ಒಂದೊಮ್ಮೆ ತಿಂಗಳಿಗೆ ಎರಡು ಮೂರರಂತೆ ಬಿಡುಗಡೆ ಆಗುತ್ತಿದ್ದ ತುಳು ಸಿನೆಮಾಗಳ ಕೋಸ್ಟಲ್ ವುಡ್ ಸದ್ಯ ಕೋವಿಡ್-19 ಕಾರಣದಿಂದ ಅಕ್ಷರಶಃ ತತ್ತರಿಸಿಹೋಗಿದೆ. ಸದಾ ಬ್ಯುಸಿ ಇರುತ್ತಿದ್ದ ಕಲಾವಿದರು ಈಗ ಸಿನೆಮಾ ಇಲ್ಲದೆ ಕಂಗಾಲಾಗಿದ್ದಾರೆ. ಮುಂದೆ ಏನು? ಯಾವಾಗ? ಹೇಗೆ? ಎಂಬುದೇ ತೋಚದೆ ಗೊಂದಲದಲ್ಲಿದ್ದಾರೆ.
ಹೌದು; ಕೋವಿಡ್ ಸೋಂಕು ಎಲ್ಲಾ ಕ್ಷೇತ್ರಗಳಿಗೂ ಹೊಡೆತ ನೀಡಿದೆ. ಯಾರೂ ಊಹಿಸದಷ್ಟರ ಮಟ್ಟಿಗೆ ಏಟು ಬಿದ್ದಿದೆ. ಈ ಪೈಕಿ ಕೆಲವರಿಗೆ ಅನ್ ಲಾಕ್ ಅಗಿ ಕೊಂಚ ರಿಲೀಫ್ ಆಗಿದ್ದರೆ, ಮತ್ತೂ ಕೆಲವರಿಗೆ ರಿಲೀಫ್ ಸಿಗಲೇ ಇಲ್ಲ. ಇದರಲ್ಲಿ ಸಿನೆಮಾವೂ ಸೇರಿದೆ.
ಎಲ್ಲಾ ಕ್ಷೇತ್ರದ ಸಿನೆಮಾಕ್ಕೆ ಹೊಡೆತ ಬಿದ್ದ ಹಾಗೆಯೇ ಕೋಸ್ಟಲ್ ವುಡ್ ಸಿನೆಮಾಗಳಿಗೆ ಇದರ ಏಟು ಕೊಂಚ ಜಾಸ್ತಿಯೇ ಬಿದ್ದಿದೆ. ಯಾಕೆಂದರೆ, ತುಳು ಸಿನೆಮಾವನ್ನೇ ನಂಬಿದ ಅದೆಷ್ಟೋ ಕಲಾವಿದರು, ತಂತ್ರಜ್ಞರು ಈಗ ಕೆಲಸವಿಲ್ಲದೆ ಪರಿತಪಿಸುವಂತಾಗಿದೆ.
ಈ ಮಧ್ಯೆ ತುಳು ಸಿನೆಮಾದಲ್ಲಿ ಇರುವವರ ಪೈಕಿ ಬಹುತೇಕ ಜನ ತುಳು ನಾಟಕದಲ್ಲಿ ತೊಡಗಿಸಿಕೊಂಡವರು. ಸದ್ಯ ನಾಟಕ ಪ್ರದರ್ಶನಕ್ಕೂ ಅವಕಾಶವಿಲ್ಲದೆ ಕಲಾವಿದರ ಪಾಡು ಹೇಳತೀರದಾಗಿದೆ.
ಸದ್ಯ ಸ್ಥಳೀಯ ವಾಹಿನಿಗಳ ಮೂಲಕ ಅರವಿಂದ ಬೋಳಾರ್ ಸಹಿತ ಹಲವು ಕಲಾವಿದರು ಕಾಮಿಡಿ ಕಾರ್ಯಕ್ರಮಗಳ ಮೂಲಕ ಇದೀಗ ಮನೆಮಾತಾಗಿದ್ದಾರೆ. ತುಳು ಸಿನೆಮಾ ನೋಡಲು ಆಗದ ಕಾರಣದಿಂದ ಪ್ರೇಕ್ಷಕರು ಇಂತಹ ಕಾರ್ಯಕ್ರಮ ವೀಕ್ಷಣೆಗೆ ಮೊರೆಹೋಗಿದ್ದಾರೆ.
ಅಂದಹಾಗೆ, ತುಳುವಿನಲ್ಲಿ ಕಾರ್ನಿಕೊದ ಕಲ್ಲುರ್ಟಿ, ಇಂಗ್ಲೀಷ್ ಸೇರಿದಂತೆ ಹಲವು ಸಿನೆಮಾಗಳು ರಿಲೀಸ್ ಹಂತದಲ್ಲಿರುವಾಗಲೇ ಲಾಕ್ ಡೌನ್ ಆಗಿತ್ತು. ಸದ್ಯ ಬಿಡುಗಡೆಯ ಪಟ್ಟಿಗೆ ಸುಮಾರು 10 ಸಿನೆಮಾಗಳು ಸೇರಿವೆ. ಹೀಗಾಗಿ ಥಿಯೇಟರ್ ತೆರೆದರೆ ರಿಲೀಸ್ ಕಥೆ ಹೇಗಿರಬಹುದು ಎಂಬ ಪ್ರಶ್ನೆ ಇದೀಗ ಸೃಷ್ಟಿಯಾಗಿದೆ.
ಈ ಮಧ್ಯೆ ಜೀಟಿಗೆ, ಗುಲಾಬ್ ಜಾಮೂನ್ ಸೇರಿದಂತೆ ಕೆಲವು ಸಿನೆಮಾ ಸೆಟ್ಟೇರುವ ನಿರೀಕ್ಷೆಯಲ್ಲಿದೆ.