಮೌಲ್ಯಮಾಪನ ಶಿಬಿರಗಳ ಮೇಲ್ವಿಚಾರಕರಿಗೆ ಸರಕಾರ ಜ್ಞಾಪನಾ ಪತ್ರಗಳನ್ನು ಕಳುಹಿಸಿಕೊಟ್ಟಿದೆ. ಆದರೆ ಸದ್ಯ ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿನ ಮೌಲ್ಯಮಾಪನ ಕೇಂದ್ರಗಳಿಗೆ ತೆರಳಬೇಕಾಗಿರುವ ಉಪನ್ಯಾಸ ಕರು ಆತಂಕ, ಗೊಂದಲದಲ್ಲಿದ್ದಾರೆ.

ಹಿಂದಿ, ಸಂಸ್ಕೃತ, ಸಂಖ್ಯಾಶಾಸ್ತ್ರ, ಕಂಪ್ಯೂಟರ್‌ ಸಾಯನ್ಸ್‌ ಮೊದಲಾದ ಕೆಲವು ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರ ಬೆಂಗಳೂರಿನಲ್ಲಿ ಮಾತ್ರ ಇರುತ್ತದೆ. ಪ್ರತಿ ವರ್ಷ ಈ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪಕರು ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಹೋಗುತ್ತಿದ್ದರು. ಆದರೆ ಈ ಬಾರಿ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳುವುದು ಹೇಗೆ ಎಂಬ ಚಿಂತೆ ಉಪನ್ಯಾಸಕರದ್ದು. ಹೋಗುವುದು ಹೇಗೆ,ಸುರಕ್ಷೆ ಏನು, ಉಳಿದುಕೊಳ್ಳುವುದು ಎಲ್ಲಿ ಎಂಬಿತ್ಯಾದಿ ಆತಂಕ ಅವರಲ್ಲಿದೆ. ಅಲ್ಲದೆ ಮೌಲ್ಯ ಮಾಪನ ಮುಗಿಸಿ ಮರಳಿದ ಮೇಲೆ ಕ್ವಾರಂಟೈನ್‌ ಇದೆಯೇ ಎಂಬ ಪ್ರಶ್ನೆಗಳನ್ನು ಕೂಡ ಉಪನ್ಯಾಸಕರು ಮುಂದಿಟ್ಟಿದ್ದಾರೆ.

ಕೊನೆಯ ಕ್ಷಣಕ್ಕೆ ನೋಟಿಸು
ಸಾಮಾನ್ಯವಾಗಿ ಮೌಲ್ಯಮಾಪನದ ನಿಗದಿತ ದಿನಾಂಕಕ್ಕಿಂತ ಒಂದೆರಡು ದಿನಗಳ ಮೊದಲು ಮಾತ್ರ ಆಯಾ ಕಾಲೇಜುಗಳಿಗೆ ನೋಟಿಸ್‌ ಬರುತ್ತದೆ. ಸರಕಾರ ಟಿಎ / ಡಿಎ ಕೊಡುತ್ತದೆ. ಆದರೆ ಉಳಿದುಕೊಳ್ಳುವ ವ್ಯವಸ್ಥೆ ನಾವೇ ಮಾಡಬೇಕಿರುತ್ತದೆ. ಈ ಬಾರಿ ಆತಂಕದ ಸ್ಥಿತಿ ಇರುವುದರಿಂದ ಗೊಂದಲವಿದೆ. ವಿವಿಧ ವಿಷಯಗಳು ಸೇರಿದರೆ ಒಂದೊಂದು ಪ.ಪೂ. ಕಾಲೇಜುಗಳಿಂದ ತಲಾ 2-3 ಉಪನ್ಯಾಸಕರು ಸೇರಿದಂತೆ ಪ್ರತಿ ಜಿಲ್ಲೆಯಿಂದ ಸುಮಾರು 100 ಮಂದಿ ಬೆಂಗಳೂರಿಗೆ ತೆರಳಬೇಕಾಗುತ್ತದೆ ಎನ್ನುತ್ತಾರೆ ಉಪನ್ಯಾಸಕರು.

ಅಂತಿಮ ನಿರ್ಧಾರವಾಗಿಲ್ಲ
ಸದ್ಯ ಮೌಲ್ಯಮಾಪನ ಕೇಂದ್ರಗಳ ಮೇಲ್ವಿಚಾರಕರಿಗೆ (ಶಿಬಿರಾಧಿಕಾರಿ) ಮಾತ್ರ ನೋಟಿಸ್‌ ಬಂದಿದೆ. ಅವರು ಮೌಲ್ಯಮಾಪನ ಕೇಂದ್ರಗಳಿಗೆ ತೆರಳಿ ಸರಕಾರಕ್ಕೆ ಮಾಹಿತಿ ನೀಡಿದ ಅನಂತರ ಸರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಮೌಲ್ಯಮಾಪನಕ್ಕೆ ತೆರಳುವ ಉಪನ್ಯಾಸಕರಿಗೆ ಸರಕಾರ ಅಗತ್ಯ ವ್ಯವಸ್ಥೆ ಮಾಡಬಹುದು.
– ಮಹಮ್ಮದ್‌ ಇಮಿ¤ಯಾಜ್‌
ಉಪನಿರ್ದೇಶಕರು, ಪ.ಪೂ. ಶಿಕ್ಷಣ ಇಲಾಖೆ, ದ.ಕ

Advertisement

ಪೋಷಕರಿಗೂ ಆತಂಕ
ಹಿಂದಿಯಂತಹ ಕೆಲವೊಂದು ವಿಷಯಗಳ ಮೌಲ್ಯಮಾಪನ ಕೇಂದ್ರ ಬೆಂಗಳೂರಿನಲ್ಲಿ ಮಾತ್ರ ಇದೆ. ನಾವು ಅಲ್ಲಿಗೆ ಹೋದರೂ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ, ಸುರಕ್ಷತೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೆಚ್ಚಿನ ಹೊಟೇಲ್‌ಗ‌ಳನ್ನು ವಿದೇಶೀಯರು, ಪರರಾಜ್ಯದವರ ಕ್ವಾರಂಟೈನ್‌ಗೆ ಮೀಸಲಿಡಲಾಗಿದೆ. ಉಪನ್ಯಾಸಕರಿಗೆ ಮಾತ್ರವಲ್ಲದೆ, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿಯೂ ಆತಂಕವಿದೆ.
– ಓರ್ವ ಉಪನ್ಯಾಸಕ, ಪ.ಪೂ. ಕಾಲೇಜು, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next